Advertisement

ESI; ಖಾಸಗಿ ಆಸ್ಪತ್ರೆಯಲ್ಲಿನ ಜನರಲ್‌ ಸೇವೆ ಸ್ಥಗಿತ: ಯಾವುವು ಲಭ್ಯ?

10:11 PM Dec 07, 2024 | Team Udayavani |

ಬೆಂಗಳೂರು: ಸರಕಾರ ಮಾಡಿದ ತಪ್ಪಿನಿಂದ ಈಗ ಕಾರ್ಮಿಕರು ಶಿಕ್ಷೆ ಅನುಭವಿಸುವಂತಾಗಿದೆ. ಅನಾರೋಗ್ಯಕ್ಕೆ ತುತ್ತಾದಾಗ ಕೈ ಹಿಡಿಯುವ ಕಾರ್ಮಿಕ ವಿಮಾ ಯೋಜನೆ(ಇಎಸ್‌ಐ)ಯ ಜನರಲ್‌ ಸೇವೆಯನ್ನು ಸರಕಾರ ನವೀಕರಣ ಮಾಡದ ಪರಿಣಾಮ ಕಾರ್ಮಿಕರು ಸಾವಿರಾರು ರೂ. ವ್ಯಯಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಕಾರ್ಮಿಕರು ಮತ್ತವರ ಕುಟುಂಬದ ಆರೋಗ್ಯ ರಕ್ಷಣೆಯೇ ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲ ಉದ್ದೇಶವನ್ನು ಸರಕಾರ ಮರೆತಂತಿದೆ. ಕಾರ್ಮಿಕ ವಿಮಾ ಯೋಜನೆಯಡಿಯಲ್ಲಿ ನೋಂದಾ ಯಿ ತ ಖಾಸಗಿ ಆಸ್ಪತ್ರೆಗಳೊಂದಿಗೆ ಜನರಲ್‌ ಚಿಕಿತ್ಸೆ ನೀಡಲು ಮಾಡಿಕೊಂಡ ಒಪ್ಪಂದ ಅವಧಿ ಇದೀಗ ಮುಕ್ತಾಯವಾಗಿದ್ದು, ಇನ್ನೂ ಕೂಡ ಈ ಒಪ್ಪಂದ ನವೀಕರಣಕ್ಕೆ ಸರಕಾರ ಮುಂದಾಗಿಲ್ಲ. ಇದರ ಪರಿಣಾಮ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿನ ಜನರಲ್‌ ಆರೋಗ್ಯ ಸೇವೆ ಸ್ಥಗಿತಗೊಂಡಿವೆ. ಇದು ಕಾರ್ಮಿಕರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಪಡಿಸಿದೆ.

ಕಾರ್ಮಿಕ ಇಲಾಖೆಯು ಇಎಸ್‌ಐ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಜನರಲ್‌ ಹಾಗೂ ಸೂಪರ್‌ ಸ್ಪೆಷಾಲಿಟಿ ಆರೋಗ್ಯ ಸೇವೆ ಪಡೆದುಕೊಳ್ಳಲು ಎಂಒಯು ಮಾಡಿಕೊಂಡಿದೆ. 2023ರಲ್ಲಿ ಮಾಡಿಕೊಂಡ ಜನರಲ್‌ ಆರೋಗ್ಯ ಸೇವೆ ಒಪ್ಪಂದ 2024ರ ನ. 30ಕ್ಕೆ ಅಂತ್ಯವಾಗಿದ್ದು, ಎಂಒಯು ಮರುನವೀಕರಣ ಪ್ರಕ್ರಿಯೆಗಳು ಪ್ರಾರಂಭವಾಗಿಲ್ಲ. ಆದರೆ ತಡವಾಗಿ ಒಪ್ಪಂದ ಮಾಡಿಕೊಂಡ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಜನರಲ್‌ ಸೇವೆಗಳು ಲಭ್ಯವಿದೆ. ಇನ್ನು ಸೂಪರ್‌ ಸ್ಪೆಷಾ ಲಿಟಿ ಆರೋಗ್ಯ ಸೇವೆ ಡಿ. 31ಕ್ಕೆ ಅಂತ್ಯವಾಗಲಿದ್ದು, ಮರು ನವೀಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇಲಾಖೆಯು ಆಸ್ಪತ್ರೆಗಳ ಜತೆಗೆ ಮಾತುಕತೆ ನಡೆಸಿದೆ.

ಇಎಸ್‌ಐ ಮೊತ್ತ ಕಡಿತ
ರಾಜ್ಯದಲ್ಲಿ ಕಾರ್ಮಿಕ ವಿಮಾ ಯೋಜನೆಯಡಿ ಕೋಟ್ಯಂತ ರ‌ ಕಾರ್ಮಿಕರ ವೇತನದಿಂದ ಮಾಸಿಕ ಇಎಸ್‌ಐ ಮೊತ್ತ ಕಡಿತವಾಗುತ್ತಿದೆ. 16 ಸಾವಿರ ವೇತನ ಪಡೆಯುವ ಓರ್ವ ಕಾರ್ಮಿಕ ಪ್ರತಿ ತಿಂಗಳು 124 ರೂ. ವನ್ನು ಇಎಸ್‌ಐಗೆ ಪಾವತಿ ಮಾಡುತ್ತಿದ್ದಾರೆ. ಈ ಮೊತ್ತದ ಮೂಲಕ ಸರಕಾರವು ಕಾರ್ಮಿಕರಿಗೆ ಮತ್ತವರ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದೆ. ಆದರೆ ಇದೀಗ ಜನರಲ್‌ ಸೇವೆ ಖಾಸಗಿ ಆಸ್ಪತ್ರೆಯಲ್ಲಿ ಸ್ಥಗಿತಗೊಳಿಸಿರುವುದರಿಂದ ಹೆರಿಗೆ, ಇಎನ್‌ಟಿ, ಮೂಳೆಗೆ ಸಂಬಂಧಿಸಿದ ಚಿಕಿತ್ಸೆಗೆ ಸಂಪೂರ್ಣ ವೆಚ್ಚವನ್ನು ಕಾರ್ಮಿಕರೇ ಭರಿಸುವ ಪರಿಸ್ಥಿತಿ ಎದುರಾಗಿದೆ.

ಜನರಲ್‌ ಸೇವೆ ಯಾವುವು?
ಕಾರ್ಮಿಕ ವಿಮಾ ಯೋಜನೆಯಡಿ ಜನರಲ್‌ ಹಾಗೂ ಸೂಪರ್‌ ಸ್ಪೆಷಾ ಲಿಟಿ ಆರೋಗ್ಯ ಸೇವೆಗಳನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಇಎಸ್‌ಐ ಆಸ್ಪತ್ರೆಯಿಂದ ರೆಫ‌ರಲ್‌ ಲೆಟರ್‌ ಪಡೆದಿರುವವರಿಗೆ ಖಾಸಗಿಯಲ್ಲಿ ಜನರಲ್‌ ಆರೋಗ್ಯ ಸೇವೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಹೆರಿಗೆ, ಇಎನ್‌ಟಿ, ಮೂಳೆ ಸೇರಿ ಜನರಲ್‌ ಮೆಡಿಸಿನ್‌ ಸೇವೆಗಳು ನಗದು ರಹಿತವಾಗಿ ಕಾರ್ಮಿಕರಿಗೆ ಲಭ್ಯವಾಗುತ್ತಿತ್ತು. ಇನ್ನು ಸೂಪರ್‌ ಸ್ಪೆಷಾಲಿಟಿಯಲ್ಲಿ ಬ್ರೈನ್‌, ನ್ಯೂರೋ, ಕಿಡ್ನಿ, ಹೃದಯ ಸಂಬಂಧಿಸಿದ ಚಿಕಿತ್ಸೆಯನ್ನು ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next