ಚಿಕ್ಕಮಗಳೂರು: ಚುನಾವಣೆ ನಡೆಯುವ ಮೊದಲೇ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಚರ್ಚೆ ಜೋರಾಗಿದೆ. ಅಧಿಕಾರಕ್ಕೇರುವ ಮುನ್ನವೇ ಸಿಎಂ ಕೂಗು ಕೇಳಿ ಬರುತ್ತಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಸಿಟಿ ರವಿ ಅವರು ಮುಂದಿನ ಸಿಎಂ ಆಗಲಿ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟದಲ್ಲಿ ನಡೆದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಿಟಿ ರವಿ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಅವರನ್ನು ಕರ್ನಾಟಕದ ಮುಂದಿನ ಸಿಎಂಯನ್ನಾಗಿ ಮಾಡಬೇಕೆಂದಿದ್ದಾರೆ.
ಇದನ್ನೂ ಓದಿ: Operation Kaveri: ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭ
ಇಷ್ಟು ದಿನ ಕಾಂಗ್ರೆಸ್ ನಲ್ಲಿ ಓಡಾಡುತ್ತಿದ್ದ ಸಿಎಂ ಕೂಗು ಇದೀಗ ಬಿಜೆಪಿಯಲ್ಲೂ ಕೇಳಿ ಬಂದಿದೆ. ಬಹಿರಂಗ ಸಭೆಯಲ್ಲೇ ಸಿ.ಟಿ.ರವಿ ಪರ ಈಶ್ವರಪ್ಪ ಅವರು ಒಲವು ತೋರಿದ್ದು, ಇದೀಗ ಈ ಸಂಬಂಧಿತ ವಿಡಿಯೋ ಸದ್ದು ಮಾಡುತ್ತಿದೆ.
ನಿನ್ನೆಯಷ್ಟೇ ಸಿಟಿ ರವಿ ಅವರು ಮೈಸೂರಿನಲ್ಲಿ ಮಾತನಾಡುವ ವೇಳೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಸದ್ಯ ಈಶ್ವರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.