ಮಂಗಳೂರು: ನಾನು ಮುಸ್ಲಿಮರ ಮತಗಳು ಬೇಡವೇ ಬೇಡ ಎಂದಿಲ್ಲ, ರಾಷ್ಟ್ರೀಯವಾದಿ ಮುಸ್ಲಿಮರ ಮತ ಇರಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಅವರು, ಲೌಡ್ ಸ್ಪೀಕರ್ ನಲ್ಲಿ ಅಝಾನ್‌ನಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ಅದರ ವಿರುದ್ಧವೇ ಇದೆ. ಮುಸ್ಲಿಂ ನಾಯಕರು ಈ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಮುಸ್ಲಿಮರ ಅಝಾನ್ ಕುರಿತು ಹೇಳಿಕೆ ವಿವಾದವಲ್ಲ, ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಅಲ್ಲಾಹುವಿನ ಬಗ್ಗೆ ಅವಹೇಳನ ಮಾಡಿಲ್ಲ. ಆದರೆ ಅಝಾನ್ ವಿಚಾರದಲ್ಲಿ ಯಾರಾದರೂ ಮಾತನಾಡಲೇಬೇಕಿತ್ತು, ಮಾತನಾಡಿದ್ದೇನೆ. ಅದು ಶ್ರೀಸಾಮಾನ್ಯನ ಅನಿಸಿಕೆ, ನಾನು ಅದನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮಾತನಾಡಿ ವಿವಾದ ಮಾಡುವ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದು ಸ್ಪಷ್ಟನೆ ಕೊಟ್ಟ ಅವರು, ಗೋಹತ್ಯೆ ತಡೆ ಕಾಯ್ದೆ, ಮತಾಂತರ ತಡೆ ಕಾಯ್ದೆ, ತ್ರಿವಳಿ ತಲಾಖ್ ರದ್ದು ಇತ್ಯಾದಿಗಳೆಲ್ಲವೂ ನಮ್ಮ ಸರಕಾರದ ಸಾಧನೆಗಳು ಎಂದರು.
ಎಲ್ಲಾ ರಾಷ್ಟ್ರೀಯವಾದಿ ಮುಸ್ಲಿಮರೂ ಅದನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಇಂತಹ ವಿಚಾರದಲ್ಲಿ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ವಂಚನೆ ಮಾಡುತ್ತಾ ಬಂದಿದೆ ಎಂದರು.
ಅದಕ್ಕಾಗಿಯೇ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ಕರ್ನಾಟಕದಲ್ಲಿ ಕುಟುಕುಟು ಅನ್ನುತ್ತಿದೆ. ಈ ಚುನಾವಣೆಯಲ್ಲಿ ಅದೂ ಹೋಗಲಿದೆ ಎಂದು ಹೇಳಿದರು.