ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚುವ ವರೆಗೂ ಕಾಂಗ್ರೆಸ್ ನವರು ಹೇಳಿಕೆ ಕೊಡ್ತಾನೆ ಇರುತ್ತಾರೆ. ಪೇ ಸಿಎಂ ಬಳಿಕ ಈಗ ಸೇ ಸಿಎಂ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಸೇ ಸಿಎಂ ಅಭಿಯಾನ ವಿಚಾರವಾಗಿ ಹೇಳಿದರು.
ಅವರಿಗೆ ಜೀವನದಲ್ಲಿ ಹೋರಾಟ ಮಾಡೋದು ಗೊತ್ತಿಲ್ಲ. ಏನೋ ಒಂದು ಹೇಳಿಕೆ ಕೊಟ್ಟು ಮಾಧ್ಯಮಗಳಲ್ಲಿ ಅವರ ಹೇಳಿಕೆ ಬಂದರೆ ಕಾಂಗ್ರೆಸ್ ನವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅದಕ್ಕಾಗಿ ಹೀಗೆಲ್ಲಾ ಮಾಡುತ್ತಿರುತ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದರು.
ಕಾಂಗ್ರೆಸ್ ಇರೋದೆ ಅಪಾದನೆ ಮಾಡೋದಕ್ಕೆ, ಹೋರಾಟ ಮಾಡುವುದಕ್ಕೆ ಅಲ್ಲ. ರಾಹುಲ್ ಗಾಂಧಿ ಬರದೇ ಇದ್ದಿದ್ದರೇ ಇವರು ಪಾದಯಾತ್ರೆ ಮಾಡ್ತಾ ಇರಲಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ನಮ್ ಕಡೆಯವರಿಗೆ ಸೀಟ್ ಕೊಡಬೇಕು. ಮಂತ್ರಿ ಮಾಡ್ಬೇಕು ಎಂಬ ಕಲ್ಪನೆಯಲ್ಲಿ ಇದ್ದಾರೆ. ಅವರೆಲ್ಲರೂ ಗೆಲ್ಲುವ ಪ್ರಶ್ನೆಯಿಲ್ಲ. ಯಾವ ಕಾರಣಕ್ಕೂ ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಅವರ ಯಾವುದೇ ಹೇಳಿಕೆಗೆ ಬೆಲೆ ಇಲ್ಲ. ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಅವರ ಅಧಿಕಾರ ಅವಧಿಯಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ, ಅವರು ಹೇಳಿದ್ದ ಎಸ್ಸಿ-ಎಸ್ಟಿ ಮೀಸಲಾತಿ ಯಾಕೇ ಮಾಡಲಿಲ್ಲ, ಹಿಂದುಳಿದ ವರ್ಗದ ಕಾಂತರಾಜ್ ವರದಿ ಯಾಕೆ ಮಂಡನೆ ಮಾಡಲಿಲ್ಲ, ಇವೆಲ್ಲದಕ್ಕೆ ಮೊದಲು ಅವರು ಉತ್ತರ ಕೊಡಲಿ, ಆಮೇಲೆ ನಾನು ಮಾತನಾಡುತ್ತೇನೆ ಎಂದರು.
ನೂರು ಯೋಜನೆ ಇದೆ ಎಂದು ಬರೀ ಘೋಷಣೆಯನಷ್ಟೇ ಮಾಡುವುದು. ಒಂದೂ ಕಾರ್ಯಗತ ಮಾಡಲಿಲ್ಲ. ಬಿಜೆಪಿ ಮೇಲೆ ಆಪಾದನೆ ಮಾಡುತ್ತಾರೆ. ಚುನಾವಣೆ ಬರಲಿ ಕಾಯುತ್ತಿದ್ದೇನೆ. ಯಾರು ಗೆಲ್ತಾರೆ ನೋಡೋಣ ಎಂದು ಹೇಳಿಕೆ ವ್ಯಕ್ತಪಡಿಸಿದರು.