ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಈ ಬಾರಿ ಬಿಜೆಪಿಯವರೇ ಸೋಲಿಸುತ್ತಾರೆ. ಈ ಬಗ್ಗೆ ನಮಗೆ ಬಿಜೆಪಿ ಮೂಲದಿಂದಲೇ ಮಾಹಿತಿ ಇದ್ದು, ಈಶ್ವರಪ್ಪನವರೇ ರಾಘವೇಂದ್ರನ ಸೋಲಿಗೆ ಪಣ ತೊಟ್ಟಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಶನಿವಾರ ರಾತ್ರಿ ಸಮಾಲೋಚನೆ ನಡೆಸುತ್ತಿದ್ದ ಸಮಯದಲ್ಲಿ ಬಿಜೆಪಿಯವರೇ ರಾಘವೇಂದ್ರನನ್ನು ಸೋಲಿಸಲು ಮುಂದಾಗಿರುವುದು ತಮಗೆ ತಿಳಿದು ಬಂದಿದೆ ಎಂದರು.
“ಬಿಜೆಪಿಯ ಪವರ್‌ಫುಲ್ ಲೀಡರ್ ಆಗಿರುವ ಈಶ್ವರಪ್ಪನವರು ರಾಘವೇಂದ್ರನನ್ನು ಸೋಲಿಸಲು ನಿರ್ಣಯ ಮಾಡಿದ್ದಾರೆ. ಈ ಬಗ್ಗೆ ನನಗೆ ಬಿಜೆಪಿ ಮೂಲಗಳಿಂದಲೇ ಫೋನ್‌ಗಳೂ ಬಂದಿವೆ. ಅವರ ಹೆಸರುಗಳನ್ನು ಈಗಲೇ ಹೇಳುವುದಿಲ್ಲ. ಈಶ್ವರಪ್ಪ ಹಾಗೂ ಬಿ.ಎಸ್.ಯಡ್ಡಿಯೂರಪ್ಪ ಮಧ್ಯೆ ಉತ್ತಮ ಬಾಂಧವ್ಯ ಇಲ್ಲ.
ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಹಲವು ನೀರಾವರಿ ಯೋಜನೆಗಳಿಗೆ ಬಿಎಸ್‌ವೈ ಅಡ್ಡಗಾಲು ಹಾಕಿದ್ದರು. ಬಂಗಾರಪ್ಪನವರ ನಾನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಲ್ಲಿ ಈಶ್ವರಪ್ಪಗೆ ಕ್ರೆಡಿಟ್ ಹೋಗುತ್ತದೆಂಬ ಕಾರಣಕ್ಕೆ ಯೋಜನೆಗಳಿಗೆ ಅಡ್ಡಿಪಡಿಸಿದ್ದರು. ಈಶ್ವರಪ್ಪನವರೇ ಹಲವು ಬಾರಿ ನನ್ನ ಬಳಿ ಈ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು ಎಂದು ತಿಳಿಸಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಈಶ್ವರಪ್ಪಗೆ ಟಿಕೆಟ್ ಸಿಗುವುದು ಕಷ್ಟವಾಗಿತ್ತು. ಆ ವಯ್ಯ, ಕಷ್ಟಪಟ್ಟು ಟಿಕೆಟ್ ತಗೊಂಡು ಗೆದ್ದಿದ್ದಾರೆ. ಆ ಸಂದರ್ಭದಲ್ಲೇ ಈಶ್ವರಪ್ಪ ಗರಂ ಆಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಅವರೇನು ರೇವಣ್ಣ ವಿರುದ್ಧ ಕಟ್ಟಿದ್ರಾ….? ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದು, ಯಡಿಯೂರಪ್ಪ ವಿರುದ್ಧ. ಈ ಬಾರಿ ಅವರೇ, ರಾಘವೇಂದ್ರನನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.
ಮೈತ್ರಿ ಪಕ್ಷಗಳಿಗಿಂತ ಹೆಚ್ಚಾಗಿ ರಾಘವೇಂದ್ರನನ್ನು ಸೋಲಿಸಲು ಬಿಜೆಪಿ ಮುಖಂಡರೇ ತಯಾರಾಗಿದ್ದಾರೆ. ಅವರ ಹೆಸರುಗಳನ್ನು ಸಮಯ ಬಂದಾಗ ತಿಳಿಸುತ್ತೇನೆ. ನೀವು ಏನು ಮಾಡಬೇಕೋ ಅದನ್ನು ಮಾಡಿ. ಒಳಗೊಳಗೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೆವೆ ಎಂದು ನನ್ನ ಬಳಿ ಖಾಸಗಿಯಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಕುರುಬ ಸಮಾಜಕ್ಕೆ ಸೀಟು ಕೊಟ್ಟಿಲ್ಲ ಎಂದು ಈಶ್ವರಪ್ಪರಿಗೆ ಸಿಟ್ಟಿದೆ. ಈಶ್ವರಪ್ಪನವರು, ಮುಸಲ್ಮಾನರಿಗೆ ಸೀಟು ಕೊಡದೇ ಇರುವ ಬಗ್ಗೆ ಹೇಳಿಕೆ ನೀಡಿದ್ದರು. ಆ ಹೇಳಿಕೆಯಲ್ಲೂ ಒಳ ಮರ್ಮ ಇದೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ ಎಂದರು.