Advertisement

ವರಿಷ್ಠರಿಗೆ ಸೆಡ್ಡು ಹೊಡೆದ ಈಶ್ವರಪ್ಪ: ಬ್ರಿಗೇಡ್‌ ಚಟುವಟಿಕೆ ಚುರುಕು 

10:21 AM May 02, 2017 | |

ರಾಯಚೂರು: ಪಕ್ಷದ ಚಟುವಟಿಕೆ ಹೊರತು ಪಡಿಸಿ ಬೇರೆ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ವರಿಷ್ಠರು ಕಟ್ಟಪ್ಪಣೆ ಹೊರಡಿಸಿದ ಹೊರತಾಗಿಯೂ ಕೆ.ಎಸ್‌.ಈಶ್ವರಪ್ಪ ಅವರು ಸೆಡ್ಡು ಹೊಡೆದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆ ಚುರುಕುಗೊಳಿಸಿದ್ದಾರೆ. 

Advertisement

ಮಂಗಳವಾರ ರಾಯಚೂರು ಪ್ರವಾಸದಲ್ಲಿರುವ ಈಶ್ವರಪ್ಪ ಅವರು ಮೇ 8 ರಂದು ನಡೆಯುವ ರಾಜ್ಯ ಮಟ್ಟದ ಬ್ರಿಗೆಡ್‌ ಕಾರ್ಯಕರ್ತರ ಅಭ್ಯಾಸವರ್ಗದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡರು. 

ಯಡಿಯೂರಪ್ಪ ಸಿಎಂ ಆಗುವುದು ಖಚಿತ!

ಈ ವೇಳೆ ಸುದ್ದಿಗಾರರೊಂದಿಗೆ ಮಾಡತನಾಡಿದ ಅವರು ‘ಕಳೆದ ಚುನಾವಣೆ ವೇಳೆ ಯಡಿಯೂರಪ್ಪ ಕೆಜೆಪಿ ಕಟ್ಟಿದರು ಹೀಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಬಿಜೆಪಿಗೆ 40 ,ಕೆಜೆಪಿಗೆ 6 ಸ್ಥಾನಗಳು ಬಂದವು. ಯಡಿಯೂರಪ್ಪ ಬಿಜೆಪಿ ವಾಪಾಸಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 17 ಸ್ಥಾನ ಪಡೆದಿದ್ದೇವೆ. ಸಂಘಟನೆ ಬಲವಾಗಿದೆ.ಮೋದಿ , ಯಡಿಯೂರಪ್ಪ ಅವರ ಪ್ರಭಾವದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು  ಯಡಿಯೂರಪ್ಪ ಸಿಎಂ ಆಗುವುದು ನಿಶ್ಚಿತ’ ಎಂದರು.  

ರಾಯಚೂರು ಸಭೆಗೂ ಮುನ್ನ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ  ಮಠಕ್ಕೆ ತೆರಳಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ರಾಯರ ಬೃಂದಾವನದ ಬಳಿ ಕೆಲಕಾಲ ಧ್ಯಾನವನ್ನೂ ಮಾಡಿದರು.

Advertisement

ಮೇ 8 ರಂದು ರಾಯಣ್ಣ ಬ್ರಿಗೆಡ್‌ ಅಭ್ಯಾಸವರ್ಗ ರಾಯಚೂರಿನಲ್ಲಿ ಆಯೋಜಿಸಲಾಗಿದ್ದು, ಯುವ ಬ್ರಿಗೇಡ್‌ನ‌ ಸದಸ್ಯರು ಸೇರಿದಂತೆ 224 ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. 

ಮಂತ್ರಾಲಯದಲ್ಲಿ ಸುದ್ದಿಗಾರರು ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಅವರು ನೀವು ಕೇಳಿದ್ದಕ್ಕೆಲ್ಲಾ ಉತ್ತರ ನೀಡಬೇಕಿಲ್ಲ ಎಂದರು.

ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರು ಪಕ್ಷದ ಚಟುವಟಿಕೆ ಹೊರತುಪಟಿಸಿ ಬೇರೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದರು. 

ಇದೀಗ ಪಕ್ಷದ ಬಿಕ್ಕಟ್ಟಿಗೆ ಅಂತ್ಯಹಾಡಲು ರಾಷ್ಟ್ರಾಧ್ಯಕ್ಷ  ಅಮಿತ್‌ ಶಾ ಅವರು ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next