ಬೆಂಗಳೂರು: ಕಳೆದ ವರ್ಷ ಅರಣ್ಯ ಇಲಾಖೆಯಿಂದ ನೆಡಲಾದ 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಆಡಿಟ್ ವರದಿಯನ್ನು 3 ತಿಂಗಳೊಳಗಾಗಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ನೀಡಿದ್ದಾರೆ.
ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಇಲಾಖೆಯ ನರ್ಸರಿಗಳಲ್ಲಿ ಎಷ್ಟು ಎತ್ತರದ ಸಸಿ ಬೆಳೆಸಲಾಗಿದೆ ಎಂಬ ಬಗ್ಗೆ 7 ದಿನಗಳೊಳಗಾಗಿ ಮಾಹಿತಿ ನೀಡುವಂತೆ ಸೂಚಿಸಿದರು.
ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳನ್ನು, ಟ್ರೋಫಿ, ಫಲಕಗಳನ್ನು ಸರಕಾರಕ್ಕೆ ಮರಳಿಸಲು ನೀಡಲಾಗಿದ್ದ ಗಡುವು ಎಪ್ರಿಲ್ 9ರಂದು ಮುಕ್ತಾಯವಾಗಿದ್ದು, ಕೆಲವರು ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲ ದಿಂದಾಗಿ ಮತ್ತೆ 2-3 ತಿಂಗಳುಗಳ ಕಾಲ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆದು ನಿರ್ಧರಿಸೋಣ ಎಂದರು.
ಕಂಪ್ಯೂಟರೈಸ್ಡ್ ಬಿಲ್
ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ಹಣ ಸ್ವೀಕೃತಿಗೆ ಆನ್‌ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ತ್ವರಿತವಾಗಿ ಕ್ರಮ ವಹಿಸುವಂತೆ ಮತ್ತು ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ಇನ್ನೊಂದು ತಿಂಗಳೊಳಗೆ ತಂತ್ರಾಂಶ ಮತ್ತು ವೆಬ್‌ಸೈಟ್ ರೂಪಿಸಲು ಸೂಚನೆ ನೀಡಿದರು.