Advertisement

ಆಸ್ಪತ್ರೆ ನಿರ್ಮಾಣಕ್ಕೆ ಖಾಲಿ ಜಾಗ ಬಿಟ್ಟು ಕೊಡಲು ಈಶ್ವರ್‌ ಖಂಡ್ರೆ ಆಗ್ರಹ

10:54 PM Mar 11, 2022 | Shreeram Nayak |

ವಿಧಾನಸಭೆ: ಭಾಲ್ಕಿ ಪಟ್ಟಣದಲ್ಲಿ ತಾಯಿ ಮಗುವಿನ ಆಸ್ಪತ್ರೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯ ಜಾಗ ಬಿಟ್ಟು ಕೊಡುವಂತೆ ಶಾಸಕ ಈಶ್ವರ್‌ ಖಂಡ್ರೆ ಮನವಿ ಮಾಡಿಕೊಂಡರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಭಾಲ್ಕಿ ಪಟ್ಟಣದ ಮಧ್ಯದಲ್ಲಿಯೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ಈಗ ಆ ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಿರುವುದರಿಂದ ಈಗಿರುವ ಶಾಲೆ ಪಾಳು ಬಿದ್ದಿದ್ದು, ಆ ಪ್ರದೇಶದಲ್ಲಿ ತಾಯಿ ಮಗುವಿನ ಆಸ್ಪತ್ರೆ ತೆರೆಯಲು ಅನುಮತಿ ದೊರೆತು, ಅನುದಾನವೂ ಬಿಡುಗಡೆಯಾಗಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಆ ಪ್ರದೇಶದಲ್ಲಿ ಶಾಲೆ ನಡೆಯುತ್ತಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ ಅಲ್ಲಿ ಶಾಲೆ ನಡೆಯುತ್ತಿಲ್ಲ ಎಂದು ಸದನದ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲೆ ಸ್ಥಳಾಂತರ ಆಗಿದ್ದರೆ, ಖಾಲಿ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಿಸಲು ಜಾಗ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಆ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸ್ಥಳವಾಗಿರುವುದರಿಂದ ಮುಂದಿನ ದಿನಗಳಲ್ಲಿ ಹಾಸ್ಟೆಲ್‌ ನಿರ್ಮಾಣ ಮಾಡಲು ಜಾಗದ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರು ಸರ್ಕಾರದ ಆಸ್ಪತ್ರೆ ನಿರ್ಮಾಣ ಮಾಡಲು ಜಾಗ ಕೇಳುತ್ತಿದ್ದಾರೆ. ಸರ್ಕಾರದ ಒಂದು ಇಲಾಖೆಯ ಜಾಗವನ್ನು ಇನ್ನೊಂದು ಇಲಾಖೆಗೆ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ನಂತರ ಶಿಕ್ಷಣ ಸಚಿವ ನಾಗೇಶ್‌ ಈ ಬಗ್ಗೆ ವರದಿ ಪಡೆದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next