Advertisement

ಮೃತ ವೈದ್ಯಾಧಿಕಾರಿಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲು ಖಂಡ್ರೆ ಒತ್ತಾಯ

08:45 PM Aug 21, 2020 | Hari Prasad |

ಬೆಂಗಳೂರು: ನಂಜನಗೂಡಿನ ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವಿಗೆ ಸಂತಾಪ ಸೂಚಿಸಿ 50 ಲಕ್ಷ ಪರಿಹಾರ ಘೋಷಿಸಿ ಸರ್ಕಾರ ಕೈತೊಳೆದುಕೊಳ್ಳುವ ಯತ್ನ ಮಾಡುತ್ತಿದೆ. ಆದರೆ ಈ ಸಾವಿನ ಸಂಪೂರ್ಣ ಹೊಣೆಯನ್ನು ನೇರವಾಗಿ ಸರ್ಕಾರವೇ ಹೊರಬೇಕು ಮತ್ತು ಜನಮೆಚ್ಚುಗೆ ಪಡೆದಿದ್ದ ವೈದ್ಯಾಧಿಕಾರಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

Advertisement

ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಇಡೀ ರಾಜ್ಯ ಇಂದು ಕೋವಿಡ್ 19 ಸೋಂಕು ಹೆಚ್ಚಳದಿಂದ ನಲುಗಿ ಹೋಗಿದೆ. ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ.

ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಜೊತೆಗೆ ಔಷಧದ ಕೊರತೆಯೂ ಕಾಡುತ್ತಿದೆ. ಸರ್ಕಾರ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಕಣ್ಣು ಮುಚ್ಚಿ ಕುಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡದ ಕಾರಣ, ಇರುವ ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಇಬ್ಬರಿಗೂ ಅಪಾಯ ಆಗುತ್ತದೆ ಎಂದಿರುವ ಖಂಡ್ರೆ, ಕೂಡಲೇ ಅಂದರೆ 15 ದಿನಗಳ ಒಳಗಾಗಿ ಪಾರದರ್ಶಕವಾಗಿ ಆನ್ ಲೈನ್ ಮೂಲಕ ಅರ್ಹತೆಯ ಆಧಾರದ ಮೇಲೆ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲೇ ಖಾಲಿ ವೈದ್ಯರ ಹುದ್ದೆ ಭರ್ತಿಗೆ ತಾವು ಸಲಹೆ ಮಾಡಿದ್ದರೂ, ಸರ್ಕಾರ ಕಡೆಗಣಿಸಿತು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗಲು ಮತ್ತು ಮರಣ ಪ್ರಮಾಣ ಸಂಖ್ಯೆ ಅಧಿಕವಾಗಲು ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.

Advertisement

ಈ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯ ಸಂವೇದನೆ ಯಾವುದೂ ಇಲ್ಲ. ಮಂಜೂರಾಗಿರುವ ಹುದ್ದೆಗಳ ಭರ್ತಿಗೂ ಮೀನಾ ಮೇಷ ಎಣಿಸುತ್ತಿದೆ. ಇದರ ಪರಿಣಾಮವಾಗಿ ಹಲವು ಆಸ್ಪತ್ರೆಗಳಲ್ಲಿ ವೈದ್ಯರಿಂದ ಚಿಕಿತ್ಸೆ ಸಿಗದೆ ರೋಗಿಗಳೂ ಪರಿತಪಿಸುತ್ತಿದ್ದಾರೆ. ಇತ್ತ ವೈದ್ಯರೂ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಡಾ. ನಾಗೇಂದ್ರ ಅವರ ಪ್ರಕರಣ ಸಹ ಇಂಥ ಒಂದು ಪ್ರಕರಣ ಎಂದು ಹೇಳಿದ್ದಾರೆ.

ಸರ್ಕಾರ ಕೂಡಲೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಸಂವೇದನಶೀಲರಾಗಿ ವರ್ತಿಸಬೇಕು. ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

ಉಪಚಾರದ ಮಾತಿನಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದನ್ನು ತಿಳಿಯಬೇಕು. ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next