Advertisement

BJP ಸ್ಥಿತಿ “ಧೋಬಿ ಕಾ ಕುತ್ತಾ ನ ಘರ್ ಕಾ, ನ ಘಾಟ್ ಕಾ ಎನ್ನುವಂತಾಗಿದೆ : ಈಶ್ವರ ಖಂಡ್ರೆ

09:35 PM May 19, 2021 | Team Udayavani |

ಬೆಂಗಳೂರು : ಆಪರೇಷನ್ ಕಮಲ ಎಂಬ ವಾಮ ಮಾರ್ಗದಿಂದ ಅಧಿಕಾರ ಹಿಡಿದಿರುವ ಬಿಜೆಪಿಗೆ ಕೋವಿಡ್ ನಿರ್ವಹಣೆ ಹೇಗೆಂದೇ ತಿಳಿಯುತ್ತಿಲ್ಲ, ಕ್ಷಣಕ್ಕೊಂದು, ಘಳಿಗೆಗೊಂದು ನಿರ್ಧಾರ ಕೈಗೊಳ್ಳುತ್ತಾ ಮತ್ತೆ ಆ ನಿರ್ಧಾರ ಹಿಂಪಡೆಯುತ್ತಾ, ಬೇಜವಾಬ್ದಾರಿತನ ತೋರುತ್ತಿದೆ. ತನ್ನ ಅಸಾಮರ್ಥ್ಯದಿಂದ ಆ ಪಕ್ಷ “ಧೋಬಿ ಕಾ ಕುತ್ತಾ ನ ಘರ್ ಕಾ ನಾ ಘಾಟ್ ಕ” ಎಂಬಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿದ್ದಾರೆ.

Advertisement

ಮನೆಗೆ ಮಗನಾಗಲಿಲ್ಲ, ಸ್ಮಶಾಣಕ್ಕೆ ಹೆಣವಾಗಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬಿಜೆಪಿಯ ಸಿ.ಟಿ. ರವಿ, “ಕೊಟ್ಟ ಕುದುರೆಯನೇರಲರಿಯದೆ’’ ಹೆಣಗುತ್ತಿರುವ ಸರ್ಕಾರದ ಲೋಪ ಮುಚ್ಚಿಕೊಳ್ಳಲು, ಅಪಲಾಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ತಜ್ಞರು 3-4 ತಿಂಗಳ ಮೊದಲೇ 2ನೇ ಅಲೆಯ ಮುನ್ನೆಚ್ಚರಿಕೆ ನೀಡಿದ್ದರೂ, ಸೂಕ್ತ ಸಿದ್ಧತೆ ಮಾಡಿಕೊಳ್ಳದೆ, ವೈದ್ಯಕೀಯ ಮೂಲಸೌಕರ್ಯ ವರ್ಧನೆ ಮಾಡದೆ, ವೆಂಟಿಲೆಟರ್, ಆಕ್ಸಿಜನ್ ಕಾನ್ಸಂಟ್ರೇಟರ್, ಐಸಿಯು ಯಂತ್ರೋಪಕರಣ ಅಳವಡಿಸದೆ ಧೂಳು ಹಿಡಿಸಿ ಜನರ ಜೀವ ತೆಗೆದು, ಇಡೀ ರಾಜ್ಯವನ್ನು ದೇಶವನ್ನು ಸ್ಮಶಾಣ ಮಾಡಿದ್ದಾರೆ. ಈಗ ಮಗ, ಸ್ಮಶಾಣ, ಹೆಣ ಎಂದೆಲ್ಲಾ ಹೇಳುತ್ತಾ, ಕಾಂಗ್ರೆಸ್ ಗೆ ನೀತಿ ಪಾಠ ಹೇಳುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ನೂರು ಹಾಸಿಗೆಗಳ ಕೊರೊನಾ ಆರೈಕೆ ಕೇಂದ್ರ ನಾಳೆಯಿಂದ ಆರಂಭ: ಈಶ್ವರಪ್ಪ

“ಕುಣಿಯಲಾರದಾಕೆ ನೆಲ ಡೊಂಕು ಎಂದಳಂತೆ” ಎಂಬ ಗಾದೆ ಇದೆ. ಬಿಜೆಪಿಯವರಿಗೆ ಅಧಿಕಾರ ನಡೆಸಲು ಬರುತ್ತಿಲ್ಲ. ಎಲ್ಲ ರಂಗದಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕುಂಟು ನೆಪ ಹುಡುಕುತ್ತಿದ್ದಾರೆ. ಪ್ರತಿಪಕ್ಷದ ಮೇಲೆ ಟೂಲ್ ಕಿಟ್ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

Advertisement

ಕೊರೊನಾ ಸಮಯದಲ್ಲಿ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಲಕ್ಷಾಂತರ ಜನರನ್ನು ಸೇರಿಸಿ ಸೋಂಕು ಹರಡಲು ಕಾರಣವಾದ ಸರ್ಕಾರ ಈಗ ತನ್ನ ಲೋಪ ಮುಚ್ಚಿಕೊಳ್ಳಲು ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಹೇಳಿಕೆ ನೀಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಎಲ್ಲ ರಾಜ್ಯಗಳೂ ತಮ್ಮ ರಾಜ್ಯದ ಜನರ ಪ್ರಾಣ ಕಾಪಾಡಲು ಲಸಿಕೆಯನ್ನು ತಂದು ಯಶಸ್ವಿಯಾಗಿ ನೀಡುತ್ತಿರುವಾಗ, ರಾಜ್ಯದಲ್ಲಿ ಲಸಿಕೆಗೆ ಜನ ಪರದಾಡುತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಯೋಗ್ಯತೆ ಇಲ್ಲದಿದ್ದರೂ ಲಸಿಕಾ ಅಭಿಯಾನ ಉದ್ಘಾಟಿಸಿ ಫೋಟೋ ತೆಗೆಸಿಕೊಳ್ಳುವ ಸರ್ಕಾರಕ್ಕೆ ಲಸಿಕೆ ನಿರ್ವಹಣೆ ಎಂದರೇನು ಎಂಬುದೇ ಗೊತ್ತಿಲ್ಲ. ಲಸಿಕೆ ಸಿಗದ ಯುವಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು ಲಸಿಕೆಗೆ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದಲಾದರೂ ಹಣ ಕೊಡುತ್ತೇವೆ ಜನರಿಗೆ ಲಸಿಕೆ ತರಿಸಿ ಕೊಡಿ ಎಂದು ಹೇಳಿದೆ. ಆದರೆ 25 ಸಂಸದರಿದ್ದರೂ ಕೇಂದ್ರದ ಮೇಲೆ ಒತ್ತಡ ಹೇರಿ ಲಸಿಕೆ ತರಿಸಲಾರದ ಗುಲಾಮಗಿರಿ ಮಾಡುತ್ತಿರುವ ಈ ಪಕ್ಷದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next