Advertisement

ಎಸ್ಕಾರ್ಟ್‌ ವಾಹನ ಪರೇಡ್‌; ಕಟ್ಟೆಚ್ಚರ

01:58 AM Jul 26, 2019 | Team Udayavani |

ಕುಂದಾಪುರ/ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಜು. 26 ರಂದು ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಗುರುವಾರ ಮಂಗಳೂರಿನಿಂದ ಕೊಲ್ಲೂರಿನವರೆಗೆ ಎಸ್ಕಾರ್ಟ್‌ ವಾಹನಗಳ ಪೂರ್ವಭಾವಿ ಪರೇಡ್‌ ನಡೆಯಿತು.

Advertisement

ಮಂಗಳೂರಿಗೆ ವಿಮಾನದಲ್ಲಿ ಬರುವ ಪ್ರಧಾನಿ ಮಳೆ ಇಲ್ಲದಿದ್ದರೆ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ಅರೆಶಿರೂರಿನ ಹೆಲಿಪ್ಯಾಡ್‌ನ‌ಲ್ಲಿ ಇಳಿಯುವರು. ಮಳೆಯಿದ್ದರೆ ಮಂಗಳೂರಿನಿಂದ ರಸ್ತೆ ಮೂಲಕವೇ ಕೊಲ್ಲೂರಿಗೆ ಆಗಮಿಸುವರು ಎಂದು ತಿಳಿದು ಬಂದಿದೆ.

ಇದರ ಪೂರ್ವಭಾವಿಯಾಗಿ ಗುರುವಾರ ಮಂಗಳೂರು ವಿಮಾನ ನಿಲ್ದಾಣದಿಂದ ಕೊಲ್ಲೂರು ದೇವಸ್ಥಾನ ದವರೆಗೆ ಎಸ್ಕಾರ್ಟ್‌ ವಾಹನ, ಬೆಂಗಾವಲು ವಾಹನ, ಆ್ಯಂಬುಲೆನ್ಸ್‌, ಭದ್ರತಾ ಪಡೆಗಳ ವಾಹನ ಸಹಿತ ಸುಮಾರು 15ಕ್ಕೂ ಹೆಚ್ಚು ವಾಹನಗಳ ಪರೇಡ್‌ ನಡೆಸಲಾಯಿತು.

ಬಿಗಿ ಬಂದೋಬಸ್ತ್
ಲಂಕಾ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅವರು ಸಂಚರಿಸುವ ದಾರಿಯುದ್ದಕ್ಕೂ ಪ್ರಮುಖ ಜಂಕ್ಷನ್‌, ಪೇಟೆಗಳಲ್ಲಿ, ರಸ್ತೆ ತಿರುವುಗಳಲ್ಲಿ, ಆಯಾಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ.

ಅರೆಶಿರೂರು, ಕೊಲ್ಲೂರಿನಲ್ಲಿ ವಿಶೇಷ ಭದ್ರತೆ
ರನಿಲ್‌ ವಿಕ್ರಮ್‌ ಸಿಂN ಅವರು ಬೆಳಗ್ಗೆ ಕೊಲ್ಲೂರು ದೇಗುಲದಲ್ಲಿ ನಡೆಯುವ ನವಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಅರೆಶಿರೂರಿನ ಹೆಲಿಪ್ಯಾಡ್‌ನ‌ಲ್ಲಿ ಜು. 25ರಿಂದಲೇ ವಿಶೇಷ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ.

Advertisement

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹಾಗೂ ವಿವಿಧ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಕೊಲ್ಲೂರು ಸಹಿತ ಪ್ರಧಾನಿ ಸಾಗುವ ದಾರಿಯಲ್ಲಿರುವ ವಸತಿಗೃಹಗಳು, ವಾಹನ ಸಂಚಾರ ನಿಲುಗಡೆ ಪ್ರದೇಶ, ಅಂಗಡಿ ಮುಂಗಟ್ಟುಗಳ ಬಗ್ಗೆ ಉಭಯ ದೇಶಗಳ ವಿಶೇಷ ತನಿಖಾ ತಂಡಗಳು ಸಂಪೂರ್ಣ ಮಾಹಿತಿ ಸಂಗ್ರಹಿಸಿವೆ.

ಭಕ್ತರು, ಪತ್ರಕರ್ತರಿಗೆ ನಿರ್ಬಂಧ
ಜು. 26ರ ಬೆಳಗ್ಗೆ 9ರಿಂದ ಪ್ರಧಾನಿ ನಿರ್ಗಮನದ ವರೆಗೆ ಕೊಲ್ಲೂರಿನಲ್ಲಿ ಭಕ್ತರು, ಪಾದಚಾರಿಗಳು, ವಾಹನ ನಿಲುಗಡೆ, ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ದೇಗುಲದ ವ್ಯವಸ್ಥಾಪನ ಸಮಿತಿ ಸಹಿತ ಅ ಧಿಕಾರಿಗಳು, ಬೆರಳೆಣಿಕೆಯ ಸಿಬಂದಿ ಹಾಗೂ ಅರ್ಚಕರಿಗೆ ಮಾತ್ರ ದೇಗುಲದ ಪ್ರವೇಶಕ್ಕೆ ಗುರುತು ಚೀಟಿ ಸಹಿತ ಅನುವು ಮಾಡಿಕೊಡಲಾಗಿದೆ. ಪತ್ರಿಕಾ ಪ್ರತಿನಿ ಧಿಗಳಿಗೆ ಮಹಾದ್ವಾರದ ಬಳಿ ಅನುಮತಿ ನೀಡಿದ್ದು, ದೇಗುಲದ ಒಳ ಪ್ರವೇಶಕ್ಕೆ ಒಪ್ಪಿಗೆ ನೀಡಿಲ್ಲ.

ಕಾಸರಗೋಡಿನಲ್ಲೂ ಭದ್ರತೆ
ಕಾಸರಗೋಡು: ರನಿಲ್‌ ವಿಕ್ರಂ ಸಿಂಘೆ ಜು. 27ರಂದು ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್‌ ನೇತೃತ್ವದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. ದೇವಸ್ಥಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಐಜಿ ಅಶೋಕ್‌ ಕುಮಾರ್‌ ಭದ್ರತೆಯ ಅವಲೋಕನ ನಡೆಸಿದರು.

ಪರೇಡ್‌ ವೇಳೆ ಪಂಕ್ಚರ್‌!
ಲಂಕಾ ಪ್ರಧಾನಿ ಮಂಗಳೂರಿನಿಂದ ಕೊಲ್ಲೂರಿಗೆ ತೆರಳುವ ವಾಹನದ ಪೂರ್ವಭಾವಿ ಪರೇಡ್‌ ನಡೆಸುತ್ತಿದ್ದಾಗ ಎಸ್ಕಾರ್ಟ್‌ ವಾಹನವೊಂದು ಕೋಟೇಶ್ವರ ತಲುಪುತ್ತಿದ್ದಂತೆ ಟಯರ್‌ ಪಂಕ್ಚರ್‌ ಆದ ಘಟನೆ ನಡೆಯಿತು. ಪಂಕ್ಚರ್‌ ಹಾಕಿಸಿಕೊಂಡು ಬಳಿಕ ಕೊಲ್ಲೂರಿನತ್ತ ಪರೇಡ್‌ ಸಂಚರಿಸಿತು.

ಬೇಳ ದೇಗುಲ ಸಂಪರ್ಕ ಹೇಗೆ?
ಕುಂಬಳೆ: ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಧಾನಿಗೂ ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ಹಲವು ಕಿ.ಮೀ. ದೂರ ಒಳಭಾಗದಲ್ಲಿರುವ ಪುಟ್ಟ ದೇವಸ್ಥಾನ ಬೇಳ ಕುಮಾರಮಂಗಲ ದೇವಸ್ಥಾನಕ್ಕೂ ಎತ್ತಣಿಂದೆತ್ತಣ ಸಂಬಂಧ ಎಂಬ ಪ್ರಶ್ನೆ ಉದ್ಭವಿಸದೆ ಇರದು.

ರಣಿಲ್‌ ವಿಕ್ರಮ ಸಿಂಘೆ ಅವರಿಗೆ ಬೇಳ ಕುಮಾರಮಂಗಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸುವಂತೆ ಸಲಹೆ ನೀಡಿದವರು ಜ್ಯೋತಿಷಿ ಬೇಳ ಪದ್ಮನಾಭ ಶರ್ಮ. ವಿಶ್ವಸನೀಯ ಮೂಲಗಳ ಮಾಹಿತಿಯಂತೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಯಾಗ ನೆರವೇರಿಸಲು ತಿಳಿಸಿದವರೂ ಅವರೇ.

ಬೇಳ ಪದ್ಮನಾಭ ಶರ್ಮ ಇರಿಞಾಲಕುಡ ಅವರು ಶ್ರೀಲಂಕಾ ಪ್ರಧಾನಿ ಯವರೊಂದಿಗೆ ನಿಕಟ ಸಂಪರ್ಕ ಹೊಂದಿರುವರು. ಶ್ರೀಲಂಕಾದ ಪ್ರಧಾನಿ ನಿವಾಸಕ್ಕೆ ತೆರಳಿ ಹಲವು ಬಾರಿ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದರು. ಅವರ ಮಾರ್ಗದರ್ಶನದಂತೆ ಪ್ರಧಾನಿ, ಕುಟುಂಬ ಮತ್ತು ಶ್ರೀಲಂಕಾದ ಪ್ರಜೆಗಳ ಕ್ಷೇಮಕ್ಕಾಗಿ ವಿಶೇಷ ಸೇವೆ ಸಲ್ಲಿಸಲು ಬರುತ್ತಿರುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next