ಮಸ್ಕಿ: ಕುಡಿಯುವ ನೀರಿಗಾಗಿ ಇಲ್ಲಿನ ತುಂಗಭದ್ರ ಎಡದಂಡೆಯ 69ನೇ ಮೈಲಿನಲ್ಲಿ ರೈತರೇ ಎಸ್ಕೇಪ್ ಗೇಟ್ ಗಳನ್ನು ಎತ್ತುವ ಮೂಲಕ ಹಳ್ಳಕ್ಕೆ ನೀರು ಹರಿಬಿಟ್ಟ ಘಟನೆ ಸೋಮವಾರ ನಡೆಯಿತು.
ನಗರದ ಎಡದಂಡೆ ನಾಲೆಯ ಹತ್ತಿರ ತಾಲೂಕಿನ ಬಳಗಾನೂರ ಸೇರಿದಂತೆ ಕೆಳಭಾಗದ ಹಳ್ಳಿಗಳ ಜನರಿಗೆ ಕುಡಿಯುವ ನೀರಿಗೆ ಬೇಸಿಗೆ ಮುನ್ನವೇ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರು ಬಿಡುವಂತೆ ಆಗ್ರಹಿಸಿ ಅನೇಕ ಸಲ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಇದರಿಂದ ಅಸಮಧಾನಗೊಂಡ ರೈತರು ತಾವೇ ಎಸ್ಕೇಪ್
ಗೇಟ್‌ಗಳನ್ನು ಎತ್ತಿ ಹಳ್ಳಕ್ಕೆ ನೀರುಬಿಟ್ಟರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗುರುಪಾದೇಶ್ವರ ಪಾಟೀಲ್ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ನೀರಾವರಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ನೀರು ಬಿಡುವ ವಿಷಯಕ್ಕೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಅಧಿಕಾರಿಗಳು ಮತ್ತು ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಕಾಲುವೆ ಕೆಳ ಭಾಗದ ಹಳ್ಳಿಗಳಾದ ಬಳಗಾನೂರ, ದಿದ್ದಗಿ, ಸಾಗರ್ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್ ಗೌಡನಬಾವಿ ಸೇರಿದಂತೆ ಇನ್ನಿತರ ಹಳ್ಳಿಗಳ ನೂರಾರು ರೈತರು ಇದ್ದರು.