Advertisement

ಪ್ರಬಂಧ: ಉಳ್ಳಾಗಡ್ಡಿ

10:23 AM Jan 27, 2020 | mahesh |

ಮೆಣಸಿನಕಾಯಿ ಬಸವಣ್ಣ, ಬೆಲ್ಲದ ರಾಮಣ್ಣ , ಉಪ್ಪಿನ ಪುಟ್ಟಪ್ಪ, ಪುರಿ ಪರಮೇಶ, ಈರುಳ್ಳಿ ಗಂಗಾಧರ… ನಮ್ಮೂರಿನಲ್ಲಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ ಅಲ್ಲಿ ನೆಲೆನಿಂತ ತಮಿಳು -ತೆಲುಗಿನ ಜನ, ಅವರಿಂದಾಗಿ ಊರು ವಿಸ್ತರಿಸಿ ಸಂತೆಯೂ ದೊಡ್ಡಮಟ್ಟದಲ್ಲಿ ಭಾನುವಾರ ಸೇರಲಾರಂಭಿಸಿದಾಗ ಕೃಷಿಯ ಜೊತೆಗಿರಲೆಂದು ಕೈಗೊಂಡ ಈ ವ್ಯಾಪಾರದಿಂದಾಗಿ ಆ ಹೆಸರಿನಲ್ಲಿಯೇ ಅವರನ್ನು ಕರೆಯುವುದು ಪರಿಪಾಠವಾಗಿ ಹೋಗಿ ಮುಂದೆ ಅವರ ಮೂಲ ಹೆಸರನ್ನು ಹೇಳಿದರೆ ಯಾರೂ ಗುರುತು ಹಚ್ಚದಂತೆ ಅವರು ವ್ಯಾಪಾರ ಮಾಡುವ ಈ ವ್ಯಾಪಾರವು ಅವರಿಗೆ ಗುರುತನ್ನು ನೀಡಿತ್ತು.

Advertisement

ಮೆಣಸಿನಕಾಯಿ ಮಾರಾಟದ ಜಾಗದ ಪಕ್ಕವೇ ಈರುಳ್ಳಿ ಆಸ್ರ. ಹೊಸದಾಗಿ ಮೆಣಸಿನಕಾಯಿ ವ್ಯಾಪಾರ ಆರಂಭಿಸಿ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಅಣ್ಣನಿಗೆ ಕೋಪ ಬಹಳ. ಅವರನ್ನು ರೇಗಿಸಲೆಂದೇ ಈರುಳ್ಳಿ ಗಂಗಾಧರ ಬೇಕಂತಲೇ ಈರುಳ್ಳಿ ಸಿಪ್ಪೆ ತೂರುವುದು, ಅದು ಹಾರುತ್ತ ಬಂದು ಮೈಮೇಲೆ ಬೀಳುವುದು, ಸ್ವಭಾವತಃ ಗಂಭೀರ ಸ್ವಭಾವದವರಾದ ಅಣ್ಣ ಅವರ ಮೇಲೆ ರೇಗಿ ಹಾರಿ ಹೋಗುವುದು, ಆತ ಹೆದರಿದಂತೆ ನಟಿಸುವುದು- ಅಲ್ಲಿದ್ದ ಇತರೆ ಜನರಿಗೆ ಮನರಂಜನೆಯ ಸರಕಾಗುತ್ತಿತ್ತು.

ತೀರಾ ಬಡತನದಿಂದ ಬಂದ ಅಕ್ಕ ಮಾಡುತ್ತಿದ್ದ ಕೋಳಿಸಾರು, ಶ್ಯಾವಿಗೆ ನಮ್ಮ ಕುಟುಂಬದಲ್ಲಿಯೇ ಜನಪ್ರಿಯವಾಗಿತ್ತು. ಆ ಜನಪ್ರಿಯತೆಯ ಹಿಂದೆ ಇದ್ದ ಈ ಈರುಳ್ಳಿ ಖಾರದ ರಹಸ್ಯ ತಿಳಿಯಿತು. ಆ ಕಾಲಕ್ಕೆ ಮಿಕ್ಸಿ ಇಲ್ಲದ ಕಾಲದಲ್ಲಿ ಆಕೆ ಮೂರು ಖಾರ ಅರೆಯುತ್ತಿದ್ದಳು. ಮೊದಲನೆಯದು ಈರುಳ್ಳಿ ಖಾರ. ಅದರಲ್ಲಿ ತುಂಡುಗಳನ್ನು ಸಿಂಡಿಸಿದ (ಫ್ರೈ ) ನಂತರ ಮೆಣಸಿನಕಾಯಿ ಖಾರ ಹಾಕಿ ಕುದಿಸಿದ ನಂತರ ಕೊನೆಗೆ ಸಣ್ಣಗೆ ರುಬ್ಬಿದ ತೆಂಗಿನಕಾಯಿ ರಸ ಹಾಕಿ ಮಾಡಿದ ಸಾರು ಚಪ್ಪರಿಸುವಂತಿರುತ್ತಿತ್ತು. ಅಷ್ಟೇ ಏಕೆ, ಆಕೆ ಮಾಡುತ್ತಿದ್ದ ಹಿಸುಕಿದ ಅವರೆಕಾಯಿ, ಕಡ್ಲೆಕಾಳು, ಮೊಳಕೆ ಹುರುಳಿಕಾಳುಗಳನ್ನು ಅದೇ ರೀತಿ ಮಾಡಿ ನಾಲಿಗೆಯ ರುಚಿ ಹೆಚ್ಚಿಸುತ್ತಿದ್ದಳು. ಅಪರೂಪಕ್ಕೆ ಹೆಚ್ಚುಗಟ್ಟಲೆ ಇರುತ್ತಿದ್ದರೂ ಅದೂ ಸಿಗದಿದ್ದರೂ ಅದನ್ನು ಸರಿದೂಗಿಸುತ್ತಿದ್ದದ್ದು ಇದೇ ಸಾರುಗಳು. ಆ ಸಾರಿಗೆ ಮೆರುಗು ನೀಡುತ್ತಿದ್ದದ್ದು ಈರುಳ್ಳಿ ಖಾರವೇ ಸರಿ.

ಉತ್ತರಕರ್ನಾಟಕದ ಕಡೆ ಈರುಳ್ಳಿಗೆ ಉಳ್ಳಾಗಡ್ಡಿ ಎನ್ನುತ್ತಾರೆ. ನಮ್ಮೂರ ಡ್ಯಾಮ್‌ ಕಟ್ಟುವಾಗ ಬಂದ ಉತ್ತರಕರ್ನಾಟಕದ ಜನ ಜೋಳದ ರೊಟ್ಟಿಗೆ ಉಳ್ಳಾಗಡ್ಡಿ ಮತ್ತು ಹಸಿರುಮೆಣಸಿನಕಾಯಿಯನ್ನು ಕರಂ ಕರಂ ಕಡಿದು ತಿಂದು ಮುಗಿಸುತ್ತಿದ್ದುದನ್ನು ಕಂಡು ಬೆರಗಾಗುತ್ತಿ¨ªೆ. ಈರುಳ್ಳಿಯನ್ನು ನಮ್ಮ ಕಡೆ ನೀರುಳ್ಳಿ ಎಂತಲೂ ಕರೆಯುತ್ತಾರೆ. ಕುತೂಹಲದಿಂದ ಕೇಳಲಾಗಿ ನೋಡಲು ಮಳ್ಳಿಯಂತಿರುವ ಇದು ಹೆಚ್ಚಲು ಆರಂಭಿಸಿದೊಡನೆ ಕಣ್ಣಲ್ಲಿ ನೀರು ತರುವುದರಿಂದ ನೀರುಳ್ಳಿ ಎನ್ನುತ್ತಾರೆ ಎನ್ನುವ ಉಪಕಥೆಯೊಂದನ್ನು ಅಜ್ಜಿ ಹೇಳಿದ್ದರು.

ದೊಡ್ಡ ಅಡುಗೆ ಎಂದು ಕರೆಯುವ ಮಾಂಸದೂಟ ಆರಂಭವಾಗುವುದೇ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ, ಈರುಳ್ಳಿ ಕತ್ತರಿಸುವ ಕಾಯಕದೊಂದಿಗೆ. ಈರುಳ್ಳಿ ಕತ್ತರಿಸಿ ಸಾರಿಗೆ ಹಾಕಿದ ನಂತರವೂ ನೆಂಚಲು ಕೂಡ ಅದನ್ನು ನಿಂಬೆಹಣ್ಣಿನ ಚೂರು, ಸೌತೆಕಾಯಿಯೊಂದಿಗೆ ಬಳಸುವುದು ಅದರದೇ ಆದ ವಿಶಿಷ್ಟ ಖಾರದ ರುಚಿ ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ ಎಂದು. ಮನೆಯಲ್ಲಿ ನೆಂಚಲು ಅದರಲ್ಲೂ ಸೊಪ್ಪಿನ ಸಾರಿಗೆ ಈರುಳ್ಳಿ ನೀಡುತ್ತಿದ್ದದ್ದು ಅದು ರುಚಿಯ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಿದ್ದದ್ದು ಸುಳ್ಳಲ್ಲ.

Advertisement

ಕನಕದಾಸರ ರಾಮಧಾನ್ಯ ಚರಿತೆ ಓದಿದ ನಂತರ ತರಕಾರಿರಾಣಿ ಎಂಬ ಕಿರುನಾಟಕ ರಚಿಸಿದ್ದೆ. ತರಕಾರಿ ರಾಣಿಪಟ್ಟಕ್ಕೆ ಅನೇಕ ತರಕಾರಿಗ‌ಳ ನಡುವೆ ಪೈಪೋಟಿ ನಡೆದು ವ್ಯಾಜ್ಯ ಈಶ್ವ‌ರನ ಬಳಿಗೆ ಹೋಗುತ್ತವೆ. ಕೊನೆಗೆ ಈರುಳ್ಳಿ- ಮೆಣಸಿನಕಾಯಿ- ಟೊಮ್ಯಾಟೊಗಳ ನಡುವೆ ಅಂತಿಮ ಸ್ಪರ್ಧೆ. ಏಕೆಂದರೆ, ಒಮ್ಮೆ ಆಕಾಶಕ್ಕೆ ಮತ್ತೂಮ್ಮೆ ಪಾತಾಳಕ್ಕೆ ಕುಸಿದುಬೀಳುವ ತರಕಾರಿಗಳೆಂದರೆ ಇವುಗಳೇ. ಕಾರಣ, ಬೇಡಿಕೆ ಇದೆ ಎಂದು ರೈತರು ಇದನ್ನು ಅತಿಯಾಗಿ ಬೆಳೆದು ಬೆಲೆ ಪಾತಾಳಕ್ಕೆ ಕುಸಿದಾಗ ವಾಪಸ್‌ ತೆಗೆದುಕೊಂಡು ಹೋಗಲು ಬಾರದೆ ಮಾರ್ಕೆಟ್ಟಿನಲ್ಲಿ ಸುರಿದು ಹೋಗುವ ಅನೇಕ ಸಂದರ್ಭಗಳು ಕಂಡಿರುವಂತೆ ಒಮ್ಮೊಮ್ಮೆ ಅತಿವೃಷ್ಟಿಯ ಪರಿಣಾಮ ಈ ತರಕಾರಿಗಳು ಕರಗಿ ಬೆಲೆ ಗಗನಕ್ಕೆ ಏರುತ್ತದೆ. ಅಂಥ ಸಂದರ್ಭದಲ್ಲಿ ಈಗ ಇರಬಾರದಿತ್ತೆ ಎಂದು ರೈತರು ಕೈ ಕೈ ಹಿಸುಕಿಕೊಂಡಿದ್ದೂ ಇದೆ. ಹೀಗೆ, ರೈತರನ್ನು ಆಟವಾಡಿಸುವ ಈರುಳ್ಳಿಗೆ ಅದರ ಸಹೋದರ ಬೆಳ್ಳುಳ್ಳಿಯ ಬೆಂಬಲವೂ ಇರುವಂತೆ, ಹಸಿರುಮೆಣಸಿನಕಾಯಿಗೆ ಸೊಪ್ಪುಗಳ ಬೆಂಬಲವೂ ಟೊಮೆಟೋಗೆ ಬೀನ್ಸ್‌- ಆಲೂಗೆಡ್ಡೆಯಂಥ ವಿದೇಶಿ ಮೂಲದ ತರಕಾರಿಗಳ ಬೆಂಬಲವೂ ಇರುವಂತೆ ಚಿತ್ರಿಸಿ ಕೊನೆಗೆ ಈರುಳ್ಳಿಗೆ ತರಕಾರಿಗಳ ರಾಣಿಯಾಗುವ ಸ್ಥಾನ ಸಿಗುತ್ತದೆ. ಇದಕ್ಕೆ ಎಲ್ಲ ತರಕಾರಿಗಳಲ್ಲಿ ಈರುಳ್ಳಿಗೆ ಮಾತ್ರ ಪ್ರತಿ ಮೂರು-ನಾಲ್ಕು ವರ್ಷಗಳಿಗೊಮ್ಮೆ ಸರ್ಕಾರವನ್ನು ಬೆಚ್ಚಿಬೀಳಿಸುವ ಶಕ್ತಿ ಮತ್ತು ಸರ್ಕಾರ ಉರುಳಿಸುವ ತಾಕತ್‌ ಇರುವ ಕಾರಣಕ್ಕಾಗಿ ಅದಕ್ಕೇ ತರಕಾರಿಯ ರಾಣಿ ಎಂಬ ಬಿರುದು ನೀಡಲಾಗುತ್ತದೆ. ಇದನ್ನು ಮೆಚ್ಚಿ ಈಶ್ವರನು ತನ್ನ ಹೆಸರಿನಲ್ಲೊಂದಾದ ವಿರೂಪಾಕ್ಷ ಎಂಬ ಹೆಸರನ್ನು ಅದಕ್ಕೆ ಇಡುತ್ತಾನೆ. ಮುಂದೆ ಕಾಲಾಂತರದಲ್ಲಿ ಅದುವೇ ಈರುಳ್ಳಿಯಾಗಿ ಪರಿವರ್ತಿತವಾಯಿತು ಎಂಬ ಕಿರುನಾಟಕ ಬರೆದರೂ ಅದೂ ಪ್ರದರ್ಶಿಸಲು ತಂಡ ಸಿಗದೆ ಹಸ್ತ ಪ್ರತಿಯಲ್ಲಿಯೇ ಉಳಿದುಹೋಯಿತು.

ನಾನು ಪ್ರತಿದಿನ ಕಾಲೇಜಿಗೆ ಹಾದುಹೋಗುವ ದಾರಿಯಲ್ಲಿ ಸಿಗುವ ಪಿಳೈ ಮೆಸ್‌ನಲ್ಲಿ ಸೋಮವಾರ, ಶನಿವಾರ ಹೊರತುಪಡಿಸಿ (ಸೋಮವಾರ, ಶನಿವಾರ ಕುರಿ-ಕೋಳಿ ಕುಯ್ಯಂಗಿಲ್ಲ!) ಉಳಿದ ದಿನಗಳಲ್ಲಿ ಇಬ್ಬರು ಈರುಳ್ಳಿ ರಾಶಿಯನ್ನು ಗುಡ್ಡೆ ಹಾಕಿಕೊಂಡು ಚಕಚಕನೆ ಕತ್ತರಿಸುವ ದೃಶ್ಯ ಕಾಣುತ್ತಿದ್ದದ್ದು ಮಾಮೂಲಾಗಿತ್ತು.

ಆದರೆ, ಕೆಲವು ಮಿಲಿಟರಿ ಹೊಟೇಲುಗಳಲ್ಲಿ ಕೋಸನ್ನು ಕತ್ತರಿಸುತಿದ್ದರು. ಮೊನ್ನೆ ಈರುಳ್ಳಿ ಬೆಲೆ ಗಗನಕ್ಕೆ ಏರಿದಾಗ ಈರುಳ್ಳಿ ಜೊತೆಗೆ ಕೋಸನ್ನು ನಂಚಿಕೊಳ್ಳಲು ನೀಡಿ ಜೀರ್ಣಕ್ರಿಯೆಗೆ ಇದೂ ಸಹಾಯ ಮಾಡುತ್ತದೆ ಎಂಬ ಆರೋಗ್ಯದ ಪಾಠ ಹೇಳಿ ಸರಿದೂಗಿಸುತ್ತಿದ್ದರು.
ಈರುಳ್ಳಿಯ ವಿಶಿಷ್ಟವಾಸನೆ ಅದರ ದುಷ್ಪರಿಣಾಮಗಳನ್ನು ಹೇಳುವ ಜೊತೆಗೆ, ಕೆಲವರು ಅದನ್ನು ಬಳಸಲು ಹಿಮ್ಮೆಟ್ಟುವುದಕ್ಕೆ ಕಾರಣವಾಗಿದೆ. ಕೆಲವರಿಗಂತೂ ಈರುಳ್ಳಿ-ಬೆಳ್ಳುಳ್ಳಿ ಬೆರೆಸಿದ ಖಾದ್ಯಗಳು ಹೆಚ್ಚಾಗಿ ಹಿಡಿಸುವುದಿಲ್ಲ. ಇದಕ್ಕೆ ಈರುಳ್ಳಿಯ ತಾಮಸ-ರಾಜಸ ಗುಣವೂ ಕಾರಣವಾಗಿರಬಹುದು.

ಹೈಸ್ಕೂಲಿನಲ್ಲಿ ಕಾಲಿರಿಸಿದ ವರ್ಷ ಎಸ್‌ಎನ್‌ಎಸ್‌ ಎಂದು ಕರೆಯುತ್ತಿದ್ದ ನಂಜುಂಡ ಶೆಟ್ಟರು ಜೀವಶಾಸ್ತ್ರದ ಉಪಾಧ್ಯಾಯರು. ಪ್ರಯೋಗದ ಮೂಲಕವೇ ವಿಷಯವನ್ನು ಕಲಿಯಬೇಕೆಂದು ತಾಕೀತು ಮಾಡುತ್ತಿದ್ದರು. ಆಲೂಗೆಡ್ಡೆಯ ಒಳಗಿನ ತಿರುಳನ್ನು ತೆಗೆದು ಅಲ್ಲಿ ಸಕ್ಕರೆ ನೀರು ತುಂಬಿ ಅದನ್ನು ಮಾಮೂಲಿ ನೀರಿನ ಲೋಟದ ಒಳಗಿಟ್ಟು ಇಡೀ ದಿನ ಬಿಟ್ಟು ನೋಡಿದರೆ ಒಂದೇ ರುಚಿ ಇರುವುದನ್ನು ತಿಳಿಸಲು ಆ ಪ್ರಯೋಗವನ್ನು ನಮ್ಮ ಕೈಯಲ್ಲೇ ಮಾಡಿಸುತ್ತಿದ್ದರು. ಆ ಕ್ರಿಯೆಗೆ ವಿಸರಣ ಕ್ರಿಯೆ ಎಂದು ಹೇಳುತ್ತಿದ್ದದ್ದು ಉಂಟು. ನಂತರ ಸೂಕ್ಷ್ಮದರ್ಶಕದಲ್ಲಿ ಈರುಳ್ಳಿಯ ಸಿಪ್ಪೆಯನ್ನು ತೆಳುವಾಗಿ ಕತ್ತರಿಸಿ ಇರಿಸಿ ಅದರಲ್ಲಿ ಜೀವಕೋಶ ತೋರಿಸುವುದಾಗಿ ಇದಕ್ಕಾಗಿ ನಮ್ಮೆಲ್ಲರಲ್ಲೂ ಈರುಳ್ಳಿ ತರಲು ತಿಳಿಸಿದ್ದರು. ನಾವೆಲ್ಲ ಈರುಳ್ಳಿಯ ಜೊತೆಗೆ ಬ್ಲೇಡು ತೆಗೆದುಕೊಂಡು ಹೋಗಿ ಒಂದು ಪೀರಿಯಡ್‌ ಇರುವಂತೆ ಈರುಳ್ಳಿಯನ್ನು ಬೇಕಾದಂತೆ ಕತ್ತರಿಸಿ ಇಟ್ಟುಕೊಂಡಿ¨ªೆವು. ಆದರೆ, ಆ ದಿನ ಒಂದು ಪೀರಿಯಡ್‌ ಮೊದಲೇ ಲೇಟ್‌-ಆಫ್ ಮಾಡಿದ ಪರಿಣಾಮವಾಗಿ ಈರುಳ್ಳಿ ಸಿಪ್ಪೆಯನ್ನು ಅಲ್ಲಿಯೇ ಬಿಟ್ಟು ಮನೆಗೆ ಹೊರೆಟೆವು. ಇಡೀ ತರಗತಿಯಲ್ಲಿ ಈರುಳ್ಳಿ ಸಿಪ್ಪೆಯೇ ತುಂಬಿಹೋಗಿತ್ತು. ಮಾರನೆಯ ದಿನ “ಡಿ’ ಗ್ರೂಪ್‌ ನೌಕರ ಪುಟ್ಟಣ್ಣ, “ಎಸ್‌ಎನ್‌ಎಸ್‌ ಹೇಳಿದರೂಂತ ನೀವ್‌ ಇಲ್ಲಿ ತಂದು ಕೂದಿಟ್ಟು ಹೋಗಿದ್ದೀರ. ಸಿಪ್ಪೆ ತೆಗೆಯೋಕೆ ನಿಮ್ಮ ಅಪ್ಪಂದಿರ್ನ ಬಿಟ್ಟಿದ್ದೀರ‌್ಲ’ ಎಂದು ಕೂಗಾಡಿದ. ಅದನ್ನು ಕೇಳಿಸಿಕೊಂಡ ಮಾಸ್ತರರು ನಮಗೆ ಹಾಗೇ ಬಡಿದರು. ಆಮೇಲೆ ಪುಟ್ಟಣ್ಣನಿಗೂ ಮಾಸ್ತರರಿಗೂ ಅಷ್ಟಕ್ಕಷ್ಟೇ ಎಂದು.

ಈರುಳ್ಳಿಯ ಬೆಲೆ ನಿಲ್ಲದೆ ಏರುತ್ತಲೇ ಇದೆ. ಅದರ ನೆನಪು ಒಗರುಮಿಶ್ರಿತ ಖಾರದಂತೆ, ಅದರ ಕಟುವಾಸನೆಯಂತೆ ವೈವಿಧ್ಯ ನೆನಪುಗಳನ್ನು ತರುತ್ತಿದೆ.

ಗೋರೂರು ಶಿವೇಶ್‌

Advertisement

Udayavani is now on Telegram. Click here to join our channel and stay updated with the latest news.

Next