ಬೆಂಗಳೂರು: ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ ಅಧ್ಯಕ್ಷ-ಉಪಾಧ್ಯಕ್ಷ ಎಂಬ ನಾಮಫಲಕಗಳನ್ನು ಹಾಕಿಕೊಂಡು ಓಡಾಡುವ ನೂರಾರು ವಾಹನಗಳಿಗೆ ಶುಕ್ರವಾರ ಸಾರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದರು.
ಸಾರಿಗೆ ಅಧಿಕಾರಿಗಳು ಹತ್ತು ತಂಡಗಳನ್ನು ಮಾಡಿ, ವಿಐಪಿ ವಾಹನಗಳೇ ಹೆಚ್ಚಾಗಿ ಸಂಚರಿಸುವ ಮಾರ್ಗಗಳಲ್ಲಿ ದೋಷಪೂರಿತ ಸಂಖ್ಯಾಫಲಕ ಹೊಂದಿರುವ ವಾಹನಗಳ ವಿರುದ್ಧ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದರು. ಈ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಿವಿಧ ಪಕ್ಷಗಳು, ಇಲಾಖೆಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳ ವಾಹನಗಳನ್ನು ತಡೆದ ಅಧಿಕಾರಿಗಳು, ಅವುಗಳ ವಿರುದ್ಧ ಪ್ರಕರಣ ದಾಖಲಿಸಿದರು.
ನಿಯಮದ ಪ್ರಕಾರ ವಾಹನಗಳ ಸಂಖ್ಯಾಫಲಕವನ್ನು ಮಾತ್ರ ಸ್ಪಷ್ಟವಾಗಿ ಕಾಣುವಂತೆ ಹಾಕಬೇಕು. ಆದರೆ, ಕೆಲವರು ಸಂಖ್ಯಾಫಲಕದೊಂದಿಗೆ ತಮ್ಮ ಹುದ್ದೆ ಅಥವಾ ಪದನಾಮವನ್ನೂ ಅಳವಡಿಸಿಕೊಂಡಿರುವುದು ಕಾರ್ಯಾಚರಣೆ ವೇಳೆ ಕಂಡುಬಂತು. ಅಂತಹ ವಾಹನಗಳ ವಿರುದ್ಧ “ದೋಷಪೂರಿತ ಸಂಖ್ಯಾಫಲಕ’ ಎಂದು ಪ್ರಕರಣ ದಾಖಲಿಸಲಾಯಿತು. ಕೆಲವರು ಸ್ಥಳದಲ್ಲೇ ದಂಡ ಪಾವತಿಸಿದರು.
ಇಡೀ ದಿನ ಸುಮಾರು 4,500 ವಾಹನಗಳನ್ನು ತಪಾಸಣೆಗೊಳಪಡಿಸಿದ್ದು, ಅಂದಾಜು 320 ದೋಷಪೂರಿತ ಸಂಖ್ಯಾಫಲಕ ಹೊಂದಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ವಾಹನಗಳ ಮಾಲಿಕರಿಗೆ ನೋಟಿಸ್ ನೀಡಿದ್ದು, 10ರಿಂದ 14 ದಿನಗಳಲ್ಲಿ ಉತ್ತರಿಸಲು ಸೂಚಿಸಲಾಗಿದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್ ತಿಳಿಸಿದರು.
ನಗರದ ಕಬ್ಬನ್ ಉದ್ಯಾನ, ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ, ಕ್ವಿನ್ಸ್ ರಸ್ತೆ, ಕಾರ್ಪೋರೇಷನ್ ವೃತ್ತ, ಶಿವಾನಂದ ವೃತ್ತ, ವೆಸ್ಟ್ ಆಫ್ ಕಾರ್ಡ್ ರೋಡ್ ಸೇರಿದಂತೆ ಹತ್ತು ಕಡೆಗಳಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಪಿ. ನಾರಾಯಣಸ್ವಾಮಿ, ಜಂಟಿ ಆಯುಕ್ತರಾದ ಜ್ಞಾನೇಂದ್ರ ಕುಮಾರ್, ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.