Advertisement

ಏರೊತ್ತಡದ ನೀರು ಮನೆಯ ಮೇಲೆ ಟ್ಯಾಂಕ್‌ ಏಕೆ?

01:34 PM Mar 06, 2017 | |

ಸಾಮಾನ್ಯವಾಗಿ ಮನೆಗೆ ನೀರು ಸಾಕಷ್ಟು ಪ್ರಷರ್‌ನಿಂದ ಬರಲು ಸೂರು ಮೇಲಿನ ಟ್ಯಾಂಕ್‌ಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಕೆಲವೊಮ್ಮೆ ಇದೂ ಕೂಡ ಸಾಲದು ಎಂದು ಮತ್ತೂಂದು ಹತ್ತು ಅಡಿಗಳಷ್ಟು ಎತ್ತರಕ್ಕೆ ಇಡಲು ಪ್ರತ್ಯೇಕವಾಗಿ ಕಾಲಂಗಳನ್ನು ಹಾಕಿ ಅಲ್ಲಿ ದೊಡ್ಡ ಟ್ಯಾಂಕ್‌ಗಳನ್ನು ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯ ಮೇಲೆ ಅನಗತ್ಯ ಭಾರ ಬೀಳುವುದರ ಜೊತೆಗೆ ನೋಡಲೂ ಕೂಡ ಪ್ಲಾಸ್ಟಿಕ್‌ ಟ್ಯಾಂಕ್‌ಗಳು ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ, ಅದರಲ್ಲೂ ಕಿರೀಟದಂತೆ ಮನೆಯ ಉತ್ತುಂಗದಲ್ಲಿ ರಾರಾಜಿಸುವುದು ಎಲ್ಲರಿಗೂ ಇಷ್ಟವಾಗುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಏರೊತ್ತಡದ ನೀರು ಸರಬರಾಜು ವ್ಯವಸ್ಥೆ ಜನಪ್ರಿಯವಾಗುತ್ತಿರುವುದರಿಂದ ನಾವು ಮನೆಯ ಮೇಲೆ ದೊಡ್ಡ ಟ್ಯಾಂಕ್‌ ಇಡಲೇಬೇಕು ಎಂದೇನೂ ಇಲ್ಲ.  ಸಂಪ್‌ ಸಾಕಷ್ಟು ದೊಡ್ಡದಿದ್ದರೆ ಸಾಕು. ಇಲ್ಲಿಂದಲೇ ಪಂಪ್‌ ಮೂಲಕ ನೀರಿನ ಕೊಳವೆಗಳಿಗೆ ನೇರವಾಗಿ ಸರಬರಾಜು ಮಾಡಿ, ಮೇಲೆ ಹತ್ತಿ ಕೆಳಗೆ ಬರುವ ವ್ಯವಸ್ಥೆಯಿಂದ ಮುಕ್ತಿ ಪಡೆಯಬಹುದು.

Advertisement

ಹೈ ಪ್ರಷರ್‌ ಸಿಸ್ಟಮ್‌
ಮನೆಗಳ ಮೇಲೆ ಟ್ಯಾಂಕ್‌ ಇಡಲು ಮುಖ್ಯ ಕಾರಣ ಅದು ಗುರುತ್ವಾಕರ್ಷಣೆಯ ಮೂಲಕ ಅಧಿಕ ಒತ್ತಡದೊಂದಿಗೆ ನೀರನ್ನು ನಮಗೆ ಬೇಕಾದೆಡೆ ಕಳುಹಿಸಲು ಸಾಧ್ಯ ಎಂಬುದಾಗಿದ್ದು. ನಾವು ಇತರೆ ಮೂಲಗಳಿಂದ ನೀರನ್ನು ಸಾಕಷ್ಟು ಒತ್ತಡದಲ್ಲಿ ಕೊಳಾಯಿ, ಶವರ್‌ ಹಾಗೂ ಮತ್ತೂಂದಕ್ಕೆ ಕಳುಹಿಸಲು ಸಾಧ್ಯವಾದರೆ, ಓವರ್‌ ಹೆಡ್‌ ಟ್ಯಾಂಕ್‌ಗಳ ಅಗತ್ಯವೇ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಏರೊತ್ತಡದ ಪಂಪ್‌ಗ್ಳು ಲಭ್ಯವಿದ್ದು, ಇವು ಕೊಳಾಯಿ ತಿರುಗಿಸಿದೊಡನೆ ತಮ್ಮ ಕಾರ್ಯ ಶುರುಮಾಡಿಕೊಂಡು, ನಿಗಧಿತ ಪ್ರಷರ್‌ನಲ್ಲಿ ಇಡೀ ಮನೆಗೆ ಒಂದೇ ರೀತಿಯಲ್ಲಿ ನೀರನ್ನು ಸರಬರಾಜು ಮಾಡಬಲ್ಲವು. 

ಇತ್ತೀಚಿನ ದಿನಗಳಲ್ಲಿ ಲಭ್ಯವಾಗುತ್ತಿರುವ ಗ್ಯಾಜೆಟ್‌ನಂತಿರುವು ಹೈಟೆಕ್‌ ಬಾತ್‌ ರೂಮ್‌ ಫಿಟಿಂಗ್‌ಗಳಿಗೆ ಮನೆಯ ಮೇಲಿರಿಸಿರುವ ಮಾಮೂಲಿ ಟ್ಯಾಂಕ್‌ಗಳ ಎತ್ತರದಿಂದ ಉಂಟಾಗುವ ಒತ್ತಡ ಸಾಲುವುದಿಲ್ಲ. ಹಾಗಾಗಿ ಮತ್ತಷ್ಟು ಪ್ರಷರ್‌ ಪಡೆಯಲು ಏರೊತ್ತಡದ ಪಂಪ್‌ಗ್ಳನ್ನು ಅಳವಡಿಸುವುದು ಅನಿವಾರ್ಯವಾಗುತ್ತದೆ. ಒಮ್ಮೆ ನಮ್ಮ ಮನೆಗೆ ಏರೊತ್ತಡದ ಪಂಪ್‌ಗ್ಳನ್ನು ಅಳವಡಿಸಿದ ಮೇಲೆ, ಸೂರಿನ ಮೇಲೆ ದೊಡ್ಡ ಟ್ಯಾಂಕ್‌ಗಳನ್ನು ಇಡುವ ಅಗತ್ಯವೂ ಇರುವುದಿಲ್ಲ.

ನೀರು ಉಳಿತಾಯ
ಮಾಮೂಲಿ ಪ್ರಷರ್‌ನಲ್ಲಿ ಬರುವ ನೀರು ಅಷ್ಟೊಂದು ಚೆನ್ನಾಗಿ ಪಾತ್ರೆ ಮತ್ತೂಂದನ್ನು ತೊಳೆಯುವುದಿಲ್ಲ. ಹಾಗೆಯೇ ಸ್ನಾನ ಮಾಡಲೂ ಕೂಡ ಅದರಲ್ಲೂ ಶವರ್‌ಗೆ ಸಾಕಷ್ಟು ಒತ್ತಡದಲ್ಲಿ ನೀರು ಬರುತ್ತಿದ್ದರೆ, ಆರಾಮದಾಯಕ ಆಗಿರುವುದರ ಜೊತೆಗೆ ಸ್ನಾನವನ್ನೂ ಕೂಡ ಕಡಿಮೆ ನೀರಿನಲ್ಲಿ ಮುಗಿಸಬಹುದು. ಸಾಮಾನ್ಯವಾಗಿ ಹೈ ಪ್ರಷರ್‌ ಒದಗಿಸಲು, ಶವರ್‌ ಇತ್ಯಾದಿಗಳಿಗೆ ಸಣ್ಣ ರಂಧ್ರಗಳನ್ನು ಹೊಂದಿರುವ ಸಲಕರಣೆಗಳನ್ನು ವಿನ್ಯಾಸ ಮಾಡಿರುತ್ತಾರೆ.  ಆದುದರಿಂದ, ಕಡಿಮೆ ನೀರು ಖರ್ಚು ಆಗುತ್ತಲೇ ನಮಗೆ ಹೆಚ್ಚು ಸ್ನಾನ ಮಾಡಿದ ಅನುಭವ ಕೊಡುತ್ತದೆ. ಇದರಿಂದ ಸಾಕಷ್ಟು ನೀರು ಉಳಿತಾಯ ಆಗುವ ಸಾಧ್ಯತೆ ಇರುತ್ತದೆ. 

ಪವರ್‌ ಕಟ್‌ ಆದರೆ..?
ಏರೊತ್ತಡದ ಪಂಪ್‌ಗ್ಳು ವಿದ್ಯುತ್‌ ನಂಬಿಕೊಂಡಿರುವುದರಿಂದ, ಅವಕ್ಕೆ ನಿರಂತರವಾಗಿ ಎಲೆಕ್ಟ್ರಿಕ್‌ ಸಪ್ಲೆ„ ಇರಬೇಕಾದದ್ದು ಅನಿವಾರ್ಯವಾಗಿರುತ್ತದೆ. ಆದುದರಿಂದ ಈ ಪಂಪ್‌ಗ್ಳನ್ನು ಯುಪಿಎಸ್‌ ಮಾದರಿಯ ವ್ಯವಸ್ಥೆಗೆ ಅಳವಡಿಸಬೇಕಾಗುತ್ತದೆ. ಮಾಮೂಲಿ ಪಂಪ್‌ ಆದರೆ, ದಿನಕ್ಕೆ ಅರ್ಧ ಗಂಟೆಯಲ್ಲಿ ಇಡೀ ದಿನಕ್ಕೆ ಬೇಕಾಗುವಷ್ಟು ಪಂಪ್‌ ಮಾಡಿಬಿಡಲಿ ಎಂದು ಸಾಕಷ್ಟು ದೊಡ್ಡ ಪಂಪ್‌ ಅನ್ನು ಅಳವಡಿಸಲಾಗುತ್ತದೆ. ಆದರೆ ಪ್ರಷರ್‌ ಪಂಪ್‌ಗ್ಳು ನಾವು ಎಷ್ಟು ಕೊಳಾಯಿಗಳನ್ನು ಏಕಕಾಲಕ್ಕೆ ಬಳಸುತ್ತೇವೆ ಎಂಬುದನ್ನು ಆಧರಿಸಿ, ಆಗಾಗ ಮಾತ್ರ ಕಾರ್ಯ ನಿರ್ವಹಿಸುವುದರಿಂದ, ಇವು ಹೆಚ್ಚು ದೊಡ್ಡದಿರುವುದಿಲ್ಲ. ಹಾಗಾಗಿ ನಮ್ಮ ಮನೆಯ ಯುಪಿಎಸ್‌ಗೆ ಸಾಮಾನ್ಯವಾಗಿ ಪಂಪ್‌ಗ್ಳನ್ನು ಕನೆಕ್ಟ್ ಮಾಡದಿದ್ದರೂ ಪ್ರಷರ್‌ ಪಂಪ್‌ಗ್ಳಿಗೆ ಉಪಿಎಸ್‌ ವ್ಯವಸ್ತೆ ಮಾಡಬಹುದು. ಕೆಲವೊಮ್ಮೆ ಹೀಗೆ ಮಾಡಲಾಗದಿದ್ದರೆ, ವನ್‌ ವೆ ವಾಲ್‌Ì ಗಳನ್ನು ಸಣ್ಣದೊಂದು ಟ್ಯಾಂಕ್‌ಗೆ ಅಳವಡಿಸಿ, ತಾರಸಿಯ ಮೇಲೆ ಇರಿಸಿದರೆ, ಇದರಿಂದ, ವಿದ್ಯುತ್‌ ಇಲ್ಲದ ಸಮಯದಲ್ಲಿ ಕೊಳಾಯಿಗಳಿಗೆ ನೀರು ಸರಬರಾಜು ಆಗುವಂತೆ ಮಾಡಬಹುದು.

Advertisement

ಸಂಪ್‌-ಟ್ಯಾಂಕ್‌ ಲೆಕ್ಕಾಚಾರ
ಮನೆಯ ಮೇಲೆ ದೊಡ್ಡ ಟ್ಯಾಂಕ್‌ ಇದ್ದರೆ, ಸಂಪ್‌ ಗಾತ್ರವನ್ನು ಸ್ವಲ್ಪ ಚಿಕ್ಕದಾಗಿಸುವುದು ಇದ್ದದ್ದೇ. ಆದರೆ ಸೂರಿನ ಟ್ಯಾಂಕ್‌ ಇಲ್ಲದಿದ್ದಾಗ ನಮ್ಮ ಮನೆಯ ಸಂಪ್‌ ಟ್ಯಾಂಕ್‌ ಅನ್ನು ಸಾಕಷ್ಟು ದೊಡ್ಡದಾಗಿ ಕಟ್ಟಿಕೊಳ್ಳುವುದು ಉತ್ತಮ. ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ, ತಿಂಗಳಿಗೆ ಈ ಹಿಂದೆ ಎಷ್ಟು ಲೀಟರ್‌ ನೀರು ಬಳಸುತ್ತಿದ್ದದ್ದು ಎಂಬುದನ್ನು ಆಧರಿಸಿ ಸಂಪ್‌ ಟ್ಯಾಂಕ್‌ ಗಾತ್ರವನ್ನು ನಿರ್ಧರಿಸಲಾಗುತ್ತದೆ. ಬೆಂಗಳೂರಿನಂಥ ಮಹಾನಗರದಲ್ಲಿ ದಿನವೂ ನೀರು ಬರುವುದಿಲ್ಲ. ಹಾಗಾಗಿ ಎರಡು ಮೂರು ದಿನಕ್ಕೆ ಸಾಲುವಷ್ಟು ನೀರು ಸಂಗ್ರಹಿಸುವುದು ಪರಿಪಾಠವಾಗಿದೆ. ಜೊತೆಗೆ ಸಂಪ್‌ ಗಾತ್ರ ಕಡೇಪಕ್ಷ ಆರು ಸಾವಿರ ಲೀಟರ್‌ ನಷ್ಟಾದರೂ ಇದ್ದರೆ ಒಳ್ಳೆಯದು. ಕೊಳಾಯಿ ನೀರು ಬರದಿದ್ದರೆ, ವಾಟರ್‌ ಟ್ಯಾಂಕರ್‌ ನಿಂದ ಸರಬರಾಜು ಮಾಡಿಸಿಕೊಳ್ಳಬೇಕಾಗುತ್ತದೆ. ಇವುಗಳು ಸುಮಾರು ಆರುಸಾವಿರ ಲೀಟರ್‌ ಸಾಮರ್ಥ್ಯ ಹೊಂದಿರುವುದರಿಂದ, ನಮ್ಮ ಮನೆಯ ಟ್ಯಾಂಕ್‌ ಕೂಡ ಕನಿಷ್ಟ ಇಷ್ಟು ದೊಡ್ಡದಿರಬೇಕಾಗುತ್ತದೆ.    

ಇತರೆ ಲಾಭಗಳು ಇವು
ಒಮ್ಮೆ ಮನೆಯ ಮೇಲೆ ಟ್ಯಾಂಕ್‌ಗಳನ್ನು ಇಡುವ ಅನಿವಾರ್ಯತೆ ಇಲ್ಲದಾದಾಗ, ನಾವು ಸಹಜವಾಗೆ ಈ ಜಾಗವನ್ನು ಇತರೆ ಉಪಯೋಗಕ್ಕೆ ಬಳಸಬಹುದು. ಒಮ್ಮೆ ಟ್ಯಾಂಕ್‌ ಇದ್ದರೆ, ಸೂರಿಗೆ ಹತ್ತಿ ಅದನ್ನು ಆಗಾಗ ಕ್ಲೀನ್‌ ಮಾಡುವುದೂ ಅನಿವಾರ್ಯವಾಗುತ್ತದೆ. ಟ್ಯಾಂಕೇ ಇಲ್ಲದಿದ್ದರೆ, ಈ ಕಿರಿಕಿರಿಯ ವಿಷಯವೂ ಇಲ್ಲದಾಗುತ್ತದೆ. ಕೆಲವೊಮ್ಮೆ ಈ ಟ್ಯಾಂಕ್‌ಗಳ ಮುಚ್ಚಳಗಳು ಗಾಳಿಗೆ ಹಾರಿಹೋಗಿ ಇಲ್ಲ ತೆರೆದುಕೊಂಡು ಕಸಕಡ್ಡಿ ಹಾರಿಬಂದು ಬೀಳುವುದರ ಜೊತೆಗೆ ಪಾಚಿ ಕಟ್ಟುವುದೂ ಇರುತ್ತದೆ. ಎರಡು ಮೂರು ಮಟ್ಟದಲ್ಲಿರುವ ಟ್ಯಾಂಕ್‌ಗಳಿಗೆ ಬಾಲ್‌ ವಾಲ್‌Ì ಇತ್ಯಾದಿ ಅಳವಡಿಸಿದ್ದರೆ, ಇವುಗಳ ನಿರ್ವಹಣೆಯೂ ಸೂರು ಹತ್ತಿ ಮಾಡಬೇಕಾಗುತ್ತದೆ. ಏರೊತ್ತಡದ ಪಂಪ್‌ ಸಾಮಾನ್ಯವಾಗಿ ಕೆಳಮಟ್ಟದಲ್ಲೇ ಇರುವುದರಿಂದ, ಅವುಗಳ ನಿರ್ವಹಣೆ ಕಷ್ಟ ಎಂದೆನಿಸುವುದಿಲ್ಲ. 

ಆರ್ಕಿಟೆಕ್ಟ್ ಕೆ ಜಯರಾಮ್‌
ಹೆಚ್ಚಿನ ಮಾತಿಗೆ ಫೋನ್‌ 98441 32826

Advertisement

Udayavani is now on Telegram. Click here to join our channel and stay updated with the latest news.

Next