Advertisement
ಮಳೆಗಾಲದಲ್ಲಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಕಡಲ್ಕೊರೆತ ತಡೆಗೆ ತಾತ್ಕಾಲಿಕವಾಗಿ ಕಲ್ಲು ಹಾಕಲಾಗುತ್ತದೆ. ಮಳೆಗಾಲ ಮುಗಿದ ಅನಂತರ ಅದಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆದು ಕಲ್ಲನ್ನು ಪುನರ್ ಜೋಡಿಸಲಾಗುತ್ತದೆ. ಮುಂದಿನ ವರ್ಷ ಮಳೆಗಾಲದಲ್ಲಿ ಮತ್ತದೇ ಗೋಳು. ಸಚಿವ, ಶಾಸಕರು ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿ ಕಲ್ಲು ಇದ್ದರಾಯಿತು. ಅದನ್ನು ವೈಜ್ಞಾನಿಕವಾಗಿ ಹಾಕಲಾಗಿದೆಯೇ ಅಥವಾ ಅದರಿಂದ ಕಡಲ್ಕೊರೆತ ಕಡಿಮೆ ಆಗಿದೆಯೇ ಇದ್ಯಾವುದೂ ಗಣನೆಗೆ ಬರುವುದಿಲ್ಲ. ಅನುದಾನ ಮಾತ್ರ ಬರುತ್ತಲೇ ಇರುತ್ತದೆ.
ಉಡುಪಿ, ದ.ಕ. ಮತ್ತು ಉತ್ತರ ಕನ್ನಡದಲ್ಲಿ ಪ್ರತೀ ವರ್ಷ ಆಗುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ನೂರು ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳೆದ ವರ್ಷವೇ ಸಲ್ಲಿಸಲಾಗಿದೆ. ಆದರೆ ಅನುಮೋದನೆ ಸಿಕ್ಕಿಲ್ಲ. ವಿಶೇಷವಾಗಿ ಮರವಂತೆಯಲ್ಲಿ ಆಗುತ್ತಿರುವ ಕಡಲ್ಕೊರೆತ ತಪ್ಪಿಸಲು 4 ಕೋ.ರೂ.ಗಳ ಪ್ರತ್ಯೇಕ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅದು ಕೂಡ ಮಂಜೂರಾಗಿಲ್ಲ. ಡಕ್‌ಫುಟ್ ತಂತ್ರಜ್ಞಾನ
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವಾಗಿ ಡಕ್‌ಫುಟ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಮರವಂತೆಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿ ಮಾಡುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಎಂಜಿನಿಯರ್‌ಗಳ ಮೂಲಕ ವರದಿಯನ್ನು ಪಡೆದಿದೆ. ಡಕ್‌ಫುಟ್ ತಂತ್ರಜ್ಞಾನ ಅಳವಡಿಸುವ ಮೊದಲು ಕೇಂದ್ರದ ಜಲಶಕ್ತಿ ಸಚಿವಾಲಯದ ಅಧೀನದಲ್ಲಿ ಬರುವ ಸೆಂಟ್ರಲ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಸೆಂಟರ್(ಸಿಡಬ್ಲ್ಯುಪಿಆರ್‌ಎಸ್) ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಆದರೆ ಅವರು ಭೇಟಿ ನೀಡಿಲ್ಲ.
Related Articles
ಉಡುಪಿ ಜಿಲ್ಲೆಯಲ್ಲಿ 2018-19ರಲ್ಲಿ 21.43 ಕೋ.ರೂ., 2019-20ರಲ್ಲಿ 21.17 ಕೋ.ರೂ., 2020-21ರಲ್ಲಿ 24.32 ಕೋ.ರೂ.ಗಳನ್ನು ಸರಕಾರದಿಂದ ನೀಡಲಾಗಿದೆ. ಎಡಿಬಿ ನೆರವಿನಿಂದ 2018-19ರಲ್ಲಿ 103.03 ಕೋ.ರೂ., 2019-20ರಲ್ಲಿ 58.17 ಕೋ.ರೂ. ಹಾಗೂ 2020-21ರಲ್ಲಿ 22.07 ಕೋ.ರೂ. ಹಂಚಿಕೆ ಮಾಡಲಾಗಿದೆ. ಮೂರು ವರ್ಷಗಳಲ್ಲಿ ಸರಿಸುಮಾರು 250 ಕೋ.ರೂ.ಗಳನ್ನು ಕಡಲ್ಕೊರೆತ ತಡೆಗೆ ವ್ಯಯಿಸಲಾಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ತಡೆಗೆ ಸುಮಾರು 89.79 ಕೋ.ರೂ. ಮೀಸಲಿಡಲಾಗಿದೆ. ಮೂರು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಕಡಲ್ಕೊರೆತಕ್ಕೆ ಕೋಟ್ಯಂತರ ರೂ.ಗಳನ್ನು ವ್ಯಯಿಸಲಾಗಿದೆ.
ಸ್ಥಳೀಯರ ಆಗ್ರಹಕಡಲ್ಕೊರೆತಕ್ಕೆ ಕಲ್ಲು ಹಾಕುವ ಸಂದರ್ಭದಲ್ಲಿ ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕು. ಮೊದಲಿಗೆ ತೀರದಲ್ಲಿ ಹೊಂಡ ತೋಡಿ ಶೀಟ್‌ಗಳನ್ನು ಅಳವಡಿಸಿ, ಮಣ್ಣಿನ ಚೀಲಗಳನ್ನು ಇರಿಸಿ ಕಲ್ಲು ಜೋಡಿಸಬೇಕು. ಕಡಲ್ಕೊರೆತ ತಡೆಯಲು ತರಾತುರಿಯಲ್ಲಿ ಕಲ್ಲು ತಂದು ಸುರಿಯಲಾಗುತ್ತಿದೆ. ಮಳೆಗಾಲ ಮುಗಿಯುವ ವೇಳೆಗೆ ಅವು ಸಮುದ್ರದ ಪಾಲಾಗಿರುತ್ತವೆ. ಮರವಂತೆಯಲ್ಲಿ “ಟಿ’ ಆಕಾರದಲ್ಲಿ ತಡೆಗೋಡೆ ನಿರ್ಮಿಸಿರುವ ಮಾದರಿಯಲ್ಲಾದರೂ ಕಡಲ್ಕೊರೆತ ತಡೆಗೆ ಕ್ರಮ ಆಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಕಲ್ಲು ಹಾಕಲು ಹಿಂದೇಟು
ಕಳೆದ ವರ್ಷ ಕಡಲ್ಕೊರೆತಕ್ಕೆ ಹಾಕಿದ ಕಲ್ಲಿನ ಬಿಲ್ ಪಾವತಿ ಆಗದೇ ಇರುವುದರಿಂದ ಈ ವರ್ಷ ಗುತ್ತಿಗೆದಾರರು ಕಲ್ಲು ಹಾಕಲು ಮುಂದೆ ಬರುತ್ತಿಲ್ಲ. ಅಲ್ಲದೆ ಇ-ಟೆಂಡರ್ ಮೂಲಕ ಕಲ್ಲು ಹಾಕುವ ಪ್ರಕ್ರಿಯೆ ನಡೆಯುವುದರಿಂದ ಮುಂದೆ ಟೆಂಡರ್ ನಡೆದಾಗ ಅವರಿಗೆ ಸಿಗದೇ ಇರಬಹುದು. ಆಗ ಬಿಲ್ ಪಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಕಡಲ್ಕೊರೆತದ ಬಗ್ಗೆ ಆಯಾ ಜಿಲ್ಲಾಡಳಿತ ಮತ್ತು ಇಲಾಖೆಯ ಸ್ಥಳೀಯ ಎಂಜಿನಿಯರ್‌ಗಳು ಗಮನಕ್ಕೆ ತಂದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸ್ವಲ್ಪ ಅನುದಾನದ ಕೊರತೆಯಿದೆ. ಡಕ್‌ಫುಟ್ ತಂತ್ರಜ್ಞಾನ ಅಳವಡಿಸಿ ತಡೆಗೋಡೆ ನಿರ್ಮಿಸುವ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸರಕಾರದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
-ಕ್ಯಾ| ಸಿ. ಸ್ವಾಮಿ, ನಿರ್ದೇಶಕ, ಮೂಲಸೌಕರ್ಯ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಕಾರವಾರ
-ರಾಜು ಖಾರ್ವಿ ಕೊಡೇರಿ