ಸುಳ್ಯ: ಬೇಸಗೆ ಬಿಸಿಗೆ ತಂಪೆರೆಯಲು ಕರಾವಳಿ ಪಟ್ಟಣಗಳಲ್ಲಿ ‘ಕಣ್ಣು’ ಎಂದೇ ಜನಜನಿತವಾಗಿರುವ ‘ಈರೋಲ್’ (ತಾಳೆ ಹಣ್ಣು) ಬೀದಿ ಬದಿಗಳಲ್ಲಿ ಮಾರಾಟಕ್ಕೆ ಲಗ್ಗೆ ಇಟ್ಟಿದೆ..! ಎಳ ನೀರಿನ ಒಳಭಾಗದ ಎಳೆ ತಿರುಳನ್ನು ಸುತ್ತಿಟ್ಟಂತೆ ಕಾಣುವ ಈರೋಲ್ ಹಣ್ಣಿನ ತಿರುಳಿಗೆ ಬಲು ಬೇಡಿಕೆ. ರುಚಿ ಮತ್ತು ಆರೋಗ್ಯವರ್ಧಕ ಹಣ್ಣು ಇದಾಗಿದೆ. ಹಾಗಾಗಿ ಖರೀದಿಗೆ ಮುಗಿ ಬೀಳುವವರ ಸಂಖ್ಯೆ ಹೆಚ್ಚಿದೆ.
ತುಳುವಿನಲ್ಲಿ ಈರೋಲ್, ಕನ್ನಡದಲ್ಲಿ ತಾಳೆ, ಮರಾಠಿಯಲ್ಲಿ ತಾಡಗೋಲಾ, ತಮಿಳಿನಲ್ಲಿ ನುಂಗು, ತೆಲುಗಿನಲ್ಲಿ ತಾಟಿ ಮುಂಜಳಿ ಎಂದು ಬೇರೆ-ಬೇರೆ ಭೂ ಭಾಗದಲ್ಲಿ ಹಲವು ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇಲ್ಲೆಲ್ಲಾ ಈರೋಲ್ ಬಲು ಪ್ರಸಿದ್ಧಿ ಪಡೆದಿದೆ.
ಈ ಹಣ್ಣು ದೇಹದ ತಾಪಮಾನ ನಿಯಂತ್ರಕ ಎಂಬ ಕಾರಣದಿಂದ ಬೇಸಗೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೊಟ್ಟೆಯುರಿ, ನಿರ್ಜಲೀಕರಣ ಸಮಸ್ಯೆಗಳಿಂದ ರಕ್ಷಣೆ ಇತ್ಯಾದಿಗಳಿಗೆ ಮುಖ್ಯವೆನಿಸಿದೆ. ಹೇರಳ ಪೋಷಕಾಂಶವು ಈ ಹಣ್ಣಿನಲ್ಲಿದೆ. ಹಾಗಾಗಿ ಹಣ್ಣಿನ ತಿರುಳಿನ ಪಾನೀಯ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಜತೆಗೆ ಸೇವೆನೆಗೆ ಅನುಗುಣವಾಗಿ ಬೇರೆ-ಬೇರೆ ರೀತಿಯಲ್ಲಿಯೂ ಹಣ್ಣನ್ನು ಬಳಸಲಾಗುತ್ತದೆ.
ಪಾಲಕ್ಕಾಡಿನಿಂದ ಸುಳ್ಯಕ್ಕೆ
ಕೇರಳದ ಪಾಲಕ್ಕಾಡ್‌ನಿಂದ ತಾಳೆ ಹಣ್ಣು ಸುಳ್ಯಕ್ಕೆ ಪ್ರವೇಶಿಸಿದೆ. ನಗರದ ಮುಖ್ಯ ರಸ್ತೆ, ಸುಳ್ಯ-ಸೋಣಂಗೇರಿ ರಸ್ತೆ ಬದಿಗಳಲ್ಲಿ ವ್ಯಾಪಾರ ಬಿರುಸಿನಿಂದ ಸಾಗಿದೆ. ಕರ್ನಾಟಕ ಸೇರಿದಂತೆ ನಾನಾ ಭಾಗಗಳಲ್ಲಿ ತಾಳೆ ಕೃಷಿ ಇದೆ. ಸುಳ್ಯದಲ್ಲಿಯ ಈ ಕೃಷಿ ಆರಂಭಗೊಂಡಿದೆ. ತಾಳೆ ಬಹೂಪಯೋಗಿ ಬೆಳೆ ಆಗಿರುವ ಕಾರಣ, ವರ್ಷವಿಡಿ ಪ್ರಯೋಜನಕಾರಿ. ಜನರಿಂದ ಉತ್ತಮ ಬೇಡಿಕೆ ಇದೆ. ಪಾಲಕ್ಕಾಡಿನಿಂದ ತಂದು ಮಾರಾಟ ಮಾಡುತ್ತಿದ್ದೇವೆ. ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತದೆ ಎನ್ನುತ್ತಾರೆ ರಥಬೀದಿ ಬದಿಯಲ್ಲಿನ ವ್ಯಾಪಾರಿ ಕೇರಳದ ಮುರುಗೇಶ.
ಒಂದು ತಾಳೆಹಣ್ಣಿಗೆ 30 ರೂ. ದರ ಇದೆ. ಹಣ್ಣಿನಲ್ಲಿ ಮೂರು ಅಥವಾ ಒಂದು ಒಳ ತಿರುಳಿದೆ. ಇಡೀ ಹಣ್ಣು ಖರೀದಿಗಿಂತಲೂ, ತಿನ್ನಲು ಬಳಸುವ ಒಳ ತಿರುಳು ಅನ್ನು ಪ್ರತ್ಯೇಕ್ಷಿಸಿ ಮನೆಗೆ ಕೊಂಡು ಹೋಗುತ್ತಾರೆ. ಮನೆಯಲ್ಲಿಯೂ ಪಾನೀಯ ತಯಾರಿಸಿ ಸೇವಿಸುತ್ತಾರೆ.
ಕಿರಣ್ ಪ್ರಸಾದ್ ಕುಂಡಡ್ಕ