Advertisement
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಸುಮಾರು 80 ಅಡಿ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕುವ ಈ ಜಲಧಾರೆಯನ್ನು ನೋಡುವುದೇ ಒಂದು ಹಬ್ಬ. ಒಂದು ಕಡೆ ಆಕಾಶದೆತ್ತರ ಬೆಳೆದು ನಿಂತ ಮರಗಳು,ಹಚ್ಚ ಹಸುರಿನ ಪ್ರಕೃತಿ, ಇನ್ನೊಂದು ಕಡೆ ಜೀರುಂಡೆಗಳ ಕಲರವ, ಮತ್ತೂಂದು ಕಡೆ ಮನಸ್ಸಿಗೆ ಖುಷಿ ನೀಡುವ ಜಲಧಾರೆ. ಈ ಎಲ್ಲ ಅನುಭವಗಳನ್ನು ಒಂದೇ ಕಡೆ ಪಡೆಯಬೇಕೆಂದರೆ ನೀವು ಎರ್ಮಾಯಿಗೆ ಬರಲೇಬೇಕು.
ಎಳುವರೆ ಹಳ್ಳ ಎಂಬ ಜಾಗ ಈ ಜಲಪಾತದ ಉಗಮ ಸ್ಥಾನ.ಹಿಂದೆ ಏಳು ಜನ ಯುವಕರು ಗದ್ದೆ ಉಳುಮೆ ಮಾಡಿ ಎತ್ತುಗಳನ್ನು ಇದೇ ಜಾಗದಲ್ಲಿ ತೊಳೆಯುತ್ತಿದ್ದರಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಎತ್ತುಗಳು ಇದ್ದಕ್ಕಿದ್ದಂತೆ ಮಾಯವಾದವಂತೆ. ತುಳುವಿನಲ್ಲಿ ಎತ್ತಿಗೆ ಎರು ಎಂದು ಕರೆಯುವ ಕಾರಣಕ್ಕೆ ಈ ಜಾಗಕ್ಕೆ ಎರು ಮಾಯ ಎಂಬ ಹೆಸರು ಬಂತಂತೆ. ಕ್ರಮೇಣ ಜನರ ಬಾಯಲ್ಲಿ ಹೀಗೆ ಕರೆಯಲ್ಪಟ್ಟು ಕಡೆಗೆ ಎರ್ಮಾಯಿ ಎಂದಾಯಿತಂತೆ. ಬೆಳ್ತಂಗಡಿಯಿಂದ ಕಾಜೂರಿಗೆ ತೆರಳುವ ಹಾದಿಯಲ್ಲಿ ಬಂದು ಕಾಜೂರಿನಲ್ಲಿ ಇಳಿದು ಕಾಡುದಾರಿಯಲ್ಲಿ 2 ಕಿ.ಮೀ ಕ್ರಮಿಸಿದರೆ ಎರ್ಮಾಯಿ ಜಲಪಾತ ತಲುಪಬಹುದು. ಈ ಜಲಪಾತಕ್ಕೆ ಹೋಗುವುದೇ ಒಂದು ಚಾರಣದ ಅನುಭವವನ್ನು ನೀಡುತ್ತದೆ. ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ನಡುವೆ ಸಿಗುವ ಹಳ್ಳ,ಬೇಡವೆಂದರೆ ಕಾಲುಸಂಕದಲ್ಲೂ ತೆರಳಬಹುದು. ಅಲ್ಲಿಂದ ಪುನಃ ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ದಟ್ಟ ಅಡವಿಯಲ್ಲಿ ದಾರಿ ಹುಡುಕುತ್ತಾ, ಮಧ್ಯದಲ್ಲಿ ಸಿಗುವ ಪುಟ್ಟಝರಿಗಳ ಚೆಲುವನ್ನು ಕಣ್ತುಂಬಿಸಿಕೊಳ್ಳುತ್ತಾ ,ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಿದಂತೆ ಹೊಸಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತದೆ.
Related Articles
Advertisement
ಸೌಮ್ಯಶ್ರೀ.ಎನ್.