ಹೊಸದಿಲ್ಲಿ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನದ ಪರ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗಾನ್ ಅವರು ಮಾತನಾಡಿದ ಬೆನ್ನಲ್ಲೇ ಅದರ ಪರಿಣಾಮ ಇದೀಗ ಗೋಚರಿಸಿದೆ.
ಕಾಶ್ಮೀರ ವಿಚಾರದಲ್ಲಿ ಪಾಕ್ ಪರ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಭಾರತ ಅದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದರಿಂದ ಮುಂದಿನ ಯುದ್ಧನೌಕೆ ತಯಾರಿಯ ಕುರಿತ ಒಪ್ಪಂದವನ್ನು ಟರ್ಕಿ ಕಂಪೆನಿಯೊಂದಿಗೆ ಮಾಡದೇ ಇರಲು ರಕ್ಷಣಾ ಸಚಿವಾಲಯ ಉದ್ದೇಶಿಸಿದೆ ಎನ್ನಲಾಗಿದೆ.
ಹಿಂದೂಸ್ಥಾನ್ ಶಿಪ್‌ಯಾರ್ಡ್ ಲಿ. (ಎಚ್‌ಎಸ್‌ಎಲ್) ಟರ್ಕಿಯ ಮಿಸೆಸ್ ಅಂದೋಲು ಶಿಪ್‌ಯಾರ್ಡ್ ಜತೆಗೆ 16,560 ಕೋಟಿ ರೂ. ವೆಚ್ಚದಲ್ಲಿ ನೌಕೆ ತಯಾರಿಗೆ ಉದ್ದೇಶಿಸಿತ್ತು. ಆದರೀಗ ಅದನ್ನು ಏಕಾಏಕಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಇದಕ್ಕೆ ರಕ್ಷಣಾ ಸಚಿವಾಲಯ ಯಾವುದೇ ಕಾರಣ ಕೊಟ್ಟಿಲ್ಲ. ವಿಶ್ವಸಂಸ್ಥೆಯಲ್ಲಿ ಟರ್ಕಿ ಅಧ್ಯಕ್ಷರ ಭಾಷಣ ಬಳಿಕ ಈ ಬೆಳವಣಿಗೆ ನಡೆದಿದೆ.
ಕಾಶ್ಮೀರ ವಿಚಾರದಲ್ಲಿ ಅಂ.ರಾ. ಸಮುದಾಯ ಏನೂ ಮಾಡುತ್ತಿಲ್ಲ ಎಂದು ಟರ್ಕಿ ಇತ್ತೀಚೆಗೆ ಹೇಳಿತ್ತು. ಈ ಮೂಲಕ ಅದು ಪಾಕ್ ಪರವಾಗಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿತ್ತು.
ಹೊಸ ಮಾದರಿ ಎಫ್ಎಸ್‌ಎಸ್ ಯುದ್ಧ ನೌಕೆಗಳ ತಯಾರಿಕೆ ಒಪ್ಪಂದಕ್ಕೆ ಅಂತಿಮವಾಗಿ ಜರ್ಮನಿ, ಟರ್ಕಿ ಮತ್ತು ಫ್ರಾನ್ಸ್‌ನ ಕಂಪೆನಿಗಳು ಆಯ್ಕೆಯಾಗಿದ್ದವು. ಒಟ್ಟು 5 ನೌಕೆಗಳ ತಯಾರಿ ಉದ್ದೇಶವಿತ್ತು. ಇದುವರೆಗೆ ಯಾವುದೇ ಕಂಪೆನಿಗಳೊಂದಿಗೆ ಒಪ್ಪಂದಕ್ಕೆ ಬರಲಾಗದಿದ್ದರೂ, ಇನ್ನು ಟರ್ಕಿ ಕಂಪೆನಿಯೊಂದಿಗೆ ಒಪ್ಪಂದ ಅತಿ ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಇದರ ಬದಲಿಗೆ ಕೇಂದ್ರ ಸರಕಾರ ಜರ್ಮನಿ ಅಥವಾ ಫ್ರಾನ್ಸ್‌ನ ಕಂಪೆನಿಯನ್ನು ಆಯ್ದುಕೊಳ್ಳಬಹುದು ಎಂದು ಹೇಳಲಾಗಿದೆ. ಒಪ್ಪಂದದ ಅಂತಿಮ ಹಂತದ 2ನೇ ಸುತ್ತಿನಲ್ಲಿ ಹಣಕಾಸಿನ ಚರ್ಚೆಯಷ್ಟೇ ಬಾಕಿ ಇದ್ದವು. ಇದೇ ಮೊದಲ ಬಾರಿಗೆ ಭಾರತದಲ್ಲಿ ನೌಕೆ ತಯಾರಿಕೆ ಕುರಿತಾಗಿ ಟರ್ಕಿ ಕಂಪೆನಿ ಮುಂದೆ ಬಂದಿತ್ತು.