Advertisement
ಬಸವೇಶ್ವರ ನಗರದ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ 175 ಹಾಸಿಗೆಗಳ ಸಾಮರ್ಥ್ಯದ “ಕೋವಿಡ್ ನಿಗಾ ಕೇಂದ್ರ’ವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು. “ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರ ಆರೋಪ ಬರೀ “ಹುಲಿ ಬಂತು ಹುಲಿ…’ ಎಂಬಂತಾಗಿದೆ. ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ವಿಧಾನಸಭೆ ಅಧಿವೇಶನದಲ್ಲಿ ಅವರ ಎಲ್ಲ ಆರೋಪಗಳಿಗೂ ಸರ್ಕಾರ ಉತ್ತರ ನೀಡಲಿದೆ’ ಎಂದರು. ಸರ್ಕಾರದ ತಪ್ಪುಗಳನ್ನು ಸರಿಮಾಡುವ ಅಧಿಕಾರ ಪ್ರತಿಪಕ್ಷ ಹಾಗೂ ಪ್ರತಿಪಕ್ಷ ನಾಯಕರಿಗೆ ಇದೆ. ಆದರೆ, ಅನಗತ್ಯ ಟೀಕೆಗಳನ್ನು ಮಾಡುವುದೇ ಕೆಲಸ ಆಗಬಾರದು. ಹೀಗೆ ಅವ್ಯವಹಾರ ನಡೆದಿದೆ ಎಂದಾದರೆ, ಸಿದ್ದರಾಮಯ್ಯ ಅವರು ದಾಖಲೆನೀಡಲಿ ಎಂದು ಸೋಮಣ್ಣ ಸವಾಲು ಹಾಕಿದರು.
ಲಕ್ಷಣಗಳಿಲ್ಲದ ಹಾಗೂ ಕಡಿಮೆ ಲಕ್ಷಣಗಳಿರುವ ಸೋಂಕಿತರು ಮನೆಯಲ್ಲೇ ಆರೈಕೆಯಲ್ಲಿ ಇರಬಹುದು. ಒಂದು ವೇಳೆ ಸೂಕ್ತ ಸೌಲಭ್ಯ ಇಲ್ಲದಿದ್ದರೆ, ಅಂತಹವರನ್ನು ಈ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತದೆ’ ಎಂದು ಹೇಳಿದರು. ಕೋವಿಡ್ ಸೋಂಕು ಭಯಾನಕ ಕಾಯಿಲೆ ಅಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಕೇವಲ ಎಂಟು ದಿನಗಳಲ್ಲಿ ಕೊರೊನಾ ಮುಕ್ತರಾಗಿ ಮನೆಗೆ ಹಿಂತಿರುಗಬಹುದು ಎಂದರು. ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸ್ಥಳೀಯ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.