ಕಲಬುರಗಿ: ಕೊರೊನಾ ಎರಡನೇ ಅಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಕೋವಿಡ್ ಸೋಂಕಿತರು ದಾಖಲಾಗುತ್ತಿದ್ದು, ಅವರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಎಲ್ಲ ಮೆಡಿಕಲ್, ನರ್ಸಿಂಗ್, ಆಯುರ್ವೇದ, ಹೊಮಿಯೋಪತಿ ಕಾಲೇಜುಗಳಲ್ಲಿರುವ ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪಟ್ಟಿ ಸಲ್ಲಿಸಬೇಕೆಂದು ಅ ಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಔಷಧಿ , ಆಕ್ಸಿಜನ್, ಬೆಡ್‌ಗೆ ಕೊರತೆಯಿಲ್ಲ. ಆದರೆ ಸಮರ್ಪಕವಾಗಿ ಮಾನವ ಸಂಪನ್ಮೂಲ ಬಳಕೆಯಾಗುತ್ತಿಲ್ಲ.
ರೆಡ್‌ಕ್ರಾಸ್, ಭಾರತೀಯ ವೈದ್ಯಕೀಯ ಸಂಘದ ವೈದ್ಯರು ಸೇರಿದಂತೆ ಒಟ್ಟಾರೆ ಎರಡರಿಂದ ಮೂರು ಸಾವಿರ ವೈದ್ಯ ಸಿಬ್ಬಂದಿಯನ್ನು ಕೊರೊನಾ ಸೇವೆಗೆ ಸಿದ್ಧಪಡಿಸಿ ಎಂದು ಜಿಲ್ಲಾ ಆಸ್ಪತ್ರೆ ವೈದ್ಯಾ ಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈಗಾಗಲೇ ಜಿಲ್ಲೆಯ ಎಲ್ಲ ಆಸ್ಪತ್ರೆ ಹಾಗೂ ತಾಲೂಕು ಪ್ರಾಥಮಿಕ ಕೇಂದ್ರಗಳಿಗೆ ರೆಮ್ ಡೆಸಿವಿಯರ್ ಇಂಜೆಕ್ಷನ್ ಪೂರೈಕೆಯಾಗಿದ್ದು, ಇಂಜೆಕ್ಷನ್‌ಗೆ ಕೊರತೆ ಇಲ್ಲ. ಆಕ್ಸಿಜನ್ ಕೂಡಾ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಅವಶ್ಯಕತೆ ಇದ್ದಲ್ಲಿ ಬೇರೆ ರಾಜ್ಯಗಳಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಗಳಿಗೆ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದರೆ ಸರ್ಕಾರ ಅದನ್ನು ಪೂರೈಸಲಿದೆ ಎಂದರು. ಕೊರೊನಾ ರೋಗಿಗಳಗೆ ಆದಷ್ಟು ಬೇಗ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲು ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳಿ.
ಸರ್ಕಾರದಿಂದ ಅನುಮತಿ ಹಾಗೂ ಉಪಕರಣ ಕೊಡಿಸಲಾಗುವುದು ಎಂದು ಸಂಸದರು ಜಿಮ್ಸ್ ಸಂಸ್ಥೆ ನಿರ್ದೇಶಕಿ ಡಾ| ಕವಿತಾ ಪಾಟೀಲಗೆ ತಿಳಿಸಿದರು. ಜಿಲ್ಲಾಡಳಿತ ಸಂಪೂರ್ಣವಾಗಿ ಕೋವಿಡ್ ಎರಡನೇ ಅಲೆ ಎದುರಿಸಲು ಸಿದ್ಧವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಂಸದರು ಮನವಿ ಮಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಜಿಲ್ಲೆಯಲ್ಲಿ ನಿವೃತ್ತಿ ಹೊಂದಿರುವ ವೈದ್ಯರು, ನಗರದ ಸಣ್ಣ ಕ್ಲಿನಿಕ್ ಹೊಂದಿರುವ ವೈದ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೊರೊನಾ ಸೇವೆಗೆ ಬಳಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಕ್ರೆಡಾಲ್ ಚಂದು ಪಾಟೀಲ, ಡಿಸಿಪಿ ಕಿಶೋರ ಬಾಬು, ಜಿಪಂ ಸಿಇಒ ಡಾ| ದಿಲೀಷ್ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿಪಂ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಅಧಿ ಕಾರಿಗಳು, ಮೆಡಿಕಲ್, ಆಯುರ್ವೇದ, ನರ್ಸಿಂಗ್, ಹೋಮಿಯೋಪತಿ ಕಾಲೇಜಿನ ಅಧಿಕಾರಿಗಳು ಹಾಜರಿದ್ದರು.