ಮೈಸೂರು: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲು ಕೊಡಲಾಗುವುದಿಲ್ಲ ಎನ್ನಲು ನೀವು ಯಾವ ಊರ ದೊಣ್ಣೆ ನಾಯಕರು. ನಮ್ಮ ಪಾಲನ್ನು ಕಸಿದುಕೊಂಡು ಮೆರೆಯುತ್ತಿರುವವರು ನೀವು ಎಂದು ಖ್ಯಾತ ಕಥೆಗಾರ್ತಿ ವೈದೇಹಿ ಆಕ್ರೋಶ ವ್ಯಕ್ತಪಡಿಸಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣ ಗುರುವಾರ ಆಯೋಜಿಸಿರುವ ಲಿಂಗ ಸಮಾನತೆ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ರಮಣ: ಹೆಬ್ಬೆಟ್ಟು ಒತ್ತಿ ಇಡೀ ಪ್ರಪಂಚವನ್ನು ನಿಮಗೆ ಬಿಟ್ಟು ಕೊಟ್ಟೆವಲ್ಲ. ನಮ್ಮ ಅವಕಾಶವನ್ನು ಕಸಿದುಕೊಂಡು ನೀವು ನಮ್ಮ ಭಾವನೆಗಳಿಗೆ ಬೆಲೆಕೊಡದೆ ನಮ್ಮ ಮೇಲೆಯೇ ಅಕ್ರಮಣ ಮಾಡಿದಿರಿ. ಈ ಸಮಾನತೆಯೂ ಬೇಡ ಎಂಥದ್ದು ಬೇಡ. ನಮ್ಮನ್ನು ಬದುಕಲು ಬಿಡಿ, ನಾವೂ ನಿಮ್ಮಂಥೆ ಬದುಕಲು ಬಂದವರು ಎಂದು ಭಾವುಕರಾದರು.
ಪುರಾಣ, ಇತಿಹಾಸ, ಆಧುನಿಕ ಜಗತ್ತು, ವರ್ತಮಾನ ಎಲ್ಲಿ ನೋಡಿದರೂ ಮಹಿಳೆಯರು ಮೂಲತಃ ಎಲ್ಲಿದ್ದೇವೋ ಅಲ್ಲಿಯೇ ಇದ್ದೇವೆ. ಎಲ್ಲರಿಗೂ ಶಿಕ್ಷಣ ಇದೆ. ಎಲ್ಲರಿಗೂ ಎಲ್ಲವು ಗೊತ್ತಿದೆ. ಆದರೂ ಹೆಣ್ಣೆಂಬುದನ್ನು ಮೀರಲಾಗುತ್ತಿಲ್ಲ. ಶಿಕ್ಷಣ ಇಲ್ಲದವರ ಜತೆಯೇ ಮಹಿಳೆ ಸುರಕ್ಷಿತ ಅನ್ನಿಸುವ ವಾತಾವರಣ ಇದೆ ಎಂದು ಹೇಳಿದರು.
ಹೆಣ್ಣೆಂದ ಕೂಡಲೇ ಅವಳ ದೇಹ ಮಾತ್ರ ಏಕೆ ಕಾಣುತ್ತೆ. ಹೆಣ್ಣು ಒಂದು ಜೀವ ಅಂಥ ಏಕೆ ಕಾಣುವುದಿಲ್ಲ? ಲಿಂಗ ಅನ್ನುವುದೇ ಕೊಳಕು ಶಬ್ದ. ಇಂದು ಹೆಣ್ಣಿಗೆ ಯಾವ ಸ್ಥಳವೂ ಸುರಕ್ಷಿತವಾಗಿಲ್ಲ . ಸಿನಿಮಾ, ಧಾರವಾಹಿಗಳು ಹುಡುಗಿಯರ ದೇಹ ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡಿವೆ. ಇದನ್ನು ನಿಯಂತ್ರಿಸಬೇಕಾದ ಸರ್ಕಾರಕ್ಕೆ ದೃಷ್ಟಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳಿಗೆ ಭದ್ರತೆ ಕೊಡದೆ ಹೆಣ್ಣನ್ನು ದೇಹವಾಗಷ್ಟೆ ನೋಡುವುದಾದರೆ ಎಲ್ಲಿ ಸಮಾನತೆ ಸಿಗುತ್ತದೆ. ಎಲ್ಲಿಗೆ ಹೋದರೂ ಹೆದರಿಕೆ. ಗಂಡಸಿನೊಂದಿಗೆ ಒಂದು ಕೋಣೆಯಲ್ಲಿರುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ಇದೆ. ದೇವಸ್ಥಾನದಲ್ಲಿಯೇ ಅತ್ಯಾಚಾರ ನಡೆಯುತ್ತಿದೆ. ಗಲೀಜಾದ ಮನಸ್ಸುಗಳು ಇಂದಿಗೂ ಬದಲಾಗಿಲ್ಲ. ಹೆಣ್ಣು ಮಕ್ಕಳು ಕಾಡು -ಕಡಲಿಗೆ ಹೋಗಬಲ್ಲೆ ಎಂಬ ವಿಶ್ವಾಸ ಮೂಡಿಸದಿದ್ದ ಮೇಲೆ ಸಮಾನತೆ, ಅಸಮಾನತೆ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜವಾದಿ ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಸಿ.ಎಸ್.ದ್ವಾರಕನಾಥ್ ಆಶಯ ನುಡಿಗಳನ್ನಾಡಿದರು. ಸಾಮಾಜಿಕ ಕಾರ್ಯಕರ್ತೆ ಎ.ರೇವತಿ ಲಿಂಗ(ಅ) ಸಮಾನತೆ: ನನ್ನ ಅನುಭವಗಳು ಕುರಿತು ವಿಚಾರ ಮಂಡಿಸಿದರು. ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಹಾಜರಿದ್ದರು.