Advertisement

ಸುಸ್ಥಿರ ಅಭಿವೃದ್ಧಿಗೆ ಸಮಾನತೆ ಅಗತ್ಯ: ಡಿಸಿ ನಿತೇಶ

05:20 PM Mar 09, 2022 | Team Udayavani |

ಧಾರವಾಡ: ಶಿಕ್ಷಣ ಪಡೆಯುವಾಗ ಉತ್ತಮ ಸಾಧನೆ ಮಾಡುವ ಮಹಿಳೆಯರು ಮದುವೆಯ ನಂತರವೂ ಸಾಧನೆಯ ಪಥದಿಂದ ವಿಮುಖರಾಗಬಾರದು. ಸುಸ್ಥಿರ ಅಭಿವೃದ್ಧಿಗೆ ಸಮಾನತೆ ಎಲ್ಲಾ ರಂಗಗಳಲ್ಲಿ ಬರಬೇಕು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ಡಾ| ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿ ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬ್ರಹ್ಮಕುಮಾರಿ ಈಶ್ವರೀಯ ವಿವಿ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸಂಘದ ಸದಸ್ಯರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳಾ ದಿನ ಮಾ. 8ರ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೇ, ಪ್ರತಿದಿನ ಮಹಿಳಾ ಸಮಾನತೆಯ ಆಚರಣೆ ಜಾರಿಯಲ್ಲಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ.ಪುಷ್ಪಲತಾ ಮಾತನಾಡಿ, ವರದಕ್ಷಿಣೆ ಮತ್ತಿತರ ಪಿಡುಗುಗಳ ಹಿಂದೆ ಮಹಿಳೆಯರೂ ಕೂಡ ಇರುವುದು ವಾಸ್ತವ. ಈ ಧೋರಣೆ ಬದಲಾಗಿ ಪರಿವರ್ತನೆ ಬರಬೇಕು. ಒಬ್ಬ ಹೆಣ್ಣು ಮತ್ತೂಬ್ಬ ಸ್ತ್ರೀಯನ್ನು ಪ್ರೋತ್ಸಾಹಿಸುವ ಮನೋಭಾವ ಕುಟುಂಬಗಳಲ್ಲಿ ಬೆಳೆಯಬೇಕು. ಮಹಿಳೆಯರ ವಿಕಾಸವಾದರೆ ಇಡೀ ಕುಟುಂಬ ವಿಕಾಸವಾದಂತೆ ಎಂದು ಹೇಳಿದರು.

ಡಾ| ಸಂಗೀತಾ ಮಾನೆ, ಡಾ| ಸರ್ವಮಂಗಳಾ ಕುದರಿ, ನಸ್ರಿನ್‌ ಎ. ಮಿಶ್ರಿ, ರಾಜಯೋಗಿನಿ ಬಿ.ಕೆ. ಜಯಂತಿ ಉಪನ್ಯಾಸ ನೀಡಿದರು. ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸ್ತ್ರೀ ಶಕ್ತಿ ಒಕ್ಕೂಟದ ಪದಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಬ್ಯಾಂಕ್‌ ಸಖೀಯರು ಹಾಗೂ ಕಲೆ, ಕ್ರೀಡೆ,
ವಿಜ್ಞಾನ, ಸಾಮಾನ್ಯ ಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಛರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್‌. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ್‌ ಮಡಿವಾಳ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ| ಚಂದ್ರಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಭೀಮಪ್ಪ ಎನ್‌. ಎಂ., ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಅಣ್ಣಯ್ಯ, ತಾಪಂ ಸಹಾಯಕ ನಿರ್ದೇಶಕ ಸಂತೋಷ ತಳಕಲ್‌ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ| ಎಚ್‌.ಎಚ್‌. ಕುಕನೂರ ಸ್ವಾಗತಿಸಿದರು.

Advertisement

ವಸ್ತು ಪ್ರದರ್ಶನ
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಡಾ|ಮಲ್ಲಿಕಾರ್ಜುನ ಮನಸೂರ ಕಲಾಭವನದ ಆವರಣದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಚಾಲನೆ ನೀಡಿದರು.

ಮಹಿಳೆಗೆ ಸಮಾನ ಅವಕಾಶಗಳನ್ನು ಇತರರು ಕೊಡುವುದಲ್ಲ, ಅದು ಪ್ರತಿಯೊಬ್ಬ ಮಹಿಳೆಯ ಹಕ್ಕು. ಶಾಲೆ-ಕಾಲೇಜುಗಳ ಶಿಕ್ಷಣ, ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ ಮುಂದೆ ಉದ್ಯೋಗಶೀಲರನ್ನಾಗಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರೋತ್ಸಾಹದ ಅಗತ್ಯವಿದೆ.
ನಿತೇಶ ಪಾಟೀಲ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next