ಧಾರವಾಡ: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಾದಿ ಪ್ರಮಥರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆದರೆ ಸಮಾನತೆ ಬರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ನಗರದ ಡಯಟ್ ಸಭಾಭವನದಲ್ಲಿ ರವಿವಾರ ಮಾರ್ಕಂಡೇಯ ದೊಡಮನಿ ಶಿಕ್ಷಣ ಪ್ರತಿಷ್ಠಾನ ವತಿಯಿಂದ ನಡೆದ ಶರಣ ಹರಳಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣ ಮೇಲು-ಕೀಳು ಎನ್ನದೆ ಎಲ್ಲಾ ಜಾತಿಯವರನ್ನು ಪ್ರೀತಿಯಿಂದ ನೋಡಿಕೊಂಡರು. ಅದರಲ್ಲೂ ಶರಣ ಹರಳಯ್ಯನವರು ಶ್ರಮ ಜೀವಿಯಾಗಿದ್ದರಿಂದ ಜಗಜ್ಯೋತಿ ಬಸವಣ್ಣನವರಿಗೆ ತುಂಬಾ ಆತ್ಮೀಯರಾಗಿದ್ದರು. ಅಂತಹ ಕಾಯಕಯೋಗಿಗಳ ಜೀವನ ಮತ್ತು ಸಾಧನೆಗಳ ಕುರಿತು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬಸವಣ್ಣನವರ ಕಲ್ಯಾಣ ರಾಜ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಸಮಾಜದಲ್ಲಿ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವಲ್ಲಿ ಶರಣರ ಪಾತ್ರ ಮಹತ್ವದ್ದಾಗಿದೆ. ಸರಕಾರದ ಸವಲತ್ತು ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದ ಪ್ರತಿಯೊಬ್ಬರೂ ಮಾರ್ಕಂಡೇಯ ದೊಡ್ಡಮನಿ ಶಿಕ್ಷಕ ದಂಪತಿಯಂತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶರಣ ಹರಳಯ್ಯನವರು ತ್ಯಾಗ ಹಾಗೂ ಕಾಯಕದ ಮೂಲಕ ಬಸವಣ್ಣನವರೊಂದಿಗೆ ಗುರುತಿಸಿಕೊಂಡಿದ್ದರು. ಬಸಣ್ಣನವರಿಗೆ ತಮ್ಮ ತೊಡೆ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿಕೊಟ್ಟು, ತಮ್ಮ ಭಕ್ತಿಯನ್ನು ಪ್ರಪಂಚಕ್ಕೆ ತೊರಿಸಿಕೊಟ್ಟಿದ್ದಾರೆ.
ಇಂದು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದರು. ಇದಕ್ಕೂ ಮುನ್ನ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ವಿವಿಧ ಪದವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 32 ವಿದ್ಯಾರ್ಥಿಗಳಿಗೆ ಶರಣ ಹರಳಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯೂ 500 ರೂ. ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.
ಸಚಿವ ವಿನಯ ಕುಲಕರ್ಣಿ ಶರಣ ಹರಳಯ್ಯ ಮಾಸ ಪತ್ರಿಕೆ ಬಿಡುಗಡೆ ಮಾಡಿದರು. ಜಿಪಂ ಸಿಇಒ ಸ್ನೇಹಲ್ ರಾಯಮಾನೆ, ಮನೋಹರ ಮಂದೋಲಿ, ರಾಮಕೃಷ್ಣ ಪಡಗಣ್ಣವರ, ಪ್ರೊ| ರಾಜೇಂದ್ರ ಹೊಂಗಲ್, ಸುಭಾಷ ಗಾಮನಗಟ್ಟಿ, ಭಾರತಿ ಬೆಣಗಿ, ಅನಸೂಯಾ ಗಾಮನಗಟ್ಟಿ, ಡಾ| ಮಹಾದೇವಿ ದೊಡಮನಿ ಇತರರಿದ್ದರು.