Advertisement

ಶ್ರೇಣಿಕೃತ ವ್ಯವಸ್ಥೆಯಿಂದ ಸಮಾನತೆ ಮರಿಚೀಕೆ: ಸಿದ್ದರಾಮಯ್ಯ

10:16 AM Apr 25, 2022 | Kavyashree |

ಶಿವಮೊಗ್ಗ: ಕಲ್ಲು ಒಡೆಯುವವರು, ಒಡೆದ ಕಲ್ಲು ಬಳಸಿ ದೇವಸ್ಥಾನ ಕಟ್ಟುವವರು ನೀವು. ಆದರೆ ಆ ದೇವಸ್ಥಾನದ ಒಳಗಡೆ ಹೋಗುವವರೇ ಬೇರೆ. ಇದು ಬದಲಾಗಬೇಕು. ಏಕೆಂದರೆ ಜಾತಿ ವ್ಯವಸ್ಥೆ ಹೋಗುವ ತನಕ ಇದು ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಜಿಲ್ಲಾ ಭೋವಿ (ವಡ್ಡರ) ಸಮಾಜ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶ ಹಾಗೂ ಭೋವಿ ಭವನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ವೃತ್ತಿ ಆಧಾರಿತ ಜಾತಿ ವ್ಯವಸ್ಥೆ. ಕಲ್ಲಿನ ಕೆಲಸ ಮಾಡುವುದರಿಂದ ಭೋವಿ ಸಮಾಜವನ್ನು ಸ್ಥಳೀಯ ಭಾಷೆಯಲ್ಲಿ ವಡ್ಡರು ಎಂದು ಕರೆಯಲಾಗಿದೆ. ಈ ಜಾತಿ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಇದೆ. ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಅನೇಕ ಜನ ಶರಣರು, ಸೂಫಿ ಸಂತರು ಸಮಾಜ ಸುಧಾರಣೆ ಮಾಡಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆಯ ಸಾಧನೆ ಎಂಬುದು ಮರೀಚಿಕೆಯ ರೀತಿ ಅಸಾಧ್ಯವಾದ ಕೆಲಸ ಎಂದರು.

ಭೋವಿ ಭವನ ಉದ್ಘಾಟಿಸಿದ ಭೋವಿ ಸಮಾಜದ ಮುಖಂಡ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿ ಸಮಾಜ ತುಂಬಾ ಸ್ವಾವಲಂಬಿ ಸಮಾಜ. ಅದರಲ್ಲೂ ನಾವು ಸಾಮರಸ್ಯ ಹಾಗೂ ಸ್ವಾಭಿಮಾನದಿಂದ ಬದುಕುವ ಜನ. ಇತಿಹಾಸ ಅವಲೋಕಿಸಿದರೆ ಇದು ಸತ್ಯವೇ ಆಗಿದೆ. ಇಂತಹ ಸಮಾಜ ಈಗ ಸರ್ಕಾರಗಳ ಕಟ್ಟುನಿಟ್ಟಿನ ಧೋರಣೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಕಲ್ಲು ಒಡೆಯುವ ಕಾಯಕಕ್ಕೆ ಅಡೆತಡೆ ಎದುರಾಗಿದೆ. ಶ್ರೀಮಂತರು ಗಣಿಗಾರಿಕೆ ಮಾಡುತ್ತಿದ್ದಾರೆ. ಕಲ್ಲು ಒಡೆಯುವುದನ್ನೇ ಕುಲ ಕಸುಬಾಗಿಸಿಕೊಂಡು ಬಂದ ಭೋವಿ ಸಮಾಜ ಕುಲಕಸುಬು ಇಲ್ಲದೆ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಭೋವಿ ಸಮಾಜದ ನೆರವಿಗೆ ಬರಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next