ಮೂಡಬಿದಿರೆ : ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಪ್ರತಿಯೊಬ್ಬರೂ ದೇಶದಲ್ಲಿ ಮಹೋನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಿದೆ. ಇದಕ್ಕೆ ತಂದೆ, ತಾಯಿ ಹಾಗೂ ಗುರುಗಳು ಉತ್ತಮ ಪರಿಸರವನ್ನು ಒದಗಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ಜಸ್ಟೀಸ್
ಪಿ.ವಿಶ್ವನಾಥ ಶೆಟ್ಟಿ ಹೇಳಿದರು. ರೋಟರಿ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ಪಿ.ಎಲ್. ಚೀಫ್ ಜನರಲ್ ಮ್ಯಾನೇಜರ್ ಹರೀಶ್ ಬಾಳಿಗ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ಪಷ್ಟ ಗುರಿಯೊಂದಿಗೆ ಗುರಿಯಿಟ್ಟು, ಶ್ರಮಪಟ್ಟು ಅಭ್ಯಾಸ ಮಾಡಬೇಕು. ಆಗ ಗೆಲುವು ನಿಶ್ಚಿತ. ವಿದ್ಯಾರ್ಥಿಗಳಿಗೆ ಸಾಧನೆಯೇ ಮುಖ್ಯ ಹೆಜ್ಜೆಯಾಗಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಕಾರ್ಯದರ್ಶಿ ಮಹಮ್ಮದ್ ಆರಿಫ್ ಉಪಸ್ಥಿತರಿದ್ದರು. ರೋಟರಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ನಾರಾಯಣ ಪಿ.ಎಂ. ಸ್ವಾಗತಿಸಿದರು. ಜ| ಪಿ. ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ ವಿನ್ಸೆಂಟ್ ಡಿ’ಕೋಸ್ಟಾ ವರದಿ ವಾಚಿಸಿದರು. ಶಾಲಾ ಸಂಚಾಲಕ ಡಾ| ಬಿ.ಎ. ಯತಿಕುಮಾರ ಸ್ವಾಮಿ ಗೌಡ ವಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.