ಹರಪನಹಳ್ಳಿ: ಸಂವಿಧಾನದ ಅಶಯ ಈಡೇರಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯದಡಿ ಕ್ಷೇತ್ರದಲ್ಲಿ ಪ್ರತಿ ಗ್ರಾಮಗಳಿಗೂ ಹಾಗೂ ಎಲ್ಲಾ ವರ್ಗಗಳ ಜನರಿಗೂ ಸಮಪಾಲು, ಸಮಬಾಳು ತತ್ವದಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಎಂ.ಪಿ.ರವೀಂದ್ರ ತಿಳಿಸಿದರು. ತಾಲೂಕಿನ ಅಣೆಮೇಗಳ ತಾಂಡಾದಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಏನೂ ಕೆಲಸವಾಗಿಲ್ಲ ಎಂದು ಕೆಲಸವಿಲ್ಲದವರು ಮಾತನಾಡಿಕೊಳ್ಳುತ್ತಿದ್ದಾರೆ. ಗ್ರಾಮಾಂತರ ಪ್ರದೇಶಕ್ಕೆ ಒಮ್ಮೆ ಬಂದು ನೋಡಲಿ ಆಗ ನಾವೇನು ಮಾಡಿದ್ದೇವೆ ಎಂಬುವುದು ವಿರೋಧಿಧಿಗಳಿಗೆ ಗೊತ್ತಾಗುತ್ತದೆ. ಶೋಷಿತರ ಎಲ್ಲಾ ಓಣಿಗಳಲ್ಲಿ ಕಾಂಕ್ರಿಟ್ ರಸ್ತೆಗಳು ನಳನಳಿಸುತ್ತಿವೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಬೇಸಿಗೆ ಆಗಮಿಸಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆ ಬೋರ್‌ವೆಲ್ ಕೊರೆಸಲಾಗಿದೆ. ನೀರು ಸಿಗದಿರುವ ಪ್ರದೇಶದಲ್ಲಿ ಖಾಸಗಿ ಟ್ಯಾಂಕರ್ ಮೂಲಕ ಜನರಿಗೆ ನೀರು ಒದಗಿಸಲಾಗುತ್ತಿದೆ. ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆ ಪರಿಷ್ಕೃತ ದರ ಪಟ್ಟಿಯೊಂದಿಗೆ ಬಜೆಟ್‌ನಲ್ಲಿ ಮುಖ್ಯಂತ್ರಿಗಳು ಘೋಷಿಸಲಿದ್ದಾರೆ.
ನದಿಯಿಂದ 60 ಕರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡ ಪರಿಷ್ಕೃತ ದರಪಟ್ಟಿಯೊಂದಿಗೆ ಕ್ಯಾಬಿನೆಟ್‌ಗೆ ಬರಲಿದೆ ಎಂದು ತಿಳಿಸಿದರು. ಹಳ್ಳಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2.28 ಕೋಟಿರೂ ರಸ್ತೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕ, ಸಿಸಿ ರಸ್ತೆ, ಹೊನ್ನೆಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಕುಡಿಯುವ ನೀರು, ಒಡೆಯರಹಳ್ಳಿ ಗ್ರಾಮದಲ್ಲಿ 52.91 ಲಕ್ಷರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಮುಖಂಡರಾದ ಎಂ.ವಿ.ಅಂಜಿನಪ್ಪ, ಕೋಡಿಹಳ್ಳಿ ಭೀಮಪ್ಪ, ಅಬ್ದುಲ್ ರಹಿಮಾನಸಾಬ್, ಕೆ.ಎಂ.ಬಸವರಾಜಯ್ಯ, ಜಿ.ಪಂ ಸದಸ್ಯ ಎಚ್.ಬಿ.ಪರುಶುರಾಮಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್, ತಾ.ಪಂ ಸದಸ್ಯ ತಾವರ್ಯನಾಯ್ಕ, ಮುತ್ತಿಗಿ ಜಂಬಣ್ಣ, ಡಿ.ರಾಜಕುಮಾರ್, ಅರುಣ ಪೂಜಾರ್, ಪಿ.ಪ್ರೇಮಕುಮಾರ್, ಕೆ.ಎಂ.ವಾಗೀಶ್, ಮಟ್ಟಿ ಪ್ರಕಾಶ್, ಇರ್ಷಾದ್, ಎಸ್. ಜಾಕೀರಹುಸೇನ್, ಮರಿಯಪ್ಪ ಮತ್ತಿರರಿದ್ದರು.