Advertisement

ಉಡುಪಿ : ಸ್ಪೀಡ್‌ಪೋಸ್ಟ್‌ನಲ್ಲಿ ಮತದಾರರ ಮನೆಗೆ ಬರಲಿದೆ ಎಪಿಕ್‌ ಕಾರ್ಡ್‌

12:04 PM Oct 30, 2022 | Team Udayavani |

ಉಡುಪಿ: ರಾಜ್ಯದಲ್ಲೇ ಮೊದಲು ಎಂಬಂತೆ ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್‌ಪೋಸ್ಟ್‌ ಮೂಲಕ ತಲುಪಿಸುವ ಪ್ರಕ್ರಿಯೆಯನ್ನು ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗಿದೆ.
ಹೊಸ ನೋಂದಣಿ, ತಿದ್ದುಪಡಿ ಸಹಿತ ಸುಮಾರು 10 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಎಲ್ಲ ಅರ್ಜಿಗಳಿಗೂ ಸಂಬಂಧಿಸಿದಂತೆ ಮುದ್ರಣಕಾರ್ಯ ಪೂರ್ಣಗೊಂಡಿದ್ದು, ಈಗಾಗಲೇ 1,773 ಎಪಿಕ್‌ ಕಾರ್ಡ್‌ಗಳನ್ನು ಮತದಾರರಿಗೆ ತಲುಪಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಚುನಾವಣೆ ಶಾಖೆಯಲ್ಲಿ ಎಪಿಕ್‌ ಕಾರ್ಡ್‌ಗಳನ್ನು ಸ್ಪೀಡ್‌ಪೋಸ್ಟ್‌ಗೆ
ಕಳುಹಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಆದರೆ ಉಡುಪಿ ಜಿಲ್ಲೆಯಷ್ಟು ವ್ಯವಸ್ಥಿತವಾಗಿ ಅಲ್ಲಿ ಇನ್ನೂ ಆರಂಭವಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಹೊಸ ಕಾರ್ಡ್‌ ಜತೆ ಸಂದೇಶ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿ, ಮತದಾರರಾಗಿರುವುದಕ್ಕೆ ಹರ್ಷವಾಗುತ್ತಿದೆ. ಭಾರತ ಚುನಾವಣೆ ಆಯೋಗ ನಿಮಗೆ ಅಭಿನಂದನೆ ಸಲ್ಲಿಸುತ್ತದೆ. ತಾವು ಪ್ರಜಾಪ್ರಭುತ್ವದಲ್ಲಿ ನಾಗರಿಕರಾಗಿ ಜವಾಬ್ದಾರಿ ಹೊಂದಿದ್ದೀರಿ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ತಮ್ಮ ಮತವನ್ನು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಚಲಾಯಿಸಬಹುದು. ಮತದಾನದ ದಿನ ಮತ ಚಲಾಯಿಸುವ ಮೂಲಕ ಸದೃಢ ಪ್ರಜಾಪ್ರಭುತ್ವ ಸ್ಥಾಪಿಸಬಹುದು. ನಮ್ಮ ಮತ: ನಮ್ಮ ಹಕ್ಕು, ಮತದಾನ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ತಪ್ಪದೆ ಮತಚಾಯಿಸಿ, ಮತದಾನದಿಂದ ಹೊರಗೆ ಉಳಿಯದಿರಿ ಎಂಬ ಸಂದೇಶ ಹೊಂದಿರುವ ಪತ್ರ(ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ)ವನ್ನು ಜತೆಗೆ ಕಳುಹಿಸಿಕೊಡಲಾಗುತ್ತಿದೆ.

ಮತದಾರರ ಪಟ್ಟಿ ಪರಿಷ್ಕರಣೆ
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣ ಆಯೋಗವು ಈ ಬಾರಿಯೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆಯೋಜಿಸಿದೆ. 18 ವರ್ಷ ತುಂಬಿದ ಯುವ ಮತದಾರರು ನೋಂದಣಿ ಮಾಡಿಕೊಳ್ಳಬಹುದು. ಜನವರಿ, ಎಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ ಹೀಗೆ ನಾಲ್ಕು ಅವಕಾಶ ನೀಡಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನ.9ರಿಂದ ಆರಂಭವಾಗಲಿದೆ. ಈ ವೇಳೆ ಹೊಸ ನೋಂದಣಿ, ತಿದ್ದುಪಡಿ, ಡಿಲೀಶನ್‌ ಹೀಗೆ ಎಲ್ಲದಕ್ಕೂ ಅವಕಾಶ ಇರುತ್ತದೆ. ಈ ಬಗ್ಗೆ ವಿಶೇಷ ಅಭಿಯಾನ ಕೂಡ ನಡೆಯಲಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಡಿಲೀಶನ್‌, ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶವಿರುತ್ತದೆ. ಓಟರ್‌ ಹೆಲ್ಪ್ ಲೈನ್ ಆ್ಯಪ್‌ ಮೂಲಕವೂ ಮಾಡಿಕೊಳ್ಳಬಹುದು. ಎಪಿಕ್‌ ಕಾರ್ಡ್‌ ಗಳನ್ನು ಸ್ಪೀಡ್‌ಪೋಸ್ಟ್‌ ಮೂಲಕ ಮತದಾರರ ಮನೆಗೆ ತಲುಪಿಸಲಾಗುವುದು.
-ಕೂರ್ಮಾ ರಾವ್‌ ಎಂ. ಜಿಲ್ಲಾಧಿಕಾರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next