ಬೆಂಗಳೂರು: ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಗ್ರಾಮಸಭೆಗಳು ನಿಗದಿತ ಅವಧಿಯಲ್ಲಿ
ಆಯ್ಕೆ ಮಾಡದೇ ಇದ್ದಲ್ಲಿ ಈ ಜವಾಬ್ದಾರಿಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಲಾಗಿದೆ.
ಡೀಸಿ ಮತ್ತು ಜಿಪಂ ಸಿಇಒಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆಯ ಕುರಿತು ಗ್ರಾಮ ಸಭೆಗೆ ದಿನಾಂಕ ನಿಗದಿಪಡಿಸಬೇಕು. ಆ ದಿನದೊಳಗೆ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧವಾಗದೇ ಇದ್ದಲ್ಲಿ ತಾಲೂಕು ಇಒ ಮೂಲಕ ಆಯ್ಕೆ ಮಾಡಲು ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಕೂಡಲೇ ಸುತ್ತೋಲೆ ಹೊರಡಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದರು.
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯು 2018ರ ಮಾರ್ಚ್ ಅಂತ್ಯದೊಳಗೆ 2016-17ನೇ ಸಾಲಿನವರೆಗಿನ ಅನುದಾನವನ್ನು ಶೇ.100ರಷ್ಟು ಹಾಗೂ 2017-18ನೇ ಸಾಲಿನ ಅನುದಾನವನ್ನು ಕನಿಷ್ಠ ಶೇ.50ರಷ್ಟು ಬಳಸಿಕೊಳ್ಳಬೇಕು. ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತಮ್ಮಲ್ಲಿರುವ 790 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಬೇಕು ಮತ್ತು ಈ ಪ್ರಸ್ತಾವನೆ ಆಧರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಅಂತಿಮ ಅಧಿಸೂಚನೆ ಹೊರಡಿಸಬೇಕು. ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ಯರ್ಥಕ್ಕೆ ಬಾಕಿ ಇರುವ 104 ಅರ್ಜಿಗಳನ್ನು 15 ದಿನಗಳೊಳಗಾಗಿ ಇತ್ಯರ್ಥಪಡಿಸವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.