ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮಿ ಫೈನಲ್ ಗೆ ಪ್ರವೇಶಿಸಿದೆ.
ಆಡಿದ ನಾಲ್ಕು ಪಂದ್ಯಗಳನ್ನೂ ಗೆದ್ದ ಇಂಗ್ಲೆಂಡ್ ಸುಲಭವಾಗಿಯೇ ಸೆಮಿ ಫೈನಲ್ ಪ್ರವೇಶಿಸಿದೆ. ಲಂಕಾ ವಿರುದ್ಧ ಕಠಿಣ ಶಾರ್ಜಾ ಪಿಚ್ ನಲ್ಲಿ ಅಮೋಘ ಶತಕ ಬಾರಿಸಿದ ಜೋಸ್ ಬಟ್ಲರ್ ತಂಡಕ್ಕೆ ನೆರವಾದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಲಂಕಾ 19 ಓವರ್ ಗಳಲ್ಲಿ 137 ರನ್ ಗೆ ಆಲೌಟಾಯಿತು.
ಇದನ್ನೂ ಓದಿ:ಪಾಕಿಸ್ಥಾನ ವಿರುದ್ಧ ಕ್ರಿಕೆಟ್ ಶಿಶು ನಮೀಬಿಯಾ
ಈ ವೇಳೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹೊಸ ದಾಖಲೆ ಬರೆದರು. ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಜಯ ದಾಖಲಿಸಿದ ನಾಯಕ ಎಂಬ ಮೈಲಿಗಲ್ಲು ನೆಟ್ಟರು. ಲಂಕಾ ವಿರುದ್ಧದ ಗೆಲುವು ಮಾರ್ಗನ್ ಗೆ ನಾಯಕನಾಗಿ 43ನೇ ಜಯ. ಈ ಹಿಂದೆ ತಲಾ 42 ಗೆಲುವು ದಾಖಲಿಸಿದ್ದ ಮಹೇಂದ್ರ ಸಿಂಗ್ ಧೋನಿ ಮತ್ತು ಅಸ್ಗರ್ ಅಫ್ಘಾನ್ ದಾಖಲೆ ಮುರಿಯಿತು.
ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ 68ನೇ ಪಂದ್ಯದಲ್ಲಿ ಮಾರ್ಗನ್ 43ನೇ ಜಯ ಸಾಧಿಸಿದರು. ಧೋನಿ 72 ಪಂದ್ಯಗಳಲ್ಲಿ 42 ಜಯ, ಅಸ್ಗರ್ 52 ಪಂದ್ಯದಲ್ಲಿ 42 ಜಯ ಸಾಧಿಸಿದ್ದರು.