Advertisement
ಬಸಾಪುರ ಎಂಬುದೊಂದು ಊರು. ಅಲ್ಲಿ ತಿಮ್ಮಪ್ಪನ ಕುಟುಂಬ ವಾಸವಾಗಿತ್ತು. ತಿಮ್ಮಪ್ಪನ ಮೊದಲ ಹೆಂಡತಿ ಒಂದು ಹೆಣ್ಣು ಮಗುವನ್ನು ಹೆತ್ತು ತೀರಿಕೊಂಡಿದ್ದರಿಂದ ಅವನು ಎರಡನೆಯ ಮದುವೆಯಾಗಿದ್ದ. ಆದರೆ ಆ ಮಲತಾಯಿ ರಾಣಿ ತುಂಬಾ ಕ್ರೂರಿಯಾಗಿದ್ದಳು. ತನ್ನಿಂದ ಒಂದು ಹೆಣ್ಣು ಮಗು ಹುಟ್ಟಿದ್ದರೂ ಮಲಮಗಳನ್ನು ಕೆಟ್ಟದ್ದಾಗಿ ನೋಡುತಿದ್ದಳು. ಮಲಮಗಳ ಹೆಸರು ಕಮಲಾ, ಸ್ವಂತ ಮಗಳು ಅನಸೂಯಾ ಎಂಬುದಾಗಿತ್ತು. ಅನಸೂಯಾಳಿಗೆ ಮನೆಯಲ್ಲಿ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯವಿತ್ತು. ಆದರೆ ಮಲಮಗಳು ಕಮಲಾ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿರಲಿಲ್ಲ. ಅವಳೇನೇ ಮಾಡಿದರೂ ಅದರಲ್ಲಿ ತಪ್ಪು ಹುಡುಕಿ ಸಹಸ್ರನಾಮಾರ್ಚನೆ ಮಾಡುತ್ತಿದ್ದರು.
Related Articles
Advertisement
ಆ ದಿನ ರಾತ್ರಿ ಅಮ್ಮ ಮಗಳು ಉಪಾಯ ಮಾಡಿ ಕಮಲಾಳಿಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆಂದು ಸುಳ್ಳು ಹೇಳಿ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಊರಿಂದ ತೀರಾ ದೂರಕ್ಕೆ ಕರೆದುಕೊಂಡು ಹೋದರು. ರಾತ್ರಿಯಾಗಿದ್ದರಿಂದ ಹೊರಗಡೆ ತುಂಬಾ ಚಳಿ ಇತ್ತು. ಕಾಡಿನಲ್ಲಿ ಒಂದು ದೇವಸ್ಥಾನವಿತ್ತು. ಅದರ ಜಗುಲಿಯ ಮೇಲೆ ಕಮಲಾಳನ್ನು ಕೂರಿಸಿ ಈಗ ಬರುತ್ತೇವೆ ಎಂದು ಹೇಳಿ ಅಲ್ಲಿಂದ ಹಿಂತಿರುಗಿ ಬಂದುಬಿಟ್ಟರು. ಕಮಲಾ ಜ್ವರದಿಂದ ನರಳುತ್ತಾ ಅಪ್ಪಾ ಅಪ್ಪಾ ಎಂದು ಕನವರಿಸತೊಡಗಿದಳು.
ಸ್ವಲ್ಪ ಹೊತ್ತಿನ ನಂತರ ಅದೇ ಮಾರ್ಗವಾಗಿ ಒಬ್ಬ ರಾಜ ಬಂದ. ಕಮಲಾಳನ್ನು ನೋಡಿ, ಹತ್ತಿರ ಬಂದು “ಯಾರು ನೀನು? ಇಲ್ಲೇಕೆ ಕುಳಿತಿರುವೆ?’ ಎಂದು ಕೇಳಿದ. ಕಮಲಾ ತನ್ನೆಲ್ಲಾ ಕಥೆಯನ್ನು ಹೇಳಿಕೊಂಡಳು. ತನಗೆ ತುಂಬಾ ಚಳಿಯಾಗುತ್ತಿದೆ ಎಂದು ನಡುಗತೊಡಗಿದಳು. ಅವನು ತನ್ನಲ್ಲಿರುವ ಬಟ್ಟೆಗಳನ್ನೆಲ್ಲಾ ಬಿಚ್ಚಿ ಕೊಟ್ಟ. ಅವಳ ಚಳಿ ಕಡಿಮೆಯಾಗಲಿಲ್ಲ.
ಅಷ್ಟು ಸಾಲದೆಂದು ರಾಜ ಅವಳಲ್ಲಿ ಉತ್ಸಾಹ ಮೂಡಿಸಲು ಸುಮಧುರವಾಗಿ ಹಾಡತೊಡಗಿದ. ಆದರೂ ಅವಳ ಮುಖ ಖನ್ನತೆಯಿಂದ ತುಂಬಿತ್ತು. “ನೀನಿನ್ನೂ ಯಾಕೆ ಗೆಲುವಾಗಿಲ್ಲ’ ಎಂದು ರಾಜ ಕೇಳಿದ. ತನ್ನ ಕತೆಯೆಲ್ಲವನ್ನೂ ರಾಜನ ಮುಂದೆ ಹೇಳಿಕೊಂಡ ಕಮಲಾ “ಮನೆಯಲ್ಲಿ ಇದ್ದಿದ್ದರೆ ಎಲ್ಲಾ ಕೆಲಸ ನಾನೇ ಮಾಡುತ್ತಿದ್ದೆ. ಆದರೆ ನಾನು ಇಲ್ಲಿರುವುದರಿಂದ ಇನ್ನುಮುಂದೆ ಎಲ್ಲಾ ಕೆಲಸಗಳನ್ನು ನನ್ನ ಚಿಕ್ಕಮ್ಮನೇ ನೋಡಿಕೊಳ್ಳಬೇಕಾಗುತ್ತದೆ’ ಎಂದು ಬೇಸರಿಸಿಕೊಂಡಳು. “ಅಷ್ಟು ತೊಂದರೆ ಕೊಟ್ಟರೂ ಮತ್ತೆ ಅವರನ್ನೇ ನೆನಪಿಸಿಕೊಳ್ಳುತಿದ್ದೀಯಲ್ಲ’ ಎಂದು ರಾಜ ಕೇಳಿದ್ದಕ್ಕೆ “ಎಷ್ಟಾದರೂ ಅವರು ಹಿರಿಯರು. ಜೀವನದಲ್ಲಿ ನಾನು ಎಲ್ಲವನ್ನೂ ಎದುರಿಸುವ ಮನೋಧೈರ್ಯ ಪಡೆಯಲಿ ಎಂದೇ ಅವರು ಕಷ್ಟ ನೀಡುತ್ತಾರೆ. ಅವನ್ನೆಲ್ಲಾ ತಪ್ಪು ಎಂದು ಭಾವಿಸಬಾರದು’ ಎಂದಳು. ಅವಳ ಉತ್ತರಕ್ಕೆ ತಲೆದೂಗಿದ ರಾಜ ಅವಳನ್ನು ಸೀದಾ ತನ್ನ ಅರಮನೆಗೆ ಕರೆದುಕೊಂಡು ಹೋದ.
ಒಂಭತ್ತು ದಿನಗಳ ನಂತರ ಹಣ, ಚಿನ್ನದ ಒಡವೆ, ಬಂಗಾರ ಎಲ್ಲವನ್ನೂ ಹೇರಳವಾಗಿ ಕೊಟ್ಟು ಕಮಲಾಳ ಜೊತೆ ಅವಳ ಊರಿಗೆ ಕಳುಹಿಸಿದ. ಹಳ್ಳಿಯಲ್ಲಿ ಕಮಲಾ ಸತ್ತು ಹೋಗಿದ್ದಾಳೆಂದು ಅವಳ ಮಲತಾಯಿ ರಾಣಿ ಶ್ರಾದ್ಧ ನೆರವೇರಿಸುತಿದ್ದಳು. ಮಲಮಗಳನ್ನು ನೋಡಿ ಬೇಸರವಾದರೂ ಅವಳ ಜೊತೆಯಲ್ಲಿ ಬಂದ ಹಣ, ಚಿನ್ನ ಅವಳಲ್ಲಿ ದುರಾಸೆ ಮೂಡಿಸಿತು. “ಇದೆಲ್ಲಾ ಹೇಗೆ ಸಿಕ್ಕಿತು?’ ಎಂದು ರಾಣಿ ಕೇಳಿದಳು. ಕಮಲಾ ನಡೆದ ಘಟನೆಯನ್ನೆಲ್ಲಾ ಹೇಳಿದಳು. ಅದನ್ನು ಕೇಳಿ ರಾಣಿಯ ತಲೆಯಲ್ಲಿ ಒಂದು ಸಂಚು ಮೂಡಿತು. ಎಲ್ಲರೂ ನಿದ್ದೆ ಹೋದ ಮೇಲೆ ರಾಣಿ ತನ್ನ ಮಗಳು ಅನಸೂಯಾಳನ್ನು ಎತ್ತಿನ ಬಂಡಿ ಮೇಲೆ ಕೂರಿಸಿಕೊಂಡು ಕಮಲಾಳನ್ನು ಬಿಟ್ಟು ಬಂದಿದ್ದ ದೇವಸ್ಥಾನದಲ್ಲಿಯೇ ಇವಳನ್ನೂ ಬಿಟ್ಟು ಬಂದಳು. ಚಳಿಯಲ್ಲಿ ಅನಸೂಯಾ ನಡುಗತೊಡಗಿದಳು. ಅದೇ ಸಮಯಕ್ಕೆ ಸರಿಯಾಗಿ ರಾಜ ಅಲ್ಲಿಂದ ಹೊರಟಿದ್ದ. ಅನಸೂಯಾ ನಡುಗುತ್ತಿರುವುದನ್ನು ನೋಡಿದ “ಯಾರು ನೀನು? ಇಲ್ಲಿ ಒಬ್ಬಳೇ ಏನು ಮಾಡುತ್ತಿರುವೆ?’ ಎಂದು ಕೇಳಿದ. ಅವಳು ತನ್ನ ಕಥೆಯನ್ನೆಲ್ಲಾ ತಿಳಿಸಿ “ನನ್ನಕ್ಕ ಕಮಲಾಳಂತೆ ನನ್ನನ್ನೂ ನಿನ್ನ ಅರಮನೆಗೆ ಕರೆದುಕೊಂಡು ಹೋಗಿ ಬಂಗಾರ, ಒಡವೆ, ಹಣದೊಂದಿಗೆ ಮರಳಿ ಮನೆಗೆ ಕಳುಹಿಸಿ ಕೊಡು’ ಎಂದು ರಾಜನಿಗೆ ಆಜ್ಞಾಪೂರ್ವಕವಾಗಿ ಹೇಳಿದಳು. ರಾಜನಿಗೆ ಎಲ್ಲಾ ಅರ್ಥವಾಯಿತು. “ನೀನು ಇಲ್ಲಿಯೇ ಕುಳಿತಿರು. ನಾನು ಕ್ಷಣದಲ್ಲಿಯೇ ಬರುತ್ತೇನೆ. ನಂತರ ನಾವಿಬ್ಬರೂ ಅರಮನೆಗೆ ಹೋಗೋಣ ಎಂದು ಹೇಳಿ ಹೋದವ ಮತ್ತೇ ಬರಲೇ ಇಲ್ಲ. ಚಳಿಗೆ ತತ್ತರಿಸಿ, ಹೊಟ್ಟೆಯ ಹಸಿವು, ದಾರಿ ಕಾಣದೇ ಅನಸೂಯಾ ನಿತ್ರಾಣಗೊಂಡಳು. ಇತ್ತ ಅನಸೂಯಾ ರಾಜ ಮರ್ಯಾದೆಯೊಂದಿಗೆ ಕೊಪ್ಪರಿಗೆ ಸಮೇತ ಬರುತ್ತಾಳೆಂದು ನಿರೀಕ್ಷಿಸಿದ್ದ ರಾಣಿ ಹಳ್ಳಿಯಲ್ಲಿ ಸಂಭ್ರಮಾಚರಣೆಗೆ ತಯಾರಾಗಿದ್ದಳು. ಆದರೆ ಕಾಡಿಗೆ ತೆರಳಿದ್ದ ಬೇಟೆಗಾರರು ಇನ್ನೇನು ಸಾಯುವುದರಲ್ಲಿದ್ದ ಅನಸೂಯಾಳನ್ನು ಕಂಡು ಹಳ್ಳಿಗೆ ಕರೆದುಕೊಂಡು ಬಂದರು. ನಿತ್ರಾಣವಾಗಿ ಬಿದ್ದಿದ್ದ ಅನಸೂಯಾಳನ್ನು ಕಂಡು ಮರುಗಿದ ಕಮಲಾ ಅವಳ ಶುಶ್ರೂಷೆ ಮಾಡಿದಳು. ಒಂದೆರಡು ದಿನಗಳಲ್ಲಿ ಅನಸೂಯ ಗುಣಮುಖಳಾದಳು. ರಾಣಿಗೆ ತಾನು ಎಂಥ ತಪ್ಪು ಮಾಡಿದೆ ಎಂದು ಪಶ್ಚಾತ್ತಾಪವಾಯಿತು. ತನ್ನ ಅತಿಯಾಸೆಗೆ ತಕ್ಕ ಶಾಸ್ತಿಯಾಯಿತು ಎಂದವಳು ತಿಳಿದಳು. ಅಂದಿನಿಂದ ರಾಣಿ, ಪತಿ ತಿಮ್ಮಪ್ಪ ಮತ್ತು ಕಮಲಾಳನ್ನೂ ಚೆನ್ನಾಗಿ ಕಾಣತೊಡಗಿದಳು. – ಭೋಜರಾಜ ಸೊಪ್ಪಿಮಠ