ಧಾರವಾಡ: ಮೀರಜ್ ಮತ್ತು ಸಾಂಗ್ಲಿ ಮಧ್ಯೆ ಗಿಡಗಳನ್ನು ಕಡಿಯದೆ ರಸ್ತೆ ಅಗಲೀಕರಣ ಮಾಡಿದ್ದು, ಅದೇ ಮಾದರಿಯಲ್ಲಿ ನರೇಂದ್ರ ಕ್ರಾಸ್‌ನಿಂದ ನಗರದ ಜುಬಿಲಿ ವೃತ್ತದ ವರೆಗಿನ ರಸ್ತೆ ಅಗಲೀಕರಣದ ಸಮಯದಲ್ಲಿ ಯಾವುದೇ ಗಿಡಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಸುಸ್ಥಿರ ಅಭಿವೃದ್ಧಿ ವೇದಿಕೆ ಸಂಚಾಲಕ ಡಾ| ಸಂಜೀವ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಇದೀಗ ಅಗಲೀಕರಣವಾಗುತ್ತಿದೆ. ಆದರೆ, ಈ ರಸ್ತೆಯಲ್ಲಿ 1500 ವಿವಿಧ ಜಾತಿಯ ಗಿಡಮರಗಳಿದ್ದು, ಪಕ್ಷಿ ವೈವಿಧ್ಯಕ್ಕೆ ಅನುಕೂಲವಾಗಿವೆ. ನೆರಳು, ಹಕ್ಕಿಗಳಿಗೆ ಆವಾಸ ನೀಡುವ 450ಕ್ಕೂ ಅಧಿ ಕ ಮರಗಳು ನಾಶವಾಗುತ್ತಿವೆ. ಅದಕ್ಕೆ ನಗರದ ಪ್ರಜ್ಞಾವಂತ ನಾಗರಿಕರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಶಾಸಕ ಬೆಲ್ಲದ್ ಮಾತು ತಪ್ಪಿದ್ದಾರೆ: ಈ ಹಿಂದೆ ಕವಿಸಂದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ ಜತೆಗೆ ಈ ಕುರಿತು ಚರ್ಚಿಸಲಾಗಿತ್ತು. ಅವರು ರಸ್ತೆ ಪಕ್ಕದ ಮರಗಳನ್ನು ಉಳಿಸಿಕೊಂಡೇ ಹೆದ್ದಾರಿ ಅಗಲೀಕರಣ ಯೋಜನೆ ಕಾರ್ಯಗತ ಮಾಡುವುದಾಗಿ ಹಾಗೂ ಎರಡು ತಿಂಗಳಲ್ಲಿ ಈ ಬಗ್ಗೆ ಸಭೆ ಕರೆಯುವುದಾಗಿ ವಾಗ್ಧಾನ ಮಾಡಿದ್ದರು.
ಆದರೆ, ಕಳೆದ ಕೆಲ ದಿನಗಳಿಂದ ಯಾರೊಬ್ಬರಿಗೂ ತಿಳಿಸದೆ ಕಾಮಗಾರಿ ಪ್ರಾರಂಭಿಸಿರುವುದು ಗಮನಕ್ಕೆ ಬಂದಿದೆ. ಹಲವು ಸಂದೇಹಗಳನ್ನು ಹುಟ್ಟ ಹಾಕಿದೆ ಎಂದರು. ಡಾ| ಪ್ರಕಾಶ ಭಟ್ ಮಾತನಾಡಿ, ಅಗಲೀಕರಣ ವೇಳೆ ಮರ ಕಡಿಯುವುದಿಲ್ಲ ಎಂದು ಹೇಳುತ್ತಿದ್ದಾರೆಯೇ ಹೊರತು ಪ್ರತ್ಯಕ್ಷದಲ್ಲಿ ಸಭೆ ಕರೆಯುತ್ತಿಲ್ಲ.
ರಸ್ತೆ ಅಗಲೀಕರಣ ಕುರಿತು ಕಾನೂನು ಪ್ರಕಾರ ಸಾರ್ವಜನಿಕ ಜಾಗೃತಿ, ಅಹವಾಲು ಸ್ವೀಕಾರ ನಡೆದಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದಿರುವಂತ ಅನೇಕ ಸಂಶಯಗಳು ಹುಟ್ಟಿಕೊಂಡಿವೆ ಎಂದರು. ಪಿ.ಬಿ. ಹಿರೇಮಠ, ಶಿವಾಜಿ ಸೂರ್ಯವಂಶಿ, ಓಟಿಲಿ ಆಯಾನೆಬೆನ್, ಪ್ರಕಾಶ ಗೌಡರ, ಅನೀಲ ಅಳ್ಳೋಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.