ಸಿಂಧನೂರು: ಗಿಡ-ಮರಗಳ ನಾಶದಿಂದ ಪ್ರಕೃತಿ ಮುನಿಸಿಕೊಂಡಿದ್ದು ಮಳೆ ಅಭಾವ ಎದುರಾಗಿದೆ. ನಾಲ್ಕು ವರ್ಷಗಳಿಂದ ಸತತ ಬರ ಕಾಡುತ್ತಿದೆ. ಸಮೃದ್ಧ ಮಳೆ-ಬೆಳೆಯಿಂದ ರೈತರ ಏಳ್ಗೆ, ನಾಡಿನ ಏಳ್ಗೆ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಗಿಡ-ಮರ ಬೆಳೆಸಲು ಆದ್ಯತೆ ನೀಡಲು ಮುಂದಾಗಬೇಕು ಎಂದು ಮೂರುಮೈಲ್ ಕ್ಯಾಂಪ್ ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲೋಕಕಲ್ಯಾಣಕ್ಕಾಗಿ ತಾವು ಕೈಗೊಂಡ 48 ದಿನಗಳ ಮೌನಾನುಷ್ಠಾನ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ನಾಡಿನ ರೈತರು ಮಳೆ, ಬೆಳೆ ಇಲ್ಲದೇ ತೀವ್ರ ಸಂಕಷ್ಟದಲ್ಲಿರುವುದು ದುಃಖಕರವಾದ
ಸಂಗತಿಯಾಗಿದೆ. ಇತ್ತೀಚೆಗೆ ಉತ್ತಮ ಮಳೆ ಬಿದ್ದಿರುವುದು ಸಂತಸ ಮೂಡಿದೆ. ಕಠಿಣವಾದ ಮೌನಾನುಷ್ಠಾನ ಫಲ ನೀಡಿದೆ. ಪ್ರತಿಯೊಬ್ಬರು ಗಿಡ-ಮರಗಳನ್ನು ಬೆಳೆಸುವ ಮೂಲಕ ನಾಡಿಗೆ ಸುಭಿಕ್ಷೆ ಉಂಟು ಮಾಡಬೇಕೆಂದು ಹೇಳಿದರು.
ಹೆಬ್ಟಾಳ ರೇಣುಕಾಶ್ರಮದ ಶಿವಪ್ರಕಾಶ ಶರಣರು ಮಾತನಾಡಿ, ಭಕ್ತರೆಲ್ಲ ಕೇವಲ ಕುಟುಂಬದ ಚಿಂತನೆ ಹೊಂದಿದ್ದರೆ ಸ್ವಾಮೀಜಿಗಳು ಜಗತ್ತಿನ ಒಳಿತಿನ ಚಿಂತನೆ ಹೊಂದಿರುತ್ತಾರೆ ಎನ್ನುವುದಕ್ಕೆ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮೌನಾನುಷ್ಠಾನ ಮೂಲಕ ಮಳೆ ತರಿಸಿರುವುದು ಸಾಕ್ಷಿ ಎಂದರು.
ರೌಡಕುಂದ ಸಂಸ್ಥಾನ ಹಿರೇಮಠದ ಶ್ರೀ ಮರಿಸಿದ್ಧಲಿಂಗ ಸ್ವಾಮೀಜಿ, ಚಿಮ್ಮಲಗಿ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಸ್ವಾಮೀಜಿ, ತುರುವಿಹಾಳ ಪುರವರ ಹಿರೇಮಠದ ಶ್ರೀ ಅಮರಗುಂಡ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಹುಡಾ ಕುಮಾರಸ್ವಾಮಿ, ಸಂಗಯ್ಯಸ್ವಾಮಿ ಸರಗಣಾಧೀಶ್ವರ ಮಠ, ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಎನ್.ಶಿವನಾಗಪ್ಪ, ತಾಲೂಕು ವೀರಶೈವ
ಸಮುದಾಯ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಜಿಪಂ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡ್ರ, ನಗರಸಭೆ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ನಾಗಮ್ಮ ಛತ್ರಪ್ಪ, ವೀರಶೈವ ಸಮುದಾಯ ಯುವ ಘಟಕ ಅಧ್ಯಕ್ಷ ಶಿವರಾಜ ಪಾಟೀಲ ಗುಂಜಳ್ಳಿ, ಅಮರೇಶ ಕಂಬಾರ, ಹಂಪಯ್ಯಸ್ವಾಮಿ ರ್ಯಾವಿಹಾಳ ಇತರರು ಉಪಸ್ಥಿತರಿದ್ದರು.
ಶ್ರೀಗಳ ಪಾದಪೂಜೆ, ಜಗದ್ಗುರು ರೇಣುಕಾಚಾರ್ಯರಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ, ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ, ಶ್ರೀ ಮಹಾಮೃತ್ಯುಂಜಯ ಹೋಮ, ಪೂರ್ಣಾಹುತಿ, ಬಾಲ ಮೃತ್ಯುಂಜಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.