ನರೇಗಲ್ಲ: ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರ ಪರಿಸರದ ಕೊಡಗೆಯಾಗಿದೆ. ಗಿಡ, ಮರಗಳು ಇಂಗಾಲದ ಡೈಆಕ್ಸೆಡ್ ಹೀರಿಕೊಂಡು ನಮಗೆ ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷ್ತ್ರ್ಮಾಣು ಜೀವಿಗಳು ಇರುತ್ತವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವಿ. ಹೇಳಿದರು.
ಅಬ್ಬಿಗೇರಿ- ಸವಡಿ ರಸ್ತೆ ಪಕ್ಷದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಪಂ ಆಶ್ರಯದಲ್ಲಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಮರಗಳು ಅವಶ್ಯಕವಾಗಿವೆ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ನೆಮ್ಮಲ್ಲರ ಕರ್ತವ್ಯವಾಗಿದೆ. ಹಣ ಆಸ್ತಿಗಳಿಕೆಗಿಂತಲೂ ಉತ್ತಮ ಪರಿಸರ ಮನುಕುಲದ ಸಂಪತ್ತು. ಮಾನವ ಪ್ರಕೃತಿ ಒಂದು ಅವಿಭಾಜ್ಯ ಅಂಗ. ಪ್ರಕೃತಿ ಉಳಿದರೆ ಮಾತ್ರ ಮಾನವನ ಉಳಿವು ಸಾಧ್ಯವಾಗುತ್ತಿದೆ. ಪ್ರಕೃತಿ ಮತ್ತು ಮನುಷ್ಯ ಒಂದೇ ನಾಣ್ಯದ ಎರಡು ಮುಖಗಳಂತೆ. ಮಾನವ ಇಲ್ಲದಿದ್ದರೂ ಪ್ರಕೃತಿ ಇರುತ್ತದೆ. ಪ್ರಕೃತಿ ಬಿಟ್ಟು ಮಾನವನ ಉಳಿವು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಹೇಳಿದರು.
ಗ್ರಾಪಂ ಸದಸ್ಯ ಬಸವರಾಜ ತಳವಾರ ಮಾತನಾಡಿ, ಅರಣ್ಯ ಇಲಾಖೆ ರಸ್ತೆ ಪಕ್ಕದಲ್ಲಿ ಸಾವಿರಾರೂ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹ ಕೈಜೋಡಿಸಬೇಕು. ತಮ್ಮ ಮನೆ, ರಸ್ತೆಗಳಲ್ಲಿ ನೆಟ್ಟಿರುವ ಗಿಡಗಳನ್ನು ಪೋಷಿಸಬೇಕು. ಮುನುಷ್ಯನ ಅವಶ್ಯಕತೆ ಪೂರೈಸಲು ಪರಿಸರ ಬಳಸಿಕೊಳ್ಳಬೇಕೇ ಹೊರತು ದುರಾಸೆಗಳಿಗಲ್ಲ. ಮಹಾತ್ಮ ಗಾಂಧೀಜಿ ಮಾತಿನಂತೆ ಮನುಷ್ಯ ತನ್ನ ಅವಶ್ಯಕತೆ ಈಡೇರಿಸಿಕೊಳ್ಳಲಷ್ಟೇ ಪರಿಸರ ಬಳಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕಳಕಪ್ಪ ಬಿಲ್ಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್., ಆರ್‌ಎಫ್‌ಒ ಕಿರಣ ಅಂಗಡಿ, ಮಹಾಂತೇಶ ಪಟ್ಲೂರ, ಎಂ.ಬಿ. ದೊಡ್ಡವಾಡ, ಎಸ್.ಎ. ಹೀರೇಹಾಳ ಇದ್ದರು.