Advertisement

ಪರಿಸರ ಮಾಲಿನ್ಯ: ಶೀಘ್ರ ಸಭೆ ಕರೆಯಲು ನಿರ್ಣಯ

10:54 PM Sep 17, 2019 | Team Udayavani |

ಸುಳ್ಯ: ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿನ ಕಟ್ಟಡ, ಫ್ಯಾಕ್ಟರಿಗಳಿಂದ ತ್ಯಾಜ್ಯ ನೀರು ಹರಿದು ನದಿ, ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಇದರ ವಿರುದ್ಧ ಕ್ರಮಕ್ಕಾಗಿ ಸುಬ್ರಹ್ಮಣ್ಯ, ನೆಲ್ಲೂರು ಕೆಮ್ರಾಜೆ, ಐವರ್ನಾಡು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧಿಕಾರಿ, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ 15 ದಿನಗಳಲ್ಲಿ ಸಭೆ ಕರೆಯಲು ತಾ.ಪಂ. ಸಾಮಾನ್ಯ ಸಭೆ ನಿರ್ಣಯಿಸಿತು.

Advertisement

ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾವಿಸಿದ ಆಶೋಕ್‌ ನೆಕ್ರಾಜೆ ಸುಬ್ರಹ್ಮಣ್ಯದಲ್ಲಿ ಲಾಡ್ಜ್ಗಳ ಸ್ನಾನಗೃಹದ ನೀರನ್ನು ಹೊರಗಡೆ ಬಿಟ್ಟು ಪರಿಸರ ಮಾಲಿನ್ಯ ಉಂಟಾಗಿದೆ. ಸ್ವತಃ ತಾ.ಪಂ. ಅಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಪರಿಶೀಲನೆ ನಡೆಸಿದ್ದಾರೆ. ಆದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿ ಉತ್ತರಿಸುವಂತೆ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಉತ್ತರಿಸಿ, ತಾ.ಪಂ. ಸಭೆ ಸೂಚನೆ ಅನ್ವಯ ನಾವು ಸ್ಥಳ ಪರಿಶೀಲಿಸಿ ಸ್ಥಳೀಯಾಡಳಿತ, ತಾ.ಪಂ.ಗೆ ವರದಿ ಸಲ್ಲಿಸಿದ್ದೇವೆ. ಕ್ರಮ ಕೈಗೊಳ್ಳುವುದು ಅವರ ವ್ಯಾಪ್ತಿಗೆ ಸೇರಿದೆ ಎಂದರು. ತ್ಯಾಜ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಹೊಂದಾಣಿಕೆ ಬೇಡ ಎಂದು ಸದಸ್ಯ ಅಬ್ದುಲ್‌ ಗಫೂರ್‌ ಆಗ್ರಹಿಸಿದರು.

ತಾ.ಪಂ. ಇಒ ಭವಾನಿಶಂಕರ ಉತ್ತರಿಸಿ, ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಸಿಎಸ್‌ ಅವರು ಸ್ಥಳ ಪರಿಶೀಲಿಸಿದ್ದಾರೆ. ಪಿಡಿಒ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದರು.

ಗಂಭೀರ ವಿಚಾರ
ಜಿ.ಪಂ.ಸದಸ್ಯ ಹರೀಶ್‌ ಕಂಜಿಪಿಲಿ ಮಾತನಾಡಿ, ಇದೊಂದು ಗಂಭೀರ ಸಂಗತಿ. ಗ್ರಾ.ಪಂ. ಇಂತಹ ನಾಲ್ಕೈದು ಪ್ರಕರಣದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ. ಪರವಾನಿಗೆ ರದ್ದು ಮಾಡಬೇಕು ಎಂದ ಅವರು, ತಾಲೂಕಿನ ನೆಲ್ಲೂರು ಕೆಮ್ರಾಜೆ, ಆಲೆಟ್ಟಿ, ಸುಬ್ರಹ್ಮಣ್ಯ, ಐವರ್ನಾಡು ಗ್ರಾ.ಪಂ.ವ್ಯಾಪ್ತಿಯ ರಬ್ಬರ್‌ ಫ್ಯಾಕ್ಟರಿ, ಲಾಡ್ಜ್ ಮತ್ತು ಖಾಸಗಿ ಸ್ಥಳದಿಂದ ತ್ಯಾಜ್ಯವು ಪರಿಸರಕ್ಕೆ ಸೇರುತ್ತಿರುವ ಬಗ್ಗೆ ದೂರು ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಈ ಬಗ್ಗೆ ಅಧ್ಯಕ್ಷರ ಸೂಚನೆಯಂತೆ ಮುಂದಿನ 15 ದಿನಗಳಲ್ಲಿ ಈ ನಾಲ್ಕು ಗ್ರಾ.ಪಂ.ಗೆ ಸಂಬಂಧಿಸಿ ಒಂದೆಡೆ ಸೇರಿ ಸಭೆ ನಡೆಸಿ ಕಠಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲು ಸೂಚಿಸಲಾಯಿತು.

Advertisement

21 ಮನೆ ಪೂರ್ಣ ಹಾನಿ
ಉತ್ತರಿಸಿದ ವಸತಿ ನಿಗಮದ ಅಧಿಕಾರಿ, ತಾಲೂಕಿನಲ್ಲಿ 21 ಮನೆ ಪೂರ್ಣ ಹಾನಿ ಉಂಟಾಗಿದೆ. ಇದರಲ್ಲಿ 6 ಮನೆಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಉಳಿದ ಸಂತ್ರಸ್ತರ ಮನೆ ಹಾನಿ ಆಗಿಲ್ಲ. ಅಲ್ಲಿ ಭವಿಷ್ಯದಲ್ಲಿ ವಾಸಿಸಲು ಸಾಧ್ಯವಿಲ್ಲದ ಪ್ರದೇಶ ಎಂದು ನಿರ್ಧರಿಸಿ ಆ ಸಂತ್ರಸ್ತರ ಕುಟುಂಬಕ್ಕೆ ಬೇರೆ ಕಡೆ ನಿವೇಶನ ಒದಗಿಸಿ ಮನೆ ಕಟ್ಟಿಕೊಡಲಾಗುವುದು. ಅದಕ್ಕಾಗಿ ಜಿಪಿಎಸ್‌ ಆಗಿದೆ. ಶೇ. 25ರಿಂದ 75ರಷ್ಟು ಹಾನಿ ಉಂಟಾಗಿರುವ 6 ಮನೆ, 15 ರಿಂದ 20 ರಷ್ಟು ನಷ್ಟವಾಗಿರುವ 34 ಮನೆಗಳನ್ನು ಗುರುತಿಸಲಾಗಿದೆ. ಸಹಾಯಧನಕ್ಕೆ ಹೆಸರು ನಮೂದು ಮಾಡಲಾಗಿದೆ ಎಂದರು.

ರಸಗೊಬ್ಬರ ದುಬಾರಿ: ಚರ್ಚೆ
ಸಹಕಾರ ಸಂಸ್ಥೆಗಳಲ್ಲಿ ಮಾರಾಟ ಮಾಡುತ್ತಿರುವ ಇಪ್ಕೋ ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂಬ ಅಧಿಕಾರಿಗಳ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್‌ ನೆಕ್ರಾಜೆ, ಸಹಕಾರ ಸಂಸ್ಥೆಗಳಲ್ಲಿ ಇಪ್ಕೋ ರಸಗೊಬ್ಬರಕ್ಕೆ 1,400 ರೂ. ತನಕ ಧಾರಣೆ ಇದೆ. ಆದರೆ ಹೊರ ಮಾರುಕಟ್ಟೆಯಲ್ಲಿ 1,300 ರೂ. ಒಳಗೆ ಸಿಗುತ್ತದೆ. ರಿಯಾಯಿತಿ ದರ ಎಂದರೆ ಇಲ್ಲಿ ಹೊರ ಮಾರುಕಟ್ಟೆಯಿಂದ ಹೆಚ್ಚಿನ ಧಾರಣೆ ಇರುವುದು ಹೇಗೆ ಎಂದು ಪ್ರಶ್ನಿಸಿದರು. ರಸಗೊಬ್ಬರ ಮಾರಾಟದ ಹಿಂದೆ ದೊಡ್ಡ ಲಾಬಿ ಇರುವ ಅನುಮಾನ ಇದ್ದು, ಇದನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಉತ್ತರಿಸಿದ ಅಧಿಕಾರಿಗಳು ಧಾರಣೆ 1,150 ರೂ. ಎಂದರೂ, ಈ ಬಗ್ಗೆ ಖಚಿತ ಮಾಹಿತಿ ಇಲ್ಲದ ಕಾರಣ ತಾ.ಪಂ.ಗೆ ದರ ಪಟ್ಟಿ ಒದಗಿಸುವುದಾಗಿ ಭರವಸೆ ನೀಡಿದರು.

ಮ್ಯಾನುವಲ್‌ನಲ್ಲಿ ನೀಡಿ
ಭೂ ಪರಿವರ್ತನೆ ನಕ್ಷೆ ಆಧಾರದಲ್ಲಿ ವಿನ್ಯಾಸ ನಕ್ಷೆ ತಯಾರಿಸಿಕೊಂಡು ಗ್ರಾ.ಪಂ.ನಿಂದ 9/11 ಮತ್ತು ನ.ಪಂ.ನಿಂದ ನಮೂನೆ-3 ಸ್ಪಷ್ಟವಾಗಿ ದಾಖಲಿಸಿ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಸಲು ಅಸಾಧ್ಯವಾಗಿದ್ದು, ಈ ಕುರಿತು ಸರಕಾರದಿಂದ ತಿದ್ದುಪಡಿ ಬರುವ ತನಕ ಮ್ಯಾನುವಲ್‌ನಲ್ಲಿ 9/11 ಮತ್ತು ನಮೂನೆ-3 ನೀಡುವಂತೆ ಅಬ್ದುಲ್‌ ಗಫೂರ್‌ ಹೇಳಿದರು.

ಕೋಳಿ ಸಾಕಾಣೆ ಉದ್ಯಮವನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಲು ಆ್ಯಕ್ಟ್ ತರಲಾಗಿದೆ. ಆದರೆ ಅದು ಜಾರಿ ಆಗಿಲ್ಲ ಅಂದರೆ ಏನರ್ಥ ಎಂದು ಅಬ್ದುಲ್‌ ಗಫೂರ್‌ ಪ್ರಶ್ನಿಸಿದರು. ಆ್ಯಕ್ಟ್ ಪ್ರಕಾರ ಕನ್ವರ್ಶನ್‌ ಆವಶ್ಯಕತೆ ಇಲ್ಲ. ಆದರೆ ಇಲ್ಲಿ ಕನ್ವರ್ಶನ್‌ ಬೇಕು ಎನ್ನುತ್ತಾರೆ. ಎನ್‌ಒಸಿ ಕೊಟ್ಟರೆ ಸಾಕು ಎಂದು ಗಫೂರ್‌ ಹೇಳಿದರು. ಆದರೆ ಡೋರ್‌ ನಂಬರ್‌ ಇಲ್ಲದೆ ಎನ್‌ಒಸಿ ನೀಡಲಾಗುವುದಿಲ್ಲ. ಮೆಸ್ಕಾಂಗೂ ವಿದ್ಯುತ್‌ ಸಂಪರ್ಕ ನೀಡಲು ಅಸಾಧ್ಯ ಎಂದು ಅಧಿಕಾರಿಗಳು ಉತ್ತರಿಸಿದರು.

ಮದ್ಯ ಮಾರಾಟ ಚರ್ಚೆ
ಕಲ್ಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಾಚಿಲ, ಎಣ್ಮೂರು ಪರಿಸರದಲ್ಲಿ ಕಡಿಮೆ ದರದ ಮದ್ಯ ಮಾರಾಟದಿಂದ 20ಕ್ಕೂ ಅಧಿಕ ಮಂದಿಯ ಪ್ರಾಣಕ್ಕೆ ಕುತ್ತು ಉಂಟಾಗಿರುವ ಬಗ್ಗೆ ಅಬ್ದುಲ್‌ ಗಫೂರ್‌ ಪ್ರಸ್ತಾವಿಸಿದರು. ಕಲಬೆರೆಕೆ ಅಥವಾ ಗುಣಮಟ್ಟ ಕಡಿಮೆ ಇರುವ ಮದ್ಯ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿ ಹೇಳಿದರು. ಈ ಬಗ್ಗೆ ಪರಿಶೀಲಿ ಸುವಂತೆ ಜನಪ್ರತಿನಿಧಿಗಳು ಆಗ್ರಹಿಸಿದರು.

ಕಣ್ತಪ್ಪಿಗೆ ಆಕ್ರೋಶ
ಪಾಲನಾ ವರದಿಯಲ್ಲಿ ಕಲ್ಮಕಾರಿನಲ್ಲಿ ಅಕ್ರಮ ಮದ್ಯ ಮಾರಾಟ ಎಂದು ದಾಖಲಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಕಲ್ಮಕಾರಿನಲ್ಲಿ ಮದ್ಯ ಸೇವಕರ ಸಂಖ್ಯೆ ತೀರಾ ಕಡಿಮೆ ಎಂದು ಸ್ಥಳೀಯ ಸದಸ್ಯ ಉದಯ ಅವರು ಹೇಳಿದರು. ಕಣ್ತಪ್ಪಿನಿಂದ ಕಲ್ಮಕಾರು ಹೆಸರು ಸೇರಿದೆ ಎಂದು ಅಧಿಕಾರಿ ಉತ್ತರಿಸಿದರು. ಈ ರೀತಿಯಲ್ಲಿ ತಪ್ಪಿನಿಂದ ನಿರಪರಾಧಿಗಳ ಮನೆಗೆ ದಾಳಿ ನಡೆದಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ದೇವರಹಳ್ಳಿ ಶಾಲಾ ಸ್ಥಳ ಗಡಿಗುರುತು ಮಾಡಿ ಹೆಚ್ಚುವರಿ ಹೊರ ಭಾಗದ ಸ್ಥಳವನ್ನು ಫಲಾನುಭವಿಗಳಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿ ಕೆಲ ಫಲಾನುಭವಿಗಳೇ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ನಡುವೆ ಸಿಕ್ಕಿ ಹಾಕಿಸುವ ಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅದಾಗ್ಯೂ ಹಕ್ಕುಪತ್ರ ಒದಗಿಸುವ ಪ್ರಕ್ರಿಯೆಗೆ ವೇಗ ನೀಡಲು ಆಶೋಕ್‌ ನೆಕ್ರಾಜೆ ಹೇಳಿದರು. ಏನೆಕಲ್ಲಿನಲ್ಲಿ ರಾಷ್ಟ್ರೀಯ ಅಥವಾ ಕರ್ನಾಟಕ ಬ್ಯಾಂಕ್‌ ತೆರೆಯವಂತೆ ಅಶೋಕ್‌ ಆಗ್ರಹಿಸಿದರು. ನಗರದ ಭಗವತಿ ದ್ವಾರದ ಸನಿಹದ ಹಾಸ್ಟೆಲ್‌ ಬಳಿ ತ್ಯಾಜ್ಯ ನೀರು ತೆರವಿಗೆ ಆಗ್ರಹಿಸಲಾಯಿತು.

ಪರಮೇಶ್ವರಿ ಕುಟುಂಬದ ಗೋಳು: ಸುದಿನ ವರದಿ ಪ್ರಸ್ತಾವ
ಮಳೆಯಿಂದ ಮನೆ ಕಳೆದುಕೊಂಡ ಬೀದಿಗೆ ಬಿದ್ದ ಬೆಳ್ಳಾರೆ ಗ್ರಾಮದ ಪಾಟಾಜೆ ಪರಮೇಶ್ವರಿ ಅವರ ಕುಟುಂಬದ ಕುರಿತಂತೆ ಸೆ. 17ರಂದು “ಉದಯವಾಣಿ’ ಸುದಿನದಲ್ಲಿ ಪ್ರಕಟಗೊಂಡ “ಕುಸಿದ ಮನೆಯಿಂದ ಶಿಥಿಲ ಸರಕಾರಿ ಕಟ್ಟಡಕ್ಕೆ ಸಂತ್ರಸ್ತ ಕುಟುಂಬ ಸ್ಥಳಾಂತರ’ ಈ ವರದಿ ಬಗ್ಗೆ ಸದಸ್ಯ ಆಶೋಕ್‌ ನೆಕ್ರಾಜೆ ಪ್ರಸ್ತಾವಿಸಿ, ಕುಸಿದ ಮನೆಯಿಂದ ಕುಟುಂಬವನ್ನು ಸೋರುವ ಸರಕಾರಿ ಕಟ್ಟಡಕ್ಕೆ ಸ್ಥಳಾಂತರಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಆಡಳಿತ ವ್ಯವಸ್ಥೆ ಬಗ್ಗೆ ನಾಚಿಕೆಯಾಗುತ್ತದೆ. ವಿಕಲಚೇತನ ಯುವಕನಿರುವ ಬಡ ಕುಟುಂಬಕ್ಕೆ ಸರಿಯಾದ ಆಸರೆ, ಆಹಾರದ ವ್ಯವಸ್ಥೆ ಕಲ್ಪಿಸದೆ ಕಡೆಗಣಿಸಿರುವ ದುರಂತ ಎಂದರು. ಸದಸ್ಯ ಅಬ್ದುಲ್‌ ಗಫೂರ್‌ ಧ್ವನಿಗೂಡಿಸಿದರು. ಈ ವಿಚಾರ ಕೆಲ ಕಾಲ ಸದನದಲ್ಲಿ ಗಂಭೀರ ಚರ್ಚೆಗೆ ವೇದಿಕೆ ಒದಗಿಸಿತ್ತು. ಬಳಿಕ ಉತ್ತರಿಸಿದ ವಸತಿ ಅಧಿಕಾರಿ, ತಹಶೀಲ್ದಾರ್‌ ಸೂಚನೆ ಮೇರೆಗೆ ಮಂಗಳವಾರವೇ ಆ ಕುಟುಂಬಕ್ಕೆ 10 ಸಾವಿರ ರೂ. ಚೆಕ್‌ ನೀಡಲಾಗುವುದು. ಜತೆಗೆ ಮನೆ ಶೇ. 75ಕ್ಕಿಂತ ಅಧಿಕ ನಷ್ಟ ಎಂದು ದಾಖಲಿಸಿ ಪೂರ್ಣ ಹಾನಿಯಡಿ ಹೊಸ ಮನೆಗೆ ಸಹಾಯಧನ ನೀಡಲು ವರದಿ ಸಲ್ಲಿಸಲಾಗಿದೆ ಎಂದರು.

10 ಲಕ್ಷ ರೂ. ನೀಡಿ
ಸುಳ್ಯ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಡಿ ಮನೆ ಕಳೆದುಕೊಂಡ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮನೆ ಹಾನಿ ಸಂದರ್ಭ ಭಾಗಶಃ ಎಂದು ನಮೂದಿಸುವ ಬದಲು ಗರಿಷ್ಠ ಪ್ರಮಾಣದಲ್ಲಿ ನೆರವಾಗುವ ನಿಟ್ಟಿನಲ್ಲಿ ವರದಿ ಸಲ್ಲಿಸುವಂತೆ ಹರೀಶ್‌ ಕಂಜಿಪಿಲಿ ಹೇಳಿದರು. ಇದಕ್ಕೆ ಅಶೋಕ್‌ ನೆಕ್ರಾಜೆ, ಅಬ್ದುಲ್‌ ಗಫೂರ್‌, ರಾಧಾಕೃಷ್ಣ ಬೊಳ್ಳೂರು ಮೊದಲಾದವರು ಧ್ವನಿಗೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next