Advertisement

ಜಾಗತಿಕ ತಾಪಮಾನ ತಡೆಗೆ ಪರಿಸರ ಅವಶ್ಯ

06:02 PM Jun 21, 2022 | Team Udayavani |

ದೇವನಹಳ್ಳಿ: ಎಲ್ಲಿ ಮರಗಿಡಗಳ ಪೋಷಣೆ ಇರುತ್ತದೆಯೋ ಅಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಇರುತ್ತದೆ. ಇತ್ತೀಚೆಗೆ ಅರಣ್ಯಗಳು ನಾಶವಾಗುತ್ತಿವೆ. ರಸ್ತೆ ಅಗಲೀಕರಣದಿಂದ ಮರಗಿಡಗಳ ಮಾರಣಹೋಮ ಹೆಚ್ಚಾಗಿದ್ದು, ಮನುಷ್ಯನ ಕೊನೆಗಾಲ ಸಮೀಪಿಸುತ್ತಿದೆ ಎಂದರ್ಥ ಎಂದು ಕನ್ನಮಂಗಲ ಗ್ರಾಪಂ ಸದಸ್ಯ ನಾಗೇಶ್‌ ತಿಳಿಸಿದರು.

Advertisement

ತಾಲೂಕಿನ ದೊಡ್ಡಪ್ಪನಹಳ್ಳಿ ಗ್ರಾಮದಲ್ಲಿರುವ ಮಿಲೇನಿಯಂ ಪಬ್ಲಿಕ್‌ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಯುವ ಪೀಳಿಗೆಗಳ ಭವಿಷ್ಯಕ್ಕಾಗಿ ಪರಿಸರವನ್ನು ಈಗಿನಿಂದಲೇ ಉಳಿಸುವುದು ಪ್ರತಿಯೊಬ್ಬರು ಕರ್ತವ್ಯವಾಗಿದೆ. ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದರೆ, ನಾವು ಉಸಿರಾಡಲು ಗಾಳಿ ಎಲ್ಲಿಂದ ಸಿಗುತ್ತದೆ ಎಂಬ ಜ್ಞಾನವನ್ನು ಹೊಂದಬೇಕು. ಒಂದು ಮರವನ್ನು ಉರುಳಿಸಿದರೆ ಆ ಜಾಗದಲ್ಲಿ 10 ಗಿಡಗಳನ್ನು ನೆಟ್ಟು ಪೋಷಿಸಿ
ಮರವನ್ನಾಗಿಸಬೇಕೆಂಬ ಸಂಕಲ್ಪ ಹೊಂದಬೇಕು ಎಂದುಹೇಳಿದರು.

ಪರಿಸರದ ಅರಿವು ಮೂಡಿಸಿ: ಶಾಲಾ ಮುಖ್ಯ ಶಿಕ್ಷಕಿ ಮೆಹರುನ್ನಿಸಾ (ಶಾಹೆದಾ) ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರದ ಅರಿವನ್ನು ಮೂಡಿಸಲಾಗುತ್ತಿದೆ. ಪರಿಸರ ಉಳಿದರೆ ಮನುಕುಲ ಉಳಿಯುತ್ತದೆ. ಕಾಡು-ನಾಡು ಎರಡು ನಾಣ್ಯದ ಮುಖಗಳು. ಒಂದು ಕಳೆದುಕೊಂಡರೆ ಮತ್ತೂಂದು ಸಿಗುವುದಿಲ್ಲ. ಶಾಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯಲ್ಲಿ ಪರಿಸರ ಎಷ್ಟು ಮುಖ್ಯ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಪರಿಸರ ನಾಶದಿಂದ ಮುಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವಿದ್ಯುತ್‌ ಕಂಬ ತೆರವಿಗೆ ಮನವಿ: ಶಾಲೆಯ ಮುಂಭಾಗದಲ್ಲಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸುವಂತೆ ಗ್ರಾಪಂ ಸದಸ್ಯರಿಗೆ ಶಾಲಾ ಮುಖ್ಯಶಿಕ್ಷಕಿ ಮನವಿ ಮಾಡಿದರು. ಗ್ರಾಪಂಗೆ ಅರ್ಜಿ ಸಲ್ಲಿಸುವಂತೆ ಸದಸ್ಯರು ಶಿಫಾರಸ್ಸು ಮಾಡಿದರು. ಶಾಲಾ ಮಕ್ಕಳು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ವೇಷಭೂಷಣ ಮತ್ತು ಪರಿಸರ ಉಳಿಸಿ ಎಂಬ ಸಂದೇಶದ ನಾಮಫ‌ಲಕಗಳನ್ನು ತೋರಿಸಿದ್ದು ಗಮನಸೆಳೆಯಿತು.

ಕನ್ನಮಂಗಲ ಗ್ರಾಪಂ ಸದಸ್ಯರಾದ ಮೋಸಿನ್‌ತಾಜ್‌ ನಾಸೀರ್‌ಅಹಮದ್‌, ಸೋಮಶೇಖರ್‌, ಶಾಜೀನ್‌ ಹೈದರ್‌ ಸಾಬ್‌, ಶಾಲಾ ಆಡಳಿತ ಅಧಿಕಾರಿ ಆಸ್ಮಿಯ, ಶಾಲಾ ಶಿಕ್ಷಕರಾದ ಸೈಯದ್‌ ಅಲ್ತಾಫ್, ಸೂಫಿಯ, ಸಯಿದ ಶಭಾನ, ಹಾಜೀರ ಬೇಗಂ, ನಫಿಸ ಬಾನು, ಅರ್ಚನ, ಸಿದ್ದೀಖ ಫೈರೋಸ್‌, ಸೈಯದ್‌ ಅಹಮದ್‌, ನಜ್ಮಾ, ಬಾಬು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next