Advertisement
ಸತ್ತ ಸತ್ಯವಾನನನ್ನು ಬದುಕಿಸಿದ ಪತ್ನಿ ಸಾವಿತ್ರಿಯ ಕತೆ ಇದು. ಸತ್ಯವಾನನ ತಂದೆ ಅಶ್ವಪತಿ, ಮಾವ ದ್ಯುಮತ್ಸೇನ. ಸತ್ಯವಾನನನ್ನು ಮದುವೆಯಾದ ಬಳಿಕ ಈತನಿಗೆ ಇರುವುದು ಒಂದು ವರ್ಷದ ಆಯುಷ್ಯವೆನ್ನುವುದು ಸಾವಿತ್ರಿಗೆ ತಿಳಿಯುತ್ತದೆ. ಸತ್ಯವಾನ ತೀರಿಹೋಗುವ ಬಹು ಮುನ್ನವೇ ಉಪವಾಸಾದಿ ವ್ರತಗಳನ್ನು ಸಾವಿತ್ರಿ ಪಾಲಿಸುತ್ತಾಳೆ. ಸತ್ಯವಾನ ಒಂದು ದಿನ ಮರದ ಕೆಳಗೆ ಬಿದ್ದು ಸಾಯುತ್ತಾನೆ. ಸಾವಿತ್ರಿ ಯಮನನ್ನು ತಡೆಯುತ್ತಾಳೆ. ಆತ ಒಪ್ಪಲೂ ಇಲ್ಲ. ಕೊನೆಗೆ ಮೂರು ವರಗಳನ್ನು ಕೇಳು ಎನ್ನುತ್ತಾನೆ. ಕುರುಡನಾದ ದ್ಯುಮತ್ಸೇನನಿಗೆ ದೃಷ್ಟಿ ಬರಬೇಕು, ಅಶ್ವಪತಿಗೆ ಮಕ್ಕಳಾಗಬೇಕು (ಸಾವಿತ್ರಿ ದತ್ತು ಮಗಳು), ಸತ್ಯವಾನನಿಗೂ ಮಕ್ಕಳಾಗಬೇಕು ಎಂದು ಸಾವಿತ್ರಿ ವರ ಕೇಳುತ್ತಾಳೆ.
ಸತ್ಯವಾನ್ ಆಲದ ಮರದ ಬುಡದಲ್ಲಿ ಸತ್ತ ಕಾರಣ, ವಟ ಸಾವಿತ್ರಿ ವ್ರತವನ್ನು ಮಹಿಳೆಯರು ಗಂಡನ ಶ್ರೇಯಸ್ಸಿಗಾಗಿ ಆಲದ ಮರದ ಬುಡದಲ್ಲಿ ಆಚರಿಸುತ್ತಾರೆ. ಅರಸಿನ, ಕುಂಕುಮವನ್ನು ಹಚ್ಚಿ, ಹೂವುಗಳನ್ನು ಸಮರ್ಪಿಸಿ, ದಾರದಿಂದ ಐದು ಸುತ್ತು ಹಾಕಿ ಪೂಜೆ ಸಲ್ಲಿಸುವ ಕ್ರಮವಿದೆ. ಈ ಸಂಪ್ರದಾಯ ಬಹುತೇಕ ಇರುವುದು ಉ.ಕ. ಜಿಲ್ಲೆ, ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ. ಉದ್ಯೋಗಾರ್ಥವಾಗಿ ಬೇರೆ ಕಡೆಯಿಂದ ಬಂದವರು ಆಯಾ ಊರುಗಳಲ್ಲಿರುವ ಆಲದ ಮರಕ್ಕೆ ಜ್ಯೇಷ್ಠ ಮಾಸದ ಪರ್ವಕಾಲದಲ್ಲಿ ಪೂಜೆ ಸಲ್ಲಿಸುತ್ತಾರೆ. “ನಾನು ಇಂದು ಪೂಜೆ ಸಲ್ಲಿಸಲು ಹೋದಾಗ ಇನ್ನೂ ಮೂರ್‍ನಾಲ್ಕು ಮಹಿಳೆಯರು ಬಂದು ಪೂಜಿಸಿದಾಗ ನನಗೆ ಬಹಳ ಆನಂದವಾಯಿತು’ ಎನ್ನುತ್ತಾರೆ ಮಂಗಳೂರು ಲಾಲ್‌ಬಾಗ್ ನಿವಾಸಿ ಸ್ನೇಹಾ ಎನ್. ಇವರ ಗಂಡನ ಮನೆ ಕಾರವಾರ. ಅಲ್ಲಿನ ಸಂಸ್ಕೃತಿ ಮಂಗಳೂರಿನಲ್ಲಿಯೂ ಅನಾವರಣಗೊಂಡಿತು.
Related Articles
ಈಗ ಪರಿಸರ ದಿನ, ವನ ಮಹೋತ್ಸವ ನಡೆಯುವ ಹೊತ್ತಿಗೆ ವಟ ಸಾವಿತ್ರಿ
ವ್ರತವೂ ನಡೆಯುತ್ತದೆ. ಒಂದು ಮರ ವನ್ನು ಪೂಜೆ ಮಾಡುವುದೆಂದರೆ ಅದರ ಕೊಡುಗೆ ಸ್ಮರಿಸಿದಂತೆ. ಆಗ ಸತ್ಯವಾನ್ ಮರದ ಬುಡದಲ್ಲಿ ಸತ್ತಿದ್ದರೆ, ಈಗ ಮರಗಳೇ ಸಾಯುತ್ತಿವೆ. ಹೀಗೆಂದರೆ ತಪ್ಪಾಗುತ್ತದೆ, ಮರಗಳನ್ನು ಸಾಯಿಸುತ್ತಿದ್ದೇವೆ ಎನ್ನುವುದು ಹೆಚ್ಚು ಪ್ರಸ್ತುತವೆನಿಸುತ್ತಿದೆ. ಆಗ ಸಾವಿತ್ರಿ ಸತ್ಯವಾನನನ್ನು ಬದುಕಿಸುತ್ತಾಳೆ, ಈಗ ನಾವು ಮರಗಳನ್ನು ಬದುಕಿಸಬೇಕಾಗಿದೆ.
Advertisement