ಹುಬ್ಬಳ್ಳಿ: ಜೀವನ ಒತ್ತಡಮಯವಾಗುತ್ತಿದ್ದು, ಒತ್ತಡ ನಿರ್ವಹಣೆ ಮಾಡುವ ದಿಸೆಯಲ್ಲಿ ಪರಿಸರ ಪ್ರೇಮ ಬೆಳೆಸಿಕೊಳ್ಳುವುದು ಪೂರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಉದ್ಯಾನ ಮತ್ತು ಫಲ-ಪುಷ್ಪ ಪ್ರದರ್ಶನ ಸಮಿತಿ ಸಹಯೋಗದಲ್ಲಿ ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ರವಿವಾರ ನಡೆದ ಫಲ-ಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮದ್ಯಪಾನದಿಂದ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು ಎಂದು ಕೆಲವರು ಮದ್ಯ ವ್ಯಸನಕ್ಕೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪರಿಸರದ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅವಶ್ಯಕ ಎಂದರು. ತೋಟಗಾರಿಕಾ ಇಲಾಖೆಯವರು ಮುಂದಿನ ವರ್ಷದಿಂದ ಪೂರ್ವಭಾವಿ ಸಭೆ ಮಾಡಿ ಸಮರ್ಪಕವಾಗಿ ಫಲ-ಪುಷ್ಪ ಪ್ರದರ್ಶನ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಗರದಲ್ಲಿ ಜಾಗದ ಕೊರತೆಯಿಂದಾಗಿ ಮನೆಗಳ ಮೇಲೆ ತಾರಸಿ ತೋಟ ಮಾಡುವ ಪರಿಪಾಠ ಹೆಚ್ಚಾಗುತ್ತಿದೆ. ನಗರವನ್ನು ಹಸಿರುಮಯಗೊಳಿಸುವ ಮನೋಭಾವ ನಾಗರಿಕರಿಗೆ ಬರಬೇಕು ಎಂದರು. ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡವು.
ಬಿ.ಎಂ. ಕುಂದಗೋಳ, ದಶರಥ ವಾಲಿ, ವಿಜನಗೌಡ ಪಾಟೀಲ, ತುಳಸಿದಾಸ ಖೋಡೆ, ಎ.ಜಿ. ದೇಶಪಾಂಡೆ ಇದ್ದರು. ರಾಮಚಂದ್ರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಶಿಲ್ಪಶ್ರೀ ಸ್ವಾಗತಿಸಿದರು. ವಿಜಯಕುಮಾರ ನಿರೂಪಿಸಿದರು. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ವತಿಯಿಂದ ನೃತ್ಯ ಪ್ರದರ್ಶನ ನಡೆಯಿತು.