Advertisement
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮುದೇನೂರಿನ ನವೀನ್ ಕಡಾರಿ “ನಿನಾಸಂ ತಿರುಗಾಟ’ದಲ್ಲಿ ಲೈಟಿಂಗ್ ತಂತ್ರಜ್ಞ. ಕೊಪ್ಪಳ ಜಿಲ್ಲೆ ಹಿರೇಸಿಂದೋಗಿಯ ಶಿವರಾಯಪ್ಪ ನಿರಲೂಟಿ, ಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಲ್ಪರ್. ಭಿನ್ನ ಕ್ಷೇತ್ರಗಳಲ್ಲಿದ್ದರೂ ಇವರಲ್ಲಿದ್ದ ಪರಿಸರ ಪ್ರೇಮ, ಕಾಳಜಿ ಇಬ್ಬರನ್ನೂ ಒಂದುಗೂಡಿಸಿತು. ಆಗಾಗ ಒಂದೆಡೆ ಸೇರಿ ಪ್ರಕೃತಿ, ಪರಿಸರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಜೊತೆಗೆ, ತಾವಿದ್ದ ಪರಿಸರವನ್ನು ಸ್ವತ್ಛ ಹಾಗೂ ಸ್ವಸ್ಥವಾಗಿಟ್ಟುಕೊಳ್ಳಲು ಶ್ರಮಿಸುತ್ತಿದ್ದರು. ತಾವಷ್ಟೇ ಜಾಗೃತರಾದರೆ ಸಾಲದು, ಉಳಿದವರಲ್ಲೂ ಅಲ್ಪ ಪ್ರಮಾಣದ ಅರಿವು ಮೂಡಿಸಬೇಕೆಂಬ ಆಲೋಚನೆ ಹೊಂದಿದ್ದ ಇಬ್ಬರೂ, “ಸೈಕಲ್ ಜಾಥಾ’ ಮೂಲಕ ತಮ್ಮ ಉದ್ದೇಶ ಈಡೇರಿಕೆಗೆ ಪರ್ಯಟನೆಯ ಹಾದಿ ಹಿಡಿದರು. ದಾರಿಯುದ್ದಕ್ಕೂ ಇವರಿಗಾದ ಸಿಹಿ-ಕಹಿ ಅನುಭವಗಳು, ಇವರ ಸೈಕಲ್ ಜಾಥಾ ಉದ್ದೇಶ ಕೇಳಿದ ಜನರ ಸ್ಪಂದನೆ, ಸ್ಮರಣೀಯ ಘಟನೆಗಳು, ತಮ್ಮ ಕಾರ್ಯದ ಫಲಿತಾಂಶ ಹೀಗೆ ಹಲವು ವಿಚಾರಗಳನ್ನು ನವೀನ್ ಹಾಗೂ ಶಿವರಾಯಪ್ಪ ಹಂಚಿಕೊಂಡಿದ್ದಾರೆ.
Related Articles
Advertisement
ಒಡಿಶಾದ ಕಟಕ್, ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮಸ್ಥಳ. ಅಲ್ಲಿಗೆ ತೆರಳಲು ಸೈಕಲ್ ಪ್ರಯಾಣದ ಯೋಜನೆ ಸಿದ್ಧವಾಯಿತು. ಈ ಬಾರಿ ಶಿವರಾಯಪ್ಪ ಮತ್ತು ನವೀನ್ ಜೊತೆಯಾಗಿ ಹೊರಟರು. ಶಿವರಾಯಪ್ಪ ಪರಿಸರ ಸ್ವತ್ಛತೆಯ ಬಗ್ಗೆ, ನವೀನ್ ಪರಿಸರ ಮತ್ತು ಜೀವ ವೈವಿಧ್ಯತೆ ಉಳಿಸುವ ಧ್ಯೇಯ ಇಟ್ಟುಕೊಂಡರು. ತಮ್ಮ ತಮ್ಮ ಸೈಕಲ್‌ಗಳಿಗೆ ಈ ಸಂದೇಶ ಸಾರುವ ಬೋರ್ಡ್‌ಗಳನ್ನು ಹಾಕಿದರು. ತಾಯಿ ಭುವನೇಶ್ವರಿಯ ಬಾವುಟವಿರುವ ಬಟ್ಟೆ ಧರಿಸಿದರು. 2024ರ ಫೆ. 16ರಂದು ಹಡಗಲಿಯಿಂದ ಇವರ ಯಾತ್ರೆ ಹೊರಟಿತು.
ಆತ್ಮೀಯ ಸ್ವಾಗತ, ಸನ್ಮಾನ!
ದಾರಿಯುದ್ದಕ್ಕೂ ಜನರು ಅಭೂತಪೂರ್ವ ಸ್ವಾಗತ ಕೋರಿದರು. ಸೈಕಲ್ ಯಾತ್ರೆಯ ಉದ್ದೇಶ ಕೇಳಿ “ಭೇಷ್’ ಅಂದರು. ಸತ್ಕರಿಸಿ, ಸನ್ಮಾನಿಸಿ ಬೀಳ್ಕೊಟ್ಟರು. ಕೆಲವು ಕಡೆಯಂತೂ ಹುಡುಗರು ಹಿಂಡುಹಿಂಡಾಗಿ ಹತ್ತಾರು ಕಿ.ಮೀ. ಜೊತೆಗೆ ಬಂದು ಹುರಿದುಂಬಿಸಿದರು. “ದಾರಿಯುದ್ದಕ್ಕೂ ಭಾಷೆ, ಗಡಿ ಮೀರಿ ಸಿಕ್ಕ ಸ್ಪಂದನೆ, ಪ್ರೋತ್ಸಾಹ ನಮ್ಮನ್ನು ಮೂಕವಿಸ್ಮಿತಗೊಳಿಸಿತು. ಎಲ್ಲೂ, ಯಾವ ಕ್ಷಣದಲ್ಲೂ ನಮಗೆ ಹೊಸ ಜಾಗ, ಹೊಸ ಜನ ಎಂದು ಅನಿಸಲೇ ಇಲ್ಲ. ಜನರ ಪ್ರೀತಿ, ಕಾಳಜಿಯಲ್ಲಿ ನಾವು ಮಿಂದೆದ್ದೆವು…’ ಎಂದು ಶಿವರಾಯಪ್ಪ ಹೇಳುವಾಗ ಅವರ ಹೃದಯ ತುಂಬಿಬಂದಿತ್ತು.
ದಿನದಲ್ಲಿ ಕನಿಷ್ಠ 8 ತಾಸು ಪ್ರಯಾಣ ಮಾಡುತ್ತಿದ್ದ ಇವರು, ಕ್ರಮಿಸುತ್ತಿದ್ದ ದೂರ ಸರಾಸರಿ 120-130 ಕಿ.ಮೀ., ಉಪಾಹಾರ, ಮಧ್ಯಾಹ್ನ ಊಟದ ನಂತರ ಜನ ಸಂದಣಿ ಇದ್ದ ಕಡೆಗಳಲ್ಲಿ, ಶಾಲಾ ಕಾಲೇಜುಗಳು, ಊರುಗಳಲ್ಲಿ 10-15 ನಿಮಿಷ ಪರಿಸರ ಜಾಗೃತಿ ಮಾಡುತ್ತಿದ್ದರು. “ನಮಗೆ ಭಾಷೆ ಅಡ್ಡಿ ಆಗಲಿಲ್ಲ. ಅಲ್ವಸ್ವಲ್ಪ ತೆಲುಗು ಬರುತ್ತಿತ್ತು. ಹಿಂದಿ ಕಲಿತಿದ್ದು ಉಪಯೋಗಕ್ಕೆ ಬಂತು. ನಾವು ಹೇಳಿದ್ದನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದರು’ ಎನ್ನುತ್ತಾರೆ ನವೀನ್.
ಪ್ರವಾಸಿಗರೂ ಕೈ ಜೋಡಿಸಿದರು!
12 ದಿನಗಳ ಸೈಕಲ್ ಪ್ರಯಾಣದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಲ್ಲಿ ಇವರು ಸಂಚರಿಸಿದ ಒಟ್ಟು ದೂರ 1,600 ಕಿ.ಮೀ., “ಕರ್ನಾಟಕದ ಅಬ್ಬಿಗೆರೆ, ಒಡಿಶಾದ ಪುರಿ ಸಮೀಪದ ಶಾಲಾ ಮಕ್ಕಳಿಂದ, ವಿಶಾಖಪಟ್ಟಣಂ ಬೀಚ್‌ನಲ್ಲಿನ ಪ್ರವಾಸಿಗರು, ಕಟಕ್ ಜನರಿಂದ ಸಿಕ್ಕ ಸ್ಪಂದನೆಯನ್ನು ಮರೆಯಲಾಗದು. ಬೀಚ್‌ನಲ್ಲಿ ನಮ್ಮೊಂದಿಗೆ ಪ್ರವಾಸಿಗರೂ ಸೇರಿ ಕಸ ತೆಗೆದಿದ್ದು ನಮ್ಮ ಜಾಗೃತಿ ಜಾಥಾಕ್ಕೆ ಸಿಕ್ಕ ಗೆಲುವು…’ ಎನ್ನುತ್ತ ಶಿವರಾಯಪ್ಪ ಭಾವುಕರಾದರು. “ನಮ್ಮ ಈ ಅಭಿಯಾನ ಸಂಪೂರ್ಣ ಯಶಸ್ವಿಯಾಯಿತು ಎನ್ನಲಾರೆ. ಜನರಲ್ಲಿ ಪರಿಸರದ ಪ್ರಜ್ಞೆ ಇನ್ನಷ್ಟು ಮೂಡಬೇಕಿದೆ. ನಮ್ಮ ಪ್ರಯತ್ನದಿಂದ ನಾಲ್ಕೇ ನಾಲ್ಕು ಜನ ಬದಲಾದರೂ ಸಾಕು…’ ಎಂಬುದು ನವೀನ್ ಅವರ ಅಭಿಪ್ರಾಯ.
ಆತ್ಮವಿಶ್ವಾಸ ಹೆಚ್ಚಾಯಿತು…
ಇವರ ಅಸಲಿ ಉದ್ದೇಶ ಪರಿಸರ ಜಾಗೃತಿ. ದಾರಿಯುದ್ದಕ್ಕೂ ಹೊಸ ಹೊಸ ಜನರ, ಸಾಹಸಿಗರ, ಸಮಾನ ಮನಸ್ಕರ, ಆಯಾ ಭಾಗದ ಆಹಾರ, ಸಂಸ್ಕೃತಿ, ಜೀವನ ರೀತಿ-ನೀತಿಯ ಪರಿಚಯ ಆಗಿತ್ತು. ಕೋನಾರ್ಕ್‌ನ ಶಿವ ದೇವಸ್ಥಾನ, ಪುರಿ ಜಗನ್ನಾಥ ದೇವಾಲಯ ಸೇರಿದಂತೆ ಅನೇಕ ಕ್ಷೇತ್ರಗಳನ್ನು, ಬೀಚ್‌ಗಳನ್ನು ನೋಡುವ ಅವಕಾಶ ದೊರಕಿತು. “ಈ ಪಯಣದಲ್ಲಿ ಸಹೃದಯಿಗಳು, ಸಮಾನ ಮನಸ್ಕರು ಸಂಪರ್ಕಕ್ಕೆ ಬಂದರು. ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮಲ್ಲಿನ ಆತ್ಮವಿಶ್ವಾಸ ಮತ್ತಷ್ಟು ಗಟ್ಟಿ ಆಯಿತು…’ ಎನ್ನುತ್ತಾರೆ ನವೀನ್.
ಪೂರ್ವ ತಯಾರಿ ಇರಲಿ…
ಸೈಕ್ಲಿಂಗ್ ಮೂಲಕ ಜಾಗೃತಿ ಜಾಥಾ, ಟೂರ್ ಮಾಡಬೇಕೆಂಬ ಮನಸ್ಸಿದ್ದರೆ ಮುಂಜಾಗ್ರತೆ ಅಗತ್ಯ. ಮೊದಲು ಸಂಕಲ್ಪ, ಮನೋಬಲ ದೃಢವಾಗಿರಲಿ. ಸೈಕಲ್ ಸವಾರಿ ಹೋಗುವ ಮುನ್ನ ಕನಿಷ್ಠ 8-10 ದಿನ ಸುದೀರ್ಘ ಪಯಣದ ಸೈಕ್ಲಿಂಗ್ ಅಭ್ಯಾಸ ಮಾಡಿ. ಟೂಲ್ ಕಿಟ್, ಪಂಚರ್ ಕಿಟ್, ಸೈಕಲ್‌ಗೆ ಹೆಡ್‌ಲೈಟ್ ವ್ಯವಸ್ಥೆ ಕಡ್ಡಾಯ. ಕಾಲಕ್ಕೆ ತಕ್ಕಂತೆ ಉಡುಪು ಧರಿಸಿ. ಆತ್ಮರಕ್ಷಣೆಗೆ ಚಾಕು ಜೊತೆಗಿರಲಿ. ಹೆಚ್ಚು ಕ್ಯಾಶ್ ಇಟ್ಟುಕೊಳ್ಳುವುದು ಬೇಡ. ಹೋಗುವ ಮಾರ್ಗ, ತಂಗುವ ಸ್ಥಳದ ಬಗ್ಗೆ ಮೊದಲೇ ಯೋಜನೆ ಮಾಡಿಕೊಳ್ಳಿ. ಮಾರ್ಗದ ಸಾಧಕ ಬಾಧಕಗಳನ್ನು ತಿಳಿದುಕೊಳ್ಳಿ. ಹೋಗುವ ಪ್ರದೇಶದ ಮಾಹಿತಿಯುಳ್ಳ ಹಿರಿಯರನ್ನು ಸಂಪರ್ಕಿಸಿ. ಆಗ ಪಯಣ ಸರಾಗ.
-ಸ್ವರೂಪಾನಂದ ಕೊಟ್ಟೂರು