Advertisement

ಸ್ವಚ್ಛ, ಸುಂದರ ಭವಿಷ್ಯಕ್ಕಾಗಿ ಬೇಕಿದೆ ಪರಿಸರ ಶಿಕ್ಷಣ

12:43 PM Aug 29, 2018 | |

ಸುತ್ತಲೂ ಬೆಟ್ಟ ಗುಡ್ಡ, ನಡುವೆ ಹರಿಯುವ ಸಣ್ಣ ತೊರೆ ಇದರ ಮಧ್ಯೆ ಕುಳಿತು ಕೇಳುವ ಪಾಠ… ಈ ಕಲ್ಪನೆ ಎಷ್ಟು ಸೊಗಸಾಗಿದೆ ಅಲ್ವ. ಇಂತಹ ಒಂದು ಶಿಕ್ಷಣ ನಮ್ಮ ಶಾಲೆ, ಕಾಲೇಜುಗಳಲ್ಲೂ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಎಲ್ಲರೂ ಒಂದಲ್ಲ ಒಂದು ಬಾರಿ ಅಂದು ಕೊಂಡಿರಬೇಕು. ವಿಶ್ವದ ಹಲವೆಡೆ ಇಂತಹ ಶಿಕ್ಷಣ ನೀಡುವ ವ್ಯವಸ್ಥೆ ಈಗಾಗಲೇ ಜಾರಿಯಿದೆ. ನಮ್ಮಲ್ಲೂ ಪ್ರಾಯೋಗಿಕವಾಗಿ ಅಪರೂಪಕ್ಕೊಮ್ಮೆ ನಾವಿದ್ದನ್ನು ಮಾಡುತ್ತಿದ್ದೇವೆ. ಆದರೆ ಸಂಪೂರ್ಣವಾಗಿ ಇನ್ನೂ ಇದು ಜಾರಿಯಾಗಿಲ್ಲ. ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಒಂದು ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕಿದೆ.

Advertisement

ಪಠ್ಯ ಚಟುವಟಿಕೆಯಲ್ಲಿ ರ್ಯಾಂಕ್ ಗಳಿಸಿ ಉತ್ತಮ ಉದ್ಯೋಗ ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿರುವ ಇಂದಿನ ವಿದ್ಯಾರ್ಥಿಗಳಿಗೆ ಸುತ್ತಮುತ್ತ ನಡೆಯುವ ಆಗುಹೋಗುಗಳ ಬಗ್ಗೆ ಅರಿವಿರುವುದಿಲ್ಲ. ಇದನ್ನು ತಿಳಿಸಿಕೊಡುವ ಗೋಜಿಗೆ ಹೆತ್ತವರೂ ಹೋಗುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಗೆ ಲೋಕಜ್ಞಾನ, ಪರಿಸರ ಜ್ಞಾನದ ಆವಶ್ಯಕತೆ ಇದ್ದರೂ ಅದನ್ನು ಬೋಧಿಸಲು ಸೂಕ್ತ ವೇದಿಕೆ ಎಲ್ಲೂ ಇಲ್ಲದಿರುವುದರಿಂದ ಮಕ್ಕಳು ಪರಿಸರ, ಪ್ರಾಣಿ, ಪಕ್ಷಿ ಇವೆಲ್ಲದರಿಂದ ದೂರ ಸಾಗಿ ಟಿವಿ, ಫೋನ್‌ಗಳಿಗೆ ಅಂಟಿಕೊಳ್ಳುತ್ತಿದ್ದಾರೆ.

ಅದರೊಂದಿಗೆ ಪ್ರಸ್ತುತ ಕಾಲಘಟ್ಟದ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಲ್ಲಿ ಜೀವನ ಶಿಕ್ಷಣದ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತೇವೆ. ಆದರೆ ನಾವು ತಿನ್ನುವ ಆಹಾರಗಳು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಪಠ್ಯದಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೇರ್ಪಡೆಗೊಳಿಸಲಾಗಿಲ್ಲ. ಇದರಿಂದ ಮಕ್ಕಳಿಗೆ ಪರಿಸರದ ಕುರಿತು ಸ್ವಲ್ಪ ಕಾಳಜಿ, ಕುತೂಹಲ ಹುಟ್ಟುವುದಿಲ್ಲ. ಪರಿಸರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇಂತಹ ಅನಿವಾರ್ಯ ವಿಷಯದ ಪಾಠವೇ ಇಂದಿನ ವಿದ್ಯಾರ್ಥಿಗಳಿಗೆ ದೊರೆಯದಿರುವುದು ಅಚ್ಚರಿಯ ಸಂಗತಿ.

ಪರಿಸರ ಪಾಠ
ಪರಿಸರದ ಬಗ್ಗೆ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಲಿ- ನಲಿ ಕಲಿಕಾ ಪದ್ಧತಿಗಳನ್ನು ಅಳವಡಿಸಿ ಪ್ರಾಥಮಿಕ ಶಾಲೆಗಳಲ್ಲಿ ಪರಿಸರ ಶಿಕ್ಷಣದ ಬುನಾದಿ ಹಾಕಬೇಕು. ಪರಿಸರ ಹಾಗೂ ವನ್ಯಜೀವಿ ವಿಜ್ಞಾನ ಕುರಿತ ಕಾಳಜಿ ಮೂಡಿಸುವ ಪಠ್ಯ ನಿರ್ಮಾಣವಾಗಬೇಕು. ಈ ಮೂಲಕ ಮಾತ್ರವೇ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರ ನಾಶದ ಬಗ್ಗೆ ಎಚ್ಚರಿಕೆ ಮೂಡಲು ಸಾಧ್ಯ.

ಪರಿಸರ ಸಂಘ
ಪರಿಸರದ ಬಗ್ಗೆ ಕಾಳಜಿ ಇರುವ ಕೆಲವು ವಿದ್ಯಾಸಂಸ್ಥೆಗಳು ಕಾಲೇಜಿನಲ್ಲಿ ಪರಿಸರ ಸಂಘಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಶಾಲೆ ಆವರಣಗಳಲ್ಲಿ ಹೂವಿನ ಗಿಡ, ತರಕಾರಿ ಗಿಡಗಳನ್ನು ನೆಟ್ಟು ಅದನ್ನು ವಿದ್ಯಾರ್ಥಿಗಳಿಂದ ಲೇ ಪೋಷಿಸುವ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ. ಇಂತಹ ಚಟುವಟಿಕೆಗಳು ಸರಕಾರಿ ಶಾಲೆ ಹಾಗೂ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಆದರೆ ನಗರದ ಪ್ರದೇಶಗಳಲ್ಲಿ ಕಲಿಯುತ್ತಿರುವ ಮಕ್ಕಳು ಇವೆಲ್ಲದರಿಂದ ವಂಚಿತರಾಗಿರುವುದು ಮಾತ್ರ ಸತ್ಯ.

Advertisement

ಪರಿಸರದ ಮಧ್ಯೆ ಪಾಠ
ನಾಲ್ಕು ಗೋಡೆಗಳ ಹೊರಗಡೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಅವರಿಗೂ ಪರಿಸರದ ಬಗ್ಗೆ ಆಸಕ್ತಿ ಮೂಡಲು ಸಾಧ್ಯವಿದೆ. ಕೆಲವು ಶಿಕ್ಷಕರು ಇಂತಹ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಪಠ್ಯದ ಒತ್ತಡದಿಂದ ಮುಕ್ತಿ ಪಡೆದುಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಿದೆ ಎಂಬುದು ಹಲವು ಪರಿಸರವಾದಿಗಳ ವಾದ.

ಕಾಡಿನೊಳಗೊಂದು ಸುತ್ತು
ಪ್ರಸ್ತುತ ಟ್ರಕ್ಕಿಂಗ್‌ ಹೋಗುವುದು ಫ್ಯಾಷನ್‌ ಆಗಿ ಬದಲಾಗಿದೆ. ಬಹುತೇಕ ಯುವಜನತೆ ಟೀಮ್‌ ಮಾಡಿಕೊಂಡು ಟ್ರಕ್ಕಿಂಗ್‌ ಹೆಸರಲ್ಲಿ ಕಾಡು ಗುಡ್ಡಗಳಲ್ಲಿ ಸುತ್ತುತ್ತಾರೆ. ಈ ಚಟುವಟಿಕೆಯನ್ನು ಶಾಲಾ, ಕಾಲೇಜು ದಿನಗಳಿಂದ  ಡುವುದು ಉತ್ತಮ. ಯಾಕೆಂದರೆ ಮಕ್ಕಳಿಗೆ ಪರಿಸರ ಪಾಠದೊಂದಿಗೆ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಮಲೆನಾಡು, ಪಶ್ಚಿಮ ಘಟ್ಟಗಳಿಗೆ ತಿಂಗಳಿಗೊಮ್ಮೆಯಾದರೂ ಟ್ರಕ್ಕಿಂಗ್‌ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಮಾಹಿತಿ, ನೀರಿನ ಮೂಲಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಇದು ಮಕ್ಕಳಿಗೆ ಪರಿಸರದ ಬಗೆಗೆ ಆಳವಾದ ಅಧ್ಯಯನಕ್ಕೆ ಸಹಕರಿಸುತ್ತದೆ. 

ಪ್ರಯೋಜನವೇನು?
· ಪರಿಸರ ವಿಷಯಗಳ ಕುರಿತು ಜಾಗೃತಿ, ಜ್ಞಾನವನ್ನು ಮೂಡಿಸುತ್ತದೆ.

· ಕಷ್ಟಕರವಾದ ವಿಷಯವನ್ನು ಸುಲಭವಾಗಿ ಹೇಳಿಕೊಡಬಹುದು.

· ಸಮಸ್ಯೆ ಬಗೆಹರಿಸುವುದು, ನಿರ್ಧಾರ ಕೈಗೊಳ್ಳುವ ಕೌಶಲ ವನ್ನು ಹೆಚ್ಚಿಸಬಹುದು.

· ಪ್ರತಿಯೊಬ್ಬರ ಅಭಿಪ್ರಾಯ ಪಡೆಯಲು ಇದು ಪೂರಕ ವೇದಿಕೆಯಾಗುವುದು.

· ಪರಿಸರದ ಕುರಿತಾದ ಪ್ರತಿಯೊಂದು ಮಾಹಿತಿಯು ಸಿಗುತ್ತದೆ.

ಪ್ರಜ್ಞಾ  ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next