Advertisement

ಯುಪಿಸಿಎಲ್‌ನಿಂದಾದ ಪರಿಸರ ಹಾನಿ; ಪರಿಸರ ತಜ್ಞರ ತಂಡದಿಂದ ಪರಿಶೀಲನೆ

07:42 AM Dec 09, 2020 | mahesh |

ಪಡುಬಿದ್ರಿ: ಯುಪಿಸಿಎಲ್‌ನಿಂದ ಆಗಿರುವ ಪರಿಸರ ಹಾನಿಯನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲು ನೇಮಿಸಲಾಗಿರುವ ಕೇಂದ್ರೀಯ ಪರಿಸರ ತಜ್ಞರ ತಂಡವು ಮಂಗಳವಾರ ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿ ಭಾಗಗಳಿಗೆ ತೆರಳಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿತು.

Advertisement

ನಂದಿಕೂರು ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಸುರು ಪೀಠದ ಮುಂದೆ 2018ರಲ್ಲಿ ದಾಖಲಿಸಿರುವ ದಾವೆಯನ್ವಯ ತಂಡವನ್ನು ಕಳುಹಿಸಲಾಗಿದೆ. ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಯ ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ತಿರುಮೂರ್ತಿ, ಬೆಂಗಳೂರಿನ ಪ್ರೊ| ಡಾ| ಶ್ರೀಕಾಂತ್‌ ಹಾಗೂ ಐಎಸ್‌ಇಸಿ ಬೆಂಗಳೂರಿನ ಡಾ| ಕೃಷ್ಣರಾಜ್‌ ತಂಡದಲ್ಲಿದ್ದರು. ಡಾ| ಕೃಷ್ಣರಾಜ್‌ ಮಾತನಾಡಿ, ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳನ್ನು ಈಗಾಗಲೇ ಕಲೆ ಹಾಕಿದ್ದೇವೆ. ಪರಿಸರ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಜ. 31ರೊಳಗಾಗಿ ಕೇಂದ್ರೀಯ ಹಸುರು ಪೀಠಕ್ಕೆ ವರದಿ ನೀಡಬೇಕಿದೆ. ಮತ್ತಷ್ಟು ಅಂಕಿ
ಅಂಶಗಳ ಕ್ರೋಡೀಕರಣವು ಆಗಬೇಕಿರುವುದರಿಂದ ಮುಂದೂಡಿಕೆಯಾಗಲೂಬಹುದು ಎಂದು ಹೇಳಿದರು.

ದಂಡ ವಸೂಲಿ
ಈ ಹಿಂದೆ ಪರಿಸರ ಕಾನೂನು ಉಲ್ಲಂಘನೆಗಾಗಿ 5 ಕೋಟಿ ರೂ. ಗಳ ದಂಡವನ್ನು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಯುಪಿಸಿಎಲ್‌ ಪಾವತಿಸಿದೆ. ಸದ್ಯ ಯೋಜನೆಯಿಂದಾಗಿ ಜನತೆಗೆ 177.8 ಕೋಟಿ ರೂ. ನಷ್ಟ ಆಗಿರಬಹುದೆಂದು ನಂದಿಕೂರು ಜನಜಾಗೃತಿ ಸಮಿತಿ ದಾವೆಯಲ್ಲಿ ತಿಳಿಸಿದ್ದು, ಆದೇಶವೂ ಸಮಿತಿಯ ಪರವಾಗಿಯೇ ಬಂದಿದೆ. ತಂಡವು ಪರಿಶೀಲಿಸಿ ಅಂತಿಮ ವರದಿ ನೀಡಲಿದೆ ಎಂದು ತಿಳಿಸಿದರು.

ಸ್ಥಳೀಯರಿಂದ ಮಾಹಿತಿ
ಉಳ್ಳೂರಿನ ಜಗನ್ನಾಥ ಮೂಲ್ಯ ಅವರು ತನ್ನ ಅನಾರೋಗ್ಯ, ವೃದ್ಧ ತಾಯಿಯನ್ನು ರಸ್ತೆ ಸೌಕರ್ಯವಿಲ್ಲದಿರುವುದರಿಂದ ಆಸ್ಪತ್ರೆಗೆ ಒಯ್ಯಲು ಪಡುತ್ತಿರುವ ಬವಣೆ, ಕೃಷಿ ನಾಶ ಮುಂತಾದ ತೊಂದರೆಗಳನ್ನು ವಿವರಿಸಿದರು. ಎಲ್ಲೂರು ಗ್ರಾಮದ ಜಯಂತ್‌ ರಾವ್‌, ಗಣೇಶ್‌ ರಾವ್‌ ಮನೆ ಪರಿಸರ, ಕೃಷಿ ಭೂಮಿ, ಕುಡಿಯುವ ನೀರು ಹಾಗೂ ಜಾನುವಾರುಗಳ ಆರೋಗ್ಯದ ಮೇಲುಂಟಾಗಿರುವ ಹಾನಿಗಳನ್ನು ತಂಡವು ಪರಿಶೀಲಿಸಿತು. ಮುದರಂಗಡಿ ಪ್ರಾ.ಆ. ಕೇಂದ್ರಕ್ಕೆ ತೆರಳಿ 2007ರ ಬಳಿಕ ಜನತೆಯ ಆರೋಗ್ಯ ಮೇಲಾಗಿರುವ ಹಾನಿಯ ಪ್ರಮಾಣವನ್ನು ದಾಖಲಿಸಿಕೊಂಡಿತು. ಎಲ್ಲೂರು ಭಂಡಾರಮನೆ ಮಾಧವ ಶೆಟ್ಟಿ ಮತ್ತು ಹರೀಶ್‌ ಶೆಟ್ಟಿ ಯೋಜನೆಯಿಂದಾಗಿ ಸುಮಾರು 10 ಕಿ.ಮೀ. ಸುತ್ತಮುತ್ತಲ ಪರಿಸರಕ್ಕೆ ಆಗಿರುವ ಹಾನಿಯ ಬಗ್ಗೆ ವಿವರಿಸಿದರು.

ತಕ್ಕ ಪರಿಹಾರ ಪಾವತಿಸದಿದ್ದರೆ ಮತ್ತೆ ಹೋರಾಟ
ನಂದಿಕೂರು ಜನಜಾಗೃತಿ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ದುಬಾೖ ಅವರೊಂದಿಗೆ ವೀಡಿಯೋ ಸಂಭಾಷಣೆಯನ್ನೂ ತಜ್ಞರ ತಂಡವು ನಡೆಸಿತು. ಪರಿಸರ ಹಾನಿಗೆ ತಕ್ಕುದಾದ ಪರಿಹಾರ ಧನ ರೈತರಿಗೆ ಲಭಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದು ಬಾಲಕೃಷ್ಣ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next