Advertisement

Hoopoe Bird: ಚಂದಿರನಷ್ಟೇ ಚೆಲುವಿನ ಚಂದ್ರಮುಕುಟ!

01:54 PM Oct 08, 2023 | Team Udayavani |

ಜೂನ್‌ ತಿಂಗಳ ಮೊದಲ ಮಳೆಗೆ ನೆಲವನ್ನು ಉಳುಮೆ ಮಾಡುವಂತೆ, ಹುಲುಸಾಗಿ ಬೆಳೆದಿದ್ದ ಹುಲ್ಲುಗಾವಲಿನಲ್ಲಿ ತನ್ನ ಚೂಪಾದ ಕೊಕ್ಕಿನಿಂದ ನೆಲ ಅಗೆಯುತ್ತಾ ಕೀಟಗಳನ್ನು ಮುಕ್ಕಿ ಪುಟಕ್ಕನೆ ತಲೆ ಕುಣಿಸಿ ಓಡಾಡುತ್ತಿದ್ದ ಚಂದ್ರ ಮುಕುಟ ಹಕ್ಕಿ ಕ್ಯಾಮರಾಕ್ಕೆ ಪೋಜು ಕೊಡದೆ ಸತಾಯಿಸುತ್ತಿತ್ತು. ಮೊಣಕೈ ಊರಿ ಅದರ ಹಿಂದೆ ಹಾವಿನಂತೆ ತೆವಳಿ, ಆಗಲೇ ದೇಹ ಮುಕ್ಕಾಲು ಭಾಗ ದಣಿದಿತ್ತು. ಇನ್ನು ತುಸುವೇ ಉಳಿದಿದ್ದ ಶಕ್ತಿಯನ್ನು ಹೀಗೆ ವೃಥಾ ವ್ಯಯಿಸಿದರೆ ಪ್ರಯೋಜನವಿಲ್ಲವೆನಿಸಿ ಅದರ ಲಕ್ಷ್ಯವೆಲ್ಲಾ ಭೋಜನದ ಮೇಲಿದ್ದಾಗ ಅದು ಮತ್ತೆ ಮತ್ತೆ ಓಡಾಡುತ್ತಿದ್ದ ಜಾಗ ನೋಡಿಕೊಂಡು ಒಂದು ಕಡೆ ಕ್ಯಾಮೆರಾದ ಜೊತೆ ಅಡ್ಡಲಾದೆ. ಪ್ರಕೃತಿ­ ಯಲ್ಲಿ ನಾವು ಹೊರಗಿನವರಂತೆ ಇರುವುದು, ನಡೆದುಕೊಳ್ಳುವುದು ಇದಕ್ಕೆಲ್ಲಾ ಕಾರಣ. ಸುಮ್ಮನೆ ತಮ್ಮ ಪಾಡಿಗಿರುವ ಪಕ್ಷಿಗಳತ್ತ ಕಲ್ಲು ಎಸೆಯುವುದೋ, ಸದ್ದು ಮಾಡಿ ಓಡಿಸುವುದೋ ಮಾಡಿ ಖುಷಿಪಡುವ ಮನುಷ್ಯನ ವಿಲಕ್ಷಣ ವರ್ತನೆಗಳಿಂದ, ಮನುಷ್ಯರನ್ನು ನೋಡಿದರೆ ಸಾಕು; ಅಲ್ಲಿಂದ ಕಾಲ್ಕಿàಳುವ ಪದ್ದತಿಯನ್ನು ಹಲವು ಪಕ್ಷಿಗಳು ರೂಢಿಸಿಕೊಂಡಿವೆ.

Advertisement

ತೆಪ್ಪಗಿದ್ದರೆ ಒಳ್ಳೆಯದು…

ದಿನನಿತ್ಯವೂ ಮನುಷ್ಯರ ಹತ್ತಿರ ಬದುಕು ಸಾಗಿಸಬೇಕಾದ ಅನಿವಾರ್ಯವಿರುವ ಕೆಲವು ಪಕ್ಷಿಗಳು ಮಾತ್ರ ಮನುಷ್ಯರಿಗೆ ಕ್ಯಾರೇ ಎನ್ನದೆ ಜೀವಿಸುವ ನಡವಳಿಕೆ ಬೆಳೆಸಿಕೊಂಡಿವೆಯಾ­ದರೂ, ಅವುಗಳಿಗೆ ಇರುಸುಮುರಿಸಾಗುವಷ್ಟು ಹತ್ತಿರ ಹೋದರೆ ಪುರ್ರನೆ ಹಾರಿಹೋಗುವಷ್ಟು ಅಂತರವನ್ನು ಕಾಯ್ದುಕೊಂಡಿವೆ. ಇದಕ್ಕೆ ಪರಿಹಾರವೆಂಬಂತೆ ಸುಮ್ಮನೆ ಪ್ರಕೃತಿಯ ಭಾಗವೇ ಆಗಿ ಅವುಗಳಷ್ಟೇ ಎತ್ತರ ಇರುವಂತೆ ನೆಲಕ್ಕೆ ಒರಗಿ, ಒಂಚೂರೂ ಸದ್ದುಮಾಡದೆ ಅಲ್ಲಾಡದಂತೆ ಇದ್ದು ಬಿಟ್ಟರೆ ಸರಿ. ಪಕ್ಷಿಗಳು ನಮ್ಮ ಇರುವಿಕೆಯನ್ನೇ ಅಲ್ಲಗಳೆದಂತೆ ಸಹಜವಾಗಿ ವಿಹರಿಸುವುದನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.

ಪರಿಶ್ರಮಕ್ಕೆ ಫ‌ಲ ಸಿಕ್ಕಿತು

ತಾಳ್ಮೆಯಿಂದ ಕಾಯುವ ತಪವು, ತಪಸ್ಸಿಗೆ ಒಲಿದು ದರ್ಶನ ಭಾಗ್ಯ ಕರುಣಿಸುವ ವರವು, ಕಾಯಿಸಿ, ಕಾಡಿಸಿ, ತಣಿಸುವ ಪ್ರಾಣಿ-ಪಕ್ಷಿ- ಕೀಟಗಳ ಲೋಕದ ಛಾಯಾಗ್ರಹಣಕ್ಕೆಂದು ಮತ್ತೆ ಮತ್ತೆ ತಹತಹಿಸುವಂತೆ ಮಾಡುತ್ತದೆ. ಹೀಗೆ ಎರಡು-ಮೂರು ದಿನ ಅವುಗಳೊಂದಿಗೆ ಕಳೆದದ್ದರಿಂದ ಕೆಲವು ಚಂದದ ಪಟಗಳನ್ನು ಕ್ಲಿಕ್ಲಿಸಲು ಸಾಧ್ಯವಾಯಿತು. ಮರಳಿನ ಮೇಲೆ ಉರುಳಾಡುತ್ತಾ ಇವು ಬಿಸಿಲು ಕಾಯಿಸುವುದು ಮತ್ತು ಕಷ್ಟಪಟ್ಟು ಆಹಾರ ಹೆಕ್ಕಿದಾಗ ಹತ್ತಿರದಲ್ಲಾದರೂ ಕಾಜಾಣ ಪಕ್ಷಿ ಇದ್ದರೆ, ಇದರ ಬಾಯಿಂದ ಆಹಾರ ಕಿತ್ತುಕೊಂಡು ಹಾರುವ ರೋಚಕ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಸಾಧ್ಯವಾಗುವ ಕ್ಷಣಗಳಿಗಾಗಿ ಇನ್ನೂ ಕಾಯುತ್ತಲೇ ಇದ್ದೇನೆ.

Advertisement

ತಲೆಯ ಮೇಲುಂಟು ಬೀಸಣಿಕೆತಲೆಯ ಮೇಲೆ

ಚಂದ್ರನಂತೆ ತೂಗುವ ಬೀಸಣಿಕೆ ಆಕಾರದ ಶಿಖೆಯ ಕಾರಣಕ್ಕೆ ಈ ಸುಂದರ ಹಕ್ಕಿಗೆ ಚಂದ್ರಮುಕುಟ ಎಂದೂ, ಕೂಗುವ ಧಾಟಿಯ ಆಧಾರದ ಮೇಲೆ ಇಂಗ್ಲಿಷಿನಲ್ಲಿ ಹೂಪಿ ಎಂದೂ ಕರೆಯುತ್ತಾರೆ. ಎಚ್ಚರದ ವಾತಾವರಣದಲ್ಲಿ, ಪ್ರಣಯ ಕಾಲದಲ್ಲಿ ಮತ್ತು ಬೇಟೆಯ ಸಮಯದಲ್ಲಿ ಇದು ತನ್ನ ಕಿರೀಟವನ್ನು ಗಾಳಿಯಲ್ಲಿ ಬಿಚ್ಚಿ ಆಡಿಸುವುದನ್ನು ನೋಡಲು ಕಣ್ಣಿಗೂ, ಕ್ಯಾಮರಾಗೂ ಹಬ್ಬ. ಮಧ್ಯಮ ಗಾತ್ರದ ಈ ಹಕ್ಕಿ ಹೆಚ್ಚಾಗಿ ಹುಲ್ಲುಗಾವಲು, ಗುಡ್ಡದ ಪ್ರದೇಶ, ಬಯಲು ಪ್ರದೇಶ ಹಾಗೂ ತೋಟ­ಗಳಲ್ಲಿ ಕಂಡುಬರುತ್ತವೆ. ಹೆಣ್ಣು-ಗಂಡಿನಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ನೋಡಲು ಒಂದೇ ರೀತಿಯಾಗಿರುತ್ತವೆ.

ಸ್ವಂತ ಗೂಡು ಕಟ್ಟುವುದಿಲ್ಲ

ಫೆಬ್ರುವರಿಯಿಂದ ಮೇ ತಿಂಗಳವರೆಗೆ ಮರಿ ಮಾಡುವ ಚಂದ್ರಮುಕುಟ ಪಕ್ಷಿಗಳು ಸ್ವಂತ ಗೂಡು ಕಟ್ಟುವುದಿಲ್ಲ. ಈಗಾಗಲೇ ಇರುವ ಮರದ ಪೊಟರೆಗಳು, ವಾಸಿಸಲು ಅನುಕೂಲವಾಗುವಂತಿರುವ ಹೆಂಚಿನ ಮನೆಗಳು ಅಥವಾ ಕೊಳವೆಯಂಥ ರಂದ್ರ ಹೊಂದಿರುವ ಗೋಡೆ ಮನೆಗಳನ್ನು ಆಯ್ದುಕೊಂಡು ಹುಲ್ಲು, ಕಸಕಡ್ಡಿಗಳಂಥ ಕಚಾrವಸ್ತುಗಳನ್ನಿಟ್ಟು ಮೆತ್ತಗಿನ ಗೂಡು ಮಾಡಿಕೊಳ್ಳುತ್ತವೆ. ಬಿಳಿಬಣ್ಣದ ನಾಲ್ಕಾರು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆ ಇಟ್ಟ ನಂತರ ಮರಿ ಆಗಲು ಕನಿಷ್ಠ ಇಪ್ಪತ್ತು ದಿನಗಳಾದರೂ ಬೇಕು, ನಂತರ ರೆಕ್ಕೆ ಬಲಿತು ಹಾರಲು ಸಮಯ ಹಿಡಿಯುತ್ತದೆ. ಈ ಅವಧಿ ತಂದೆ-ತಾಯಿ ಇಬ್ಬರಿಗೂ ಸಂಕಷ್ಟದ ಕಾಲ. ಏಕೆಂದರೆ ಗೂಡು ಉಳಿಸಿಕೊಳ್ಳಲು ಬೇರೆ ಪಕ್ಷಿಗಳ ಜೊತೆ ಹೋರಾಟ ಮಾಡುತ್ತಲೇ ಇರಬೇಕಾಗುತ್ತದೆ. ಜೊತೆಗೆ ಮಾನವನ ಹಸ್ತಕ್ಷೇಪವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಗುವುದುಂಟು. ಇಂಥ ಸಮಯದಲ್ಲಿ ಆದ ತೀವ್ರ ಗಾಯಗಳು ಬದುಕಿನುದ್ದಕ್ಕೂ ಉಳಿಯಲೂಬಹುದು. ಏನೇ ಆದರೂ ಈ ಕಷ್ಟ-ಸುಖದ ಹಾದಿಯನ್ನು ಪಾಲಕರಾದ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸವೆಸಲೇಬೇಕು.

ಇಲ್ಲಿಯ ಚಿತ್ರಗಳು ಧಾರವಾಡದ ಕೆಲಗೇರಿ ಕೆರೆಯ ಆಸುಪಾಸಿನ ಪ್ರದೇಶದಲ್ಲಿ  ತೆಗೆದಂಥವು.

ಮರಕುಟಿಕವೇ ಬೇರೆ..!:

ಬಣ್ಣ ಮತ್ತು ಗಾತ್ರದ ವ್ಯತ್ಯಾಸದಿಂದ ಈ ಪಕ್ಷಿಗಳು ಮೂರು ರೀತಿಯ ಪ್ರಭೇದಗಳಲ್ಲಿ ಕಾಣಸಿಗುತ್ತವೆ. ತಲೆಯ ಮೇಲೆ ಆಡುವ ರಚನೆಯಿಂದ ಹೆಚ್ಚಿನ ಜನ ಇದನ್ನು ಮರಕುಟಿಕ ಎಂದು ತಪ್ಪಾಗಿ ಭಾವಿಸುವುದುಂಟು. ಮರಕುಟಿಕ ಮರದ ತೊಗಟೆಗಳಲ್ಲಿ ಆಹಾರ ಹುಡುಕುವ ಹಕ್ಕಿ. ಇವೆರಡಕ್ಕೂ ಬಹಳ ವ್ಯತ್ಯಾಸಗಳನ್ನು ಗುರುತಿಸಬಹುದು. ಚಂದ್ರಮುಕುಟ, ನೆಲದ ಮೇಲ್ಮೆ„ ಮೇಲೆ ಹುಳು-ಹುಪ್ಪಟೆಯಂಥ ಆಹಾರ ಹೆಕ್ಕುವುದರಿಂದ ಇದಕ್ಕೆ ನೆಲಕುಟುಕ ಎನ್ನುವ ಹೆಸರೂ ಉಂಟು.

ಚಿತ್ರ-ಲೇಖನ:

ಕೃಷ್ಣ ದೇವಾಂಗಮಠ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next