Advertisement
ಬಿಸಿಲಿನ ಝಳದಿಂದಾಗಿ ಆಟವಾಡಲು ಸಾಧ್ಯವಾಗದೆ ಮನೆಗೆ ಹಿಂತಿರುಗಿದ ಹನಿ ಎಚ್. ಆರ್. ಎಂಬ ಹುಡುಗಿ ತಾಯಿ ಬಳಿ ಅವಲತ್ತುಕೊಳ್ಳುತ್ತಾಳೆ. ಮರ ಗಿಡ ಕಡಿಯುವುದರಿಂದ ಪರಿಸರ ನಾಶಗೊಂಡು ಬಿಸಿಲು ಹೆಚ್ಚುತ್ತಿದೆ ಎಂದು ತಾಯಿ ಹೇಳಿದಾಗ ಅದಕ್ಕೆ ಪರಿಹಾರ ಹುಡುಕಿ ಹೊರಟ ಹನಿ, ತನ್ನ ಸ್ನೇಹಿತರ ಬಳಿ ಚರ್ಚಿಸುತ್ತಾಳೆ. ಕೊನೆಗೂ ಐವರು ಚಿಣ್ಣರ ತಂಡ ಕಟ್ಟಿಕೊಂಡು ಎರಡು ವರ್ಷಗಳ ಹಿಂದೆ ತಮ್ಮದೇ ಮನೆಗಳ ಮುಖಾಂತರ ಆರಂಭಿಸಿದ ಈ ಅಭಿಯಾನ ಈಗ ಜಪ್ಪಿನಮೊಗರು ಪ್ರದೇಶದ 150 ಮನೆಗಳವರೆಗೆ ತಲುಪಿದೆ. ಈ ತಂಡದಲ್ಲೀಗ ಮೂವತ್ತು ಮಕ್ಕಳಿದ್ದಾರೆ. ಒಟ್ಟು ಐದು ಪ್ರಾಜೆಕ್ಟ್ಗಳನ್ನು ಈಗಾಗಲೇ ಮುಕ್ತಾಯಗೊಳಿಸಿದೆ.
ಈ ನಡುವೆ ಕೆಲ ತಿಂಗಳ ಹಿಂದೆ ಇದೇ ಗ್ರೀನ್ ವಾರಿಯರ್ ತಂಡವು, ಸಾರ್ವಜನಿಕರು ಬಳಸಿ ಬಿಸಾಡಿದ ಧರಿಸಲು ಯೋಗ್ಯವಾದ ವಸ್ತುಗಳನ್ನು ಆಯ್ದು ತಂದು ಶುಚಿಗೊಳಿಸಿ ಬಡವರಿಗೆ ನೀಡುವ ಮೂಲಕ ಮಾದರಿಯಾಗಿದೆ. ಪರಿಣಾಮ ಬೈಕಂಪಾಡಿಯ ಕಡು ಬಡವರು ವಾಸಿಸುವ ಪ್ರದೇಶವೊಂದಕ್ಕೆ ತೆರಳಿ ಅವರಿಗೆ ತಾವು ಸಂಗ್ರಹಿಸಿದ ಧರಿಸಲು ಯೋಗ್ಯವಾದ ವಸ್ತುಗಳನ್ನು ವಿತರಿಸಿದ್ದಾರೆ.
Related Articles
ವಿಶೇಷವೆಂದರೆ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಬೇಕೆಂಬ ನಿಟ್ಟಿನಲ್ಲಿ ತಮಗೆ ಹೆತ್ತವರು ನೀಡಿದ ಪಾಕೆಟ್ ಮನಿಯನ್ನೇ ಉಳಿಸಿಕೊಂಡು ಕಳೆದ ವರ್ಷ ದೀಪಾವಳಿಗೆ ಮನೆ ಮನೆಗೆ ತೆರಳಿ ಸುಮಾರು ಅರುವತ್ತು ಮಣ್ಣಿನ ದೀಪ ವಿತರಿಸಿದ್ದಾರೆ. ಜತೆಗೆ ಪಟಾಕಿ ಸಿಡಿಸುವುದರಿಂದ ಪ್ರಕೃತಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಅರಿವು ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ. ಮಕ್ಕಳ ಪರಿಸರ ಪ್ರಜ್ಞೆಗೆ ಮನಸೋತ ಜಪ್ಪಿನಮೊಗರು ಪ್ರದೇಶದ ಹಲವು ಮನೆಮಂದಿ ಪರಿಸರಸ್ನೇಹಿ ದೀಪಾವಳಿ ಆಚರಿಸಿರುವುದು ವಿಶೇಷ.
Advertisement
ಸಾರ್ಥಕ ಕೆಲಸಅದೆಷ್ಟೋ ಮಂದಿ ಹೊಸ ಬಟ್ಟೆ, ಶೂ, ಫ್ಯಾನ್ಸಿ ಆಭರಣಗಳನ್ನೆಲ್ಲ ಖರೀದಿಸಿ ಒಂದೆರಡು ಬಾರಿ ಬಳಸಿ ಬಿಸಾಡುತ್ತಾರೆ. ಆದರೆ ತೀರಾ ಬಡ ವರ್ಗದವರಿಗೆ ಅಂತಹವುಗಳನ್ನು ಬಳಸಬೇಕೆಂಬ ಆಸೆ ಇದ್ದರೂ, ಖರೀದಿಸಲು ಹಣವಿರುವುದಿಲ್ಲ. ಶಾಲೆಗೆ ಹೋಗುವಾಗ ಅಥವಾ ಹೊರಗಡೆ ಹೋದಾಗ ಧರಿಸಲು ಯೋಗ್ಯವಾದ ಬಟ್ಟೆ ಅಥವಾ ಇತರ ವಸ್ತುಗಳು ಕಂಡರೆ ಅದನ್ನು ಆಯ್ದು ತಂದು ಸಂಗ್ರಹಿಸಿಡುತ್ತೇವೆ. ಅದನ್ನು ಶುಚಿಗೊಳಿಸಿ ಅರ್ಹರಿಗೆ ನೀಡುತ್ತೇವೆ. ಈ ಕೆಲಸದಿಂದ ಖುಷಿಯಾಗುತ್ತಿದೆ.
– ಹನಿ ಎಚ್. ಆರ್. ಹೆಮ್ಮೆಯ ವಿಚಾರ
ಮಕ್ಕಳ ಕೆಲಸಕ್ಕೆ ಎಲ್ಲ ಹೆತ್ತವರು ಪ್ರೋತ್ಸಾಹ ನೀಡುತ್ತಿದ್ದಾರೆ. ಬಡವರಿಗೆ ಸಹಾಯ ಮಾಡುವ ಗುಣ ಅವರಿಗೆ ಒಲಿದದ್ದು, ಪ್ರತಿ ತಂದೆ ತಾಯಿಯೂ ಹೆಮ್ಮೆ ಪಡುವ ವಿಚಾರವೇ. ಅವರ ಪರಿಸರ ಪ್ರಜ್ಞೆ ಮೆಚ್ಚುವಂತಹದ್ದು.
– ಪವಿತ್ರಾ ರತನ್,
ಹನಿ ಅವರ ತಾಯಿ