Advertisement

ಪರಿಸರ ಸ್ವಚ್ಚತೆ ಹೊಣೆ ಎಲ್ಲರದ್ದು

11:57 AM Feb 01, 2022 | Team Udayavani |

ಶಹಾಬಾದ: ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರದ್ದಾಗಿದ್ದು, ಹೆಚ್ಚು ಗಿಡ-ಮರ ಬೆಳೆಸುವಲ್ಲಿ ಸಾರ್ವಜನಿಕರು ಮುಂದಾಗಬೇಕೆಂದು ಜೆಎಂಎಫ್‌ಸಿ ನ್ಯಾಯಾಧೀಶ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.

Advertisement

ರವಿವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಚಿತ್ತಾಪುರ ನ್ಯಾಯವಾದಿಗಳ ಸಂಘ, ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಮತ್ತು ನೀರು ಬಿಟ್ಟರೆ ಕೆಲವು ದಿನಗಳ ವರೆಗೆ ಬದುಕಬಹುದು. ಆದರೆ ಗಾಳಿಯಿಲ್ಲದೇ ಬದುಕುವುದು ಅಸಾಧ್ಯ. ಆ ಗಾಳಿ ನೀಡುವ ಗಿಡಮರ ಬೆಳೆಸುವಲ್ಲಿ ನಿರಾಸಕ್ತಿ ತೋರುತ್ತಿದ್ದೇವೆ. ಕೋವಿಡ್‌ -19 ಸಂದರ್ಭದಲ್ಲಿ ಕೃತಕ ಆಮ್ಲಜನಕ ಪಡೆಯಲು ಹರಸಾಹಸ ಪಡೆಯಬೇಕಾದ ಘಳಿಗೆ ಎದುರಾಗಿತ್ತು ಎಂಬುದನ್ನು ಮನನ ಮಾಡಿಕೊಳ್ಳಬೇಕು ಎಂದರು.

ಜಗತ್ತಿನ ಎಲ್ಲ ಜೀವಿಗಳಿಗೂ ಆಮ್ಲಜನಕ ನೀಡುವ ಗಿಡ-ಮರಗಳನ್ನು ಬೆಳೆಸುವ ಮೂಲಕ ನಗರವನ್ನು ಹಸಿರಾಗಿಸಬೇಕಿದೆ. ಅಲ್ಲದೇ ನಗರಸಭೆ ಪೌರಕಾರ್ಮಿಕರು ಬಂದಾಗ ಅವರಿಗೆ ಹಸಿಕಸ-ಒಣಕಸ ವಿಂಗಡಿಸಿ ನೀಡಿದರೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪಿಐ ಸಂತೋಷ ಡಿ. ಹಳ್ಳೂರ್‌ ಮಾತನಾಡಿ, ಸಾರ್ವಜನಿಕರು ತಮ್ಮ ಜವಾಬ್ದಾರಿ ಮರೆತು ಕಸ ಎಲ್ಲೆಂದರಲ್ಲಿ ಎಸೆದು ನಗರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ನಗರಸಭೆ ಪೌರಾಯುಕ್ತ ಡಾ| ಕೆ. ಗುರಲಿಂಗಪ್ಪ ಮಾತನಾಡಿ, ಸ್ವಚ್ಛತೆ ಎನ್ನುವುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ನಗರದ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಬಡಾವಣೆಗೆ ಬಂದಾಗ ಗೌರವದಿಂದ ಕಾಣಿ ಎಂದು ಹೇಳಿದರು.

ನ್ಯಾಯವಾದಿ ರಘುವೀರಸಿಂಗ್‌ ಠಾಕೂರ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಸಿಂಧೆ ವೇದಿಕೆ ಮೇಲಿದ್ದರು. ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ನ್ಯಾಯವಾದಿಗಳಾದ ಬಾಬುರಾವ್‌ ಕೋಬಾಳ, ರಮೇಶ ರಾಠೊಡ, ಅತುಲ್‌ ಯಲಶೆಟ್ಟಿ, ಉಮೇಶ ಪೋಚಟ್ಟಿ, ನಾಗೇಶ ಧನ್ನೇಕರ್‌, ತಿಮ್ಮಯ್ಯ ಮಾನೆ, ಶರಣು ಭಂಡಾರಿ, ಎಇಇ ಮುಜಾಮಿಲ್‌ ಅಲಂ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಶರಣು, ರಘುನಾಥ ನರಸಾಳೆ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಅನಿಲಕುಮಾರ ಹೊನಗುಂಟಿ, ಪ್ರಕಾಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next