ಬಾಗಲಕೋಟೆ: ಹಸಿರಾಗಿಡಿ, ಹಸನಾಗಿಡಿ, ಸುಂದರವಾಗಿಡಿ….ನಿವೃತ್ತ ಪ್ರಾಧ್ಯಾಪಕರು, ಸಮಾನಮನಸ್ಕ ಸ್ನೇಹಿತರು ಕೂಡಿಕೊಂಡು ರಚಿಸಿದ ನಿಸರ್ಗ ಬಳಗದ ಧ್ಯೇಯವಾಕ್ಯವಿದು. ಬಾದಾಮಿಯ ವೀರಪುಲಿಕೇಶಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಸ್.ಎಚ್. ವಾಸಣದ ಹಾಗೂ ಸುಮಾರು 50ಕ್ಕೂ ಹೆಚ್ಚು ಜನ ಸಮಾನಮನಸ್ಕ ಸ್ನೇಹಿತರು ಕೂಡಿಕೊಂಡು 2017ರಲ್ಲಿ ನಿಸರ್ಗ ಬಳಗ ರಚಿಸಿಕೊಂಡಿದ್ದಾರೆ. ಈ ಬಳಗವನ್ನು ನಿಯಮಾನುಸಾರ ನೋಂದಣಿ ಮಾಡಿಕೊಂಡು, ಇಡೀ ಬಾದಾಮಿ ಪಟ್ಟಣ, ಪ್ರವಾಸಿ ತಾಣ, ದೇವಸ್ಥಾನ, ಶಾಲೆ-ಕಾಲೇಜು ಆವರಣ ಹೀಗೆ ಎಲ್ಲೆಲ್ಲಿ ಸ್ಥಳಾವಕಾಶ ಸಿಗುತ್ತದೆಯೋ ಅಲ್ಲೆಲ್ಲ ಸಸಿ ನೆಟ್ಟು ಪೋಷಣೆ ಮಾಡುವುದೇ ಈ ಬಳಗದ ಗುರಿ.
ಕಳೆದ 2017ರಿಂದ ಆರಂಭಗೊಂಡ ಈ ನಿಸರ್ಗ ಬಳಗದ ಪರಿಸರ ಕಾಳಜಿ, ಸಂರಕ್ಷಣೆ ಹಾಗೂ ಪೋಷಣೆಯಿಂದ ಇಡೀ ಬಾದಾಮಿಯಲ್ಲಿ ಒಟ್ಟು 11 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಎಸ್. ಎಚ್. ವಾಸನದ ಅವರು, ಜೀವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಪರಿಸರ ಸಂರಕ್ಷಣೆ, ಬೆಳೆಸುವ ಕುರಿತು ಮಕ್ಕಳಿಗೆ ಪಾಠ ಮಾಡುತ್ತಿದ್ದ ಅವರು, ನಿವೃತ್ತಿ ಜೀವನವನ್ನು ಅದೇ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ಅವರೊಂದಿಗೆ ಸಾಮಾಜಿಕ ಕಾಳಜಿಯುಳ್ಳ ಹಲವಾರು ಜನ ಕೈ ಜೋಡಿಸಿದ್ದಾರೆ.
ಅವರೆಲ್ಲ ಪ್ರತಿ ರವಿವಾರ ಬಾದಾಮಿಯಲ್ಲಿ ನಿಸರ್ಗ ಬಳಗದಿಂದ ನೆಡಲಾದ ಸಸಿಗಳ ಪಾಲನೆ ಮಾಡುತ್ತಾರೆ. ಜತೆಗೆ ಹೊಸ ಸಸಿಗಳನ್ನು ನೆಟ್ಟು ಪರಿಸರ ಬೆಳೆಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ನಿಸರ್ಗ ಬಳಗಕ್ಕೆ ಬಾದಾಮಿಗೆ ಸರ್ಕಾರದಿಂದ ಸಾಲು ಮರದ ತಿಮ್ಮಕ್ಕ ಟೀ ಪಾರ್ಕ್ ಕೂಡ ಮಂಜೂರು ಮಾಡಿಸಿದ ಹೆಗ್ಗಳಿಕೆ ಇದೆ. ಅಲ್ಲದೇ ಸಸಿಗಳ ನೆಡಲು ಇವರು ಅನುಸರಿಸಿದ ರೀತಿ ಕೂಡ ಇಡೀ ಬಾದಾಮಿ ಜನ ಮೆಚ್ಚುವಂತಹದ್ದಿದೆ. ಬಾದಾಮಿಯಲ್ಲಿ ಸಿಸಿ ರಸ್ತೆ ಮಾಡಿದ್ದು, ಆ ರಸ್ತೆಯನ್ನು ಬೇಕಾಬಿಟ್ಟಿ ಅಗೆದು ಸಸಿ ನೆಟ್ಟಿಲ್ಲ. ಬದಲಾಗಿ, ಹೊಸ ತಂತ್ರಜ್ಞಾನದ ಮೂಲಕ ಸಸಿ ನೆಡುವ ಜಾಗವನ್ನಷ್ಟೇ ಡ್ರಿಲ್ಲಿಂಗ್ ಮೂಲಕ ಕಟ್ ಮಾಡಿ, ಆ ಜಾಗದಲ್ಲಿ ಸಸಿಗಳ ನೆಡಲಾಗಿದೆ.
ಬಾದಾಮಿಯಲ್ಲಿ ಸಾಮಾಜಿಕ ಕಾಳಜಿಯುಳ್ಳ ಸ್ನೇಹಿತರೆಲ್ಲ ಕೂಡಿಕೊಂಡು ನಿಸರ್ಗ ಬಳಗ ರಚಿಸಿದ್ದೇವೆ. ಆ ಮೂಲಕ ಶಾಲೆ, ದೇವಸ್ಥಾನ, ರಸ್ತೆ ಬದಿ ಸಹಿತ ಅವಕಾಶ ಸಿಕ್ಕಲೆಲ್ಲ ಸುಮಾರು 11 ಸಾವಿರದಷ್ಟು ಸಸಿ ನೆಟ್ಟಿದ್ದೇವೆ. ಮುಖ್ಯವಾಗಿ ಪರಿಸರ ರಕ್ಷಣೆ, ಪೋಷಣೆಯ ಜತೆಗೆ ಜೈವಿಕ ಇಂಧನ ಉತ್ಪಾದನೆಗೆ ಬಳಕೆಯಾಗುವ ಹೊಂಗೆ ಮರಗಳನ್ನೇ ಹೆಚ್ಚು ನೆಡಲಾಗಿದೆ. ಅವು ಈಗ ಬೆಳೆದು ನಿಂತಿದ್ದು, ಇಡೀ ಬಾದಾಮಿ, ಹಚ್ಚ ಹಸಿರಾಗಿ ಕಾಣುತ್ತಿದೆ.
ಎಸ್.ಎಚ್. ವಾಸನದ, ನಿವೃತ್ತ ಪ್ರಾಧ್ಯಾಪಕ, ನಿಗರ್ಸ ಬಳಗದ ಪ್ರಮುಖರು