Advertisement

ಕೇಂದ್ರ ಪರಿಸರ ಸಚಿವ ಅನಿಲ್‌ ದವೆ ವಿಧಿವಶ; ಗಣ್ಯರ ತೀವ್ರ ಸಂತಾಪ

03:45 AM May 19, 2017 | |

ನವದೆಹಲಿ: ಕೇಂದ್ರ ಸರ್ಕಾರದ ಪರಿಸರ ಸಚಿವ, ಮಧ್ಯಪ್ರದೇಶದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಅನಿಲ್‌ ಮಾಧವ ದವೆ ಗುರುವಾರ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಳಗ್ಗೆ ಉಸಿರಾಟ ತೊಂದರೆ ಅನುಭವಿಸಿದ ಅವರನ್ನು ಕೂಡಲೇ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫ‌ಲಕಾರಿಯಾಗದೇ ಕೊನೆಯುಸಿರೆಳೆದರು.

Advertisement

ದವೆ ಅವರನ್ನು ಗುರುವಾರ ಬೆಳಗ್ಗೆ 8.50ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. ಅವರ ಹೃದಯ ಸ್ತಂಭನವಾಗಿದ್ದು, ಉಳಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಯಿತು. ಆದರೆ ಫ‌ಲಕಾರಿಯಾಗಲಿಲ್ಲ. 9.45ಕ್ಕೆ ಅವರು ಮೃತಪಟ್ಟಿದ್ದಾಗಿ ಏಮ್ಸ್‌ ವೈದ್ಯರು ಮಾಹಿತಿ ನೀಡಿದ್ದಾರೆ. ಬಳಿಕ ದವೆ ಅವರ ಪಾರ್ಥಿವ ಶರೀರವನ್ನು ಸಫ‌ªರ್‌ಜಂಗ್‌ನ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಬಳಿಕ ಅಂತ್ಯಕ್ರಿಯೆಗಾಗಿ ಅವರ ಸಹೋದರ ವಾಸವಿರುವ ಇಂದೋರ್‌ಗೆ  ಕಳಿಸಲಾಗಿದೆ.

ದವೆ ಅವರು ಆರೆಸ್ಸೆಸ್‌ನ ಕಟ್ಟಾ ಕಾರ್ಯಕರ್ತರಾಗಿದ್ದು, ಅವಿವಾಹಿತರಾಗಿದ್ದರು. ದವೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. “ದವೆ ಅವರ ನಿಧನ ಆಘಾತವನ್ನುಂಟುಮಾಡಿದೆ. ಅವರು ನನ್ನ ಗೆಳೆಯ ಮತ್ತು ಸಹೋದ್ಯೋಗಿ. ದವೆ ಅವರ ನಿಧನದಿಂದ ವೈಯಕ್ತಿಕವಾಗಿ ತೀವ್ರ ನಷ್ಟವಾಗಿದೆ. ಅವರ ನಿಧನಕ್ಕೆ ತೀವ್ರ ಸಂತಾಪಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ಬುಧವಾರ ರಾತ್ರಿವರೆಗೂ ವಿವಿಧ ಸಭೆಯಲ್ಲಿ ಪ್ರಧಾನಿ ಅವರೊಂದಿಗೆ ದವೆ ಅವರೂ ಭಾಗಿಯಾಗಿದ್ದರು.

ದವೆ ಅವರ ನಿಧನ ಸುದ್ದಿ ಕೇಳಿ ಇಡೀ ಕೇಂದ್ರ ಸಂಪುಟ ಆಘಾತಕ್ಕೊಳಗಾಗಿದ್ದು, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ನರೇಂದ್ರ ಸಿಂಗ್‌ ತೋಮರ್‌, ಪಿಯೂಷ್‌ ಗೋಯೆಲ್‌, ಧರ್ಮೇಂದ್ರ ಪ್ರಧಾನ್‌, ತನ್ವರ್‌ ಚಾಂದ್‌ ಗೆಹೊÉàಟ್‌, ಹರ್ಷ ವರ್ಧನ್‌, ಬಿಜೆಪಿಯ ಇತರ ನಾಯಕರು ಏಮ್ಸ್‌ನತ್ತ ಧಾವಿಸಿದ್ದರು.

2009ರಿಂದ ರಾಜ್ಯಸಭಾ ಸದಸ್ಯರಾಗಿರುವ ದವೆ ಅವರು, ಪರಿಸರ ಸಚಿವರಾಗಿ ಸ್ವತಂತ್ರ ಖಾತೆಯನ್ನು ನಿಭಾಯಿಸುತ್ತಿದ್ದಾರೆ. 2003ರಲ್ಲಿ ಮಧ್ಯಪ್ರದೇಶದ ಚುನಾವಣೆ ವೇಳೆ ದಿಗ್ವಿಜಯ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಅನ್ನು ಮಣಿಸಲು ಬಿಜೆಪಿಯ ಮುಖ್ಯ ತಂತ್ರಗಾರರಾಗಿ ದವೆ ಕೆಲಸ ಮಾಡಿದ್ದರು.

Advertisement

ಗಣ್ಯರ ಸಂತಾಪ
ದವೆ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಶೋಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಅರ್ಪಿಸಿದರು.

ರಾಷ್ಟ್ರಧ್ವಜ ಅರ್ಧಕ್ಕೆ:
ದವೆ ಅವರ ನಿಧನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳು, ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ ಗೌರವ ಸೂಚಿಸಲಾಯಿತು.

ಹರ್ಷವರ್ಧನ್‌ಗೆ ಹೆಚ್ಚುವರಿ ಹೊಣೆ:
ದವೆ ಅವರ ನಿಧನ ಹಿನ್ನೆಲೆಯಲ್ಲಿ ಪರಿಸರ ಖಾತೆಯ ಹೊಣೆಯನ್ನು ಕೇಂದ್ರ ವಿಜ್ಞಾನ ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ದವೆ ಅವರ ಬಳಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಖಾತೆಗಳಿದ್ದವು. ಹರ್ಷವರ್ಧನ್‌ ಅವರಿಗೆ ಹೊಣೆ ವಹಿಸುತ್ತಿರುವುದಾಗಿ ರಾಷ್ಟ್ರಪತಿ ಭವನದ ಪ್ರಕಟಣೆ ಹೇಳಿದೆ.

ನದಿ ಸಂರಕ್ಷಣಾ ತಜ್ಞ  ದವೆ
ನದಿ ಸಂರಕ್ಷಣೆ, ತಾಪಮಾನ ಏರಿಕೆ ಕುರಿತ ಸಂಸತ್‌ ಸಮಿತಿ, ಪರಿಸರ ಸಂರಕ್ಷಣೆ ಕುರಿತ ಆಳ ಜ್ಞಾನ ಹೊಂದಿದ್ದವರು ದವೆ. ಇದೇ ಕಾರಣಕ್ಕೆ ಅವರನ್ನು ಪರಿಸರ ಸಚಿವರನ್ನಾಗಿ ಪ್ರಧಾನಿ ಮೋದಿ ತಮ್ಮ ಸಂಪುಟಕ್ಕೆ ನಿಯುಕ್ತಿಗೊಳಿಸಿದ್ದರು. ದವೆ ಅವರು ಈ ಮೊದಲೇ ತಮ್ಮ “ನರ್ಮದಾ ಸಮಗ್ರ’ ಹೆಸರಿನ ಸರ್ಕಾರೇತರ ಸಂಘಟನೆ ಮೂಲಕ ನದಿ ಸಂರಕ್ಷಣೆಗೆ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಸೈಕಲ್‌ನಲ್ಲಿ ಸಂಸತ್‌ ಕಲಾಪಕ್ಕೆ ಹಾಜರಾಗಿ ಅವರು ಸುದ್ದಿಯಾಗುತ್ತಿದ್ದುದೂ ಉಂಟು!

ಎನ್‌ಸಿಸಿ ಏರ್‌ವಿಂಗ್‌ ಕೆಡೆಟ್‌ ಕೂಡ ಆಗಿದ್ದ ದವೆ ಅವರು ಖಾಸಗಿ ಪೈಲಟ್‌ ಪರವಾನಗಿ ಹೊಂದಿದ್ದರು. ಇದು ಅವರ ಹವ್ಯಾಸವೂ ಆಗಿತ್ತು. ನರ್ಮದಾ ನದಿ ತೀರದಲ್ಲಿ 18 ಗಂಟೆಗಳ ವಿಮಾನ ಹಾರಾಟದ ಅನುಭವವನ್ನೂ ಪಡೆದುಕೊಂಡಿದ್ದರು. ಹಲವು ಕೃತಿಗಳನ್ನೂ ರಚನೆ ಮಾಡಿದ್ದರು.

1956 ಜು.6ರಂದು ಮಧ್ಯಪ್ರದೇಶದ ಉಜ್ಜೆ„ನಿಯ ಬರ್‍ನಾಗರ್‌ನಲ್ಲಿ ಮಾಧವ ದವೆ, ಪುಷ್ಪಾ ದಂಪತಿಗಳಿಗೆ ಜನಿಸಿದ್ದ ಅವರು ಬಿಜೆಪಿ ತಂತ್ರಗಾರರಾಗಿ ಪ್ರಸಿದ್ಧರು. ತೀರ ತಳಮಟ್ಟದಿಂದ ಸಂಘಟನೆ ಕಟ್ಟುವುದಕ್ಕೆ ಅವರು ಹೆಸರಾಗಿದ್ದರು. ತಮ್ಮ ಕಾಲೇಜು ಅವಧಿಯಲ್ಲೇ ಆರೆಸ್ಸೆಸ್‌ನ ಪ್ರಚಾರಕರಾಗಿ ಕೆಲಸ ಮಾಡಿದ್ದರು. ಮಧ್ಯಪ್ರದೇಶ ಬಿಜೆಪಿಯ ಮುಖ್ಯ ಚುನಾವಣಾ ತಂತ್ರಗಾರರಾಗಿದ್ದ ಅವರು, 2003ರಿಂದ 2014ರವರೆಗೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸಿದ್ದರು. ಬೂತ್‌ ಮಟ್ಟದಲ್ಲೂ ಪರಿಣಾಮಕಾರಿಯಾಗಿ ಪಕ್ಷಕಟ್ಟುವ ಚಾಣಾಕ್ಷ ತಂತ್ರಗಾರಿಕೆ ಅವರದ್ದಾಗಿತ್ತು.

“ನನ್ನ ಸ್ಮಾರಕ ನಿರ್ಮಿಸಬೇಡಿ, ಮರಗಳನ್ನು ನೆಡಿ’
ಮಾಜಿ ಕೇಂದ್ರ ಸಚಿವ ದವೆ ಅವರೂ ತಮ್ಮ ಉಯಿಲು ಪತ್ರ ಬರೆದಿದ್ದಾರೆ. ಇದೂ ವಿಶಿಷ್ಟವಾಗಿದ್ದು, ಅವರ ಪರಿಸರ ಸಂರಕ್ಷಣೆ ಕಾಳಜಿಯನ್ನು ಬಿಂಬಿಸಿದ್ದು, ಮಾದರಿಯಾಗಿದ್ದಾರೆ. 2012 ಜು.23ರಂದೇ ಅವರು ಈ ಉಯಿಲನ್ನು ಬರೆದಿದ್ದರು. ಅದರಲ್ಲಿ ಹೀಗಿದೆ.

– ನನ್ನ ಅಂತ್ಯಕ್ರಿಯೆ ಮಧ್ಯಪ್ರದೇಶದ ಬಂದರ್ಬನ್‌ನಲ್ಲಿ ನಡೆಸಬೇಕು (ಇದು ನರ್ಮದೆಯ ದಂಡೆಯಾಗಿದ್ದು ಪ್ರತಿವರ್ಷ ಅಂತಾರಾಷ್ಟ್ರೀಯ ನದಿ ಉತ್ಸವ ನಡೆಯುತ್ತದೆ)
– ಅಂತ್ಯಕ್ರಿಯೆಯನ್ನು ಸಂಪ್ರದಾಯಕ್ಕೆ ಪೂರಕವಾಗಿ ನಡೆಸಿದರೆ ಸಾಕು, ಆದರೆ ಯಾವುದೇ ಆಡಂಬರಗಳು ಬೇಡ.
– ನನ್ನ ಹೆಸರಲ್ಲಿ ಸ್ಮಾರಕಗಳನ್ನಾಗಲಿ, ಯಾವುದೇ ಪ್ರಶಸ್ತಿಗಳನ್ನಾಗಲಿ ನೀಡಬಾರದು.
– ಜನರಿಗೆ ನನ್ನನ್ನು ನೆನಪಿಸಿಕೊಳ್ಳಬೇಕು, ಗೌರವಿಸಬೇಕು ಎಂದಿದ್ದರೆ, ಸಸಿಗಳನ್ನು ನೆಡಿ. ನದಿ ಸಂರಕ್ಷಣೆಗೆ ಕೆಲಸ ಮಾಡಿ. ಇದ್ಯಾವುದರಲ್ಲೂ ನನ್ನ ಹೆಸರು ಬಳಸುವುದು ಬೇಡ.

Advertisement

Udayavani is now on Telegram. Click here to join our channel and stay updated with the latest news.

Next