Advertisement

G-20 ಶೃಂಗದಲ್ಲಿ ಪರಿಸರ ಸ್ನೇಹಿ ನಿರ್ಣಯಗಳ ನಿರೀಕ್ಷೆ

10:15 PM Sep 07, 2023 | Team Udayavani |

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆ.9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗಸಭೆಯತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಜಾಗತಿಕ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಸಹಮತದ ನಿರ್ಧಾರವನ್ನು ಕೈಗೊಂಡಾರು ಎಂಬ ಆಶಾವಾದದಿಂದ ಇಡೀ ವಿಶ್ವದ ಜನರು ನವದೆಹಲಿ ಶೃಂಗದತ್ತ ಬಲು ನಿರೀಕ್ಷೆಯ ದೃಷ್ಟಿ ಬೀರಿದ್ದಾರೆ.

Advertisement

ಹವಾಮಾನ ಬದಲಾವಣೆ ಮತ್ತು ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಹಿಂದೆ ಜಾಗತಿಕ ಮಟ್ಟದಲ್ಲಿ ಕೈಗೊಳ್ಳಲಾದ ಬಹುತೇಕ ನಿರ್ಣಯಗಳು ನಿರೀಕ್ಷಿತ ಗುರಿ ತಲುಪುವಲ್ಲಿ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಭೆಯಲ್ಲಾದರೂ ಈ ವಿಷಯಗಳ ಕುರಿತಂತೆ ನಾಯಕರು ಒಮ್ಮತದ ನಿರ್ಣಯ ಕೈಗೊಂಡು ಅದರ ಅನುಷ್ಠಾನದ ವಿಚಾರದಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಬದ್ಧತೆಯನ್ನು ಪ್ರದರ್ಶಿಸಬೇಕೆಂಬ ಆಶಯ ಜಾಗತಿಕ ಸಮುದಾಯದ್ದಾಗಿದೆ.

ವಿಶ್ವದ ಜಿಡಿಪಿಯಲ್ಲಿ ಶೇ. 85ರಷ್ಟು ಪಾಲು ಹೊಂದಿರುವ ಜಿ20 ರಾಷ್ಟ್ರಗಳು ಇಂಗಾಲದ ಹೊರಸೂಸುವಿಕೆಯಲ್ಲೂ ಶೇ. 80ರಷ್ಟು ಪಾಲನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಜಿ20 ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಪರ್ಯಾಪ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆ ಕಳೆದ ನಾಲ್ಕೈದು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಈ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕಾರ್ಯೋನ್ಮುಖವಾಗಿವೆಯಾದರೂ ಇವು ಆ ದೇಶಗಳ ಬೇಡಿಕೆಯನ್ನು ಪೂರೈಸುವಲ್ಲಿ ವಿಫ‌ಲವಾಗಿರುವುದರಿಂದ ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಹಾಕಲು ಇವುಗಳಿಂದ ಸಾಧ್ಯವಾಗಿಲ್ಲ. ಇನ್ನು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡಲು ಅಭಿವೃದ್ಧಿ ಹೊಂದಿದ ದೇಶಗಳು ಈ ರಾಷ್ಟ್ರಗಳಿಗೆ ಅಗತ್ಯ ಪ್ರಮಾಣದ ಆರ್ಥಿಕ ನೆರವನ್ನು ನೀಡಬೇಕೆಂಬ ನಿರ್ಧಾರವನ್ನು ಈ ಹಿಂದೆ ಕೈಗೊಳ್ಳಲಾಗಿತ್ತಾದರೂ ಇದು ನಿರ್ಣಯಕ್ಕೆ ಮಾತ್ರ ಸೀಮಿತವಾಗಿ ಉಳಿದಿದೆ. ಇನ್ನೂ ಅಚ್ಚರಿಯ ವಿಷಯ ಎಂದರೆ ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳಿಗಿಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಇಂಗಾಲ ಹೊರಸೂಸುವಿಕೆ ಪ್ರಮಾಣ ಅಧಿಕವಾಗಿರುವುದು.

ಇವೆಲ್ಲದರ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗದಲ್ಲಿ ತಾಪಮಾನ ಹೆಚ್ಚಳಕ್ಕೆ ಕಡಿವಾಣ ಮತ್ತು ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ದಿಸೆಯಲ್ಲಿ ಜಿ20 ರಾಷ್ಟ್ರಗಳ ನಾಯಕರು ಒಮ್ಮತದಿಂದ ಕಾರ್ಯಸಾಧುವಾದ ನಿರ್ಧಾರವನ್ನು ಕೈಗೊಳ್ಳಬೇಕು. ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದರೂ ನವೀಕರಿಸಬಹುದಾದ ಇಂಧನ ಮೂಲಗಳು, ಪಳೆಯುಳಿಕೆ ಇಂಧನಗಳ ಬದಲಾಗಿ ಪರ್ಯಾಯ ಇಂಧನಗಳ ಸಂಶೋಧನೆ, ಉತ್ಪಾದನೆ ಮತ್ತದರ ಬಳಕೆಗೆ ಗರಿಷ್ಠ ಉತ್ತೇಜನ ನೀಡುತ್ತಿರುವ ಭಾರತದ ನೇತೃತ್ವದಲ್ಲಿ ಕೈಗೊಳ್ಳಲಾಗುವ ಇಂತಹ ಒಂದು ಮಹತ್ವಪೂರ್ಣ ನಿರ್ಣಯ, ಮತ್ತದರ ಅನುಷ್ಠಾನಕ್ಕೆ ಜಾಗತಿಕ ಸಮುದಾಯದಿಂದ ಬದ್ಧತೆ ವ್ಯಕ್ತವಾದೀತು ಎಂಬ ಹವಾಮಾನ ಮತ್ತು ಪರಿಸರ ತಜ್ಞರ ಆಶಾಭಾವ ಸಾಕಾರಗೊಳ್ಳಲಿ.

Advertisement

Udayavani is now on Telegram. Click here to join our channel and stay updated with the latest news.

Next