Advertisement

ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಕಡಲ ಜೀವಿಗಳ ಸಂರಕ್ಷಣ ಕೇಂದ್ರ

02:12 AM Jun 05, 2022 | Team Udayavani |

ಇಂದು ಜೂ. 5, ವಿಶ್ವ ಪರಿಸರ ದಿನ. ಈ ಹಿನ್ನೆಲೆಯಲ್ಲಿ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ಶನಿವಾರ ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ನೆಟಾಲ್ಕರ್‌, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ ಅವರೊಂದಿಗೆ ಸಂಪಾದಕೀಯ ಬಳಗ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವರದಿಗಾರರು ಸಂವಾದ ನಡೆಸಿದರು. ಕರಾವಳಿ ಕರ್ನಾಟಕದಲ್ಲಿ ಸಾಗರ ಜೀವ ವೈವಿಧ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಸಮುದ್ರ ಜೀವಿಗಳ ಸಂರಕ್ಷಣ ಕೇಂದ್ರವು ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಎಂಬ ವಿಚಾರವನ್ನು ಅವರು ಹೊರಗೆಡಹಿದರು. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ.

Advertisement

ಕರಾವಳಿ ಕರ್ನಾಟಕದಲ್ಲಿ ಸಾಗರ ಜೀವ ವೈವಿಧ್ಯತೆ ಸಂರಕ್ಷಣೆ ನಿಟ್ಟಿನಲ್ಲಿ “ಕಡಲ ಜೀವಿಗಳ ಸಂರಕ್ಷಣ ಕೇಂದ್ರ’ವನ್ನು (ಮರೀನ್‌ ರೆಸ್ಕೂé ಸೆಂಟರ್‌) ಮಂಗಳೂರಿನಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದು ಕೇಂದ್ರ ಸರಕಾರದ ಮಹತ್ವದ ಯೋಜ ನೆಯಾಗಿದ್ದು, ನ್ಯಾಶನಲ್‌ ಡಾಲ್ಫಿನ್‌ ಪ್ರಾಜೆಕ್ಟ್ ಅಡಿಯಲ್ಲಿ ಕಾರ್ಯ ರೂಪ ಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಕುಂದಾಪುರ, ಹೊನ್ನಾವರ, ಕಾರವಾರದಲ್ಲಿ ಸೆಟಲೈಟ್‌ ಸೆಂಟರ್‌ ತೆರೆಯಲಾಗುವುದು. 13 ಕೋ.ರೂ. ವೆಚ್ಚದಲ್ಲಿ ಡಿಪಿಆರ್‌ ಅನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಡಾಲ್ಫಿ ನ್‌, ತಿಮಿಂಗಿ ಲ, ಕಡಲಾಮೆ ಮೊದಲಾದ ಅಪರೂಪದ ಸಮುದ್ರ ಜೀವ ವೈವಿಧ್ಯತೆಯನ್ನು ಉಳಿಸುವುದು ನ್ಯಾಶನಲ್‌ ಡಾಲ್ಫಿನ್‌ ಪ್ರಾಜೆಕ್ಟ್ ನ ಆಶಯವಾಗಿದೆ.

ಯಾಂತ್ರಿಕೃತ ಮೀನುಗಾರಿಕೆ ವೇಳೆ ಬಲೆಗಳಿಗೆ ಈ ರೀತಿಯ ಅಪರೂಪದ ಮೀನುಗಳು ಸಿಲುಕಿದಾಗ ಗಾಯಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆಗಾಲದ ವೇಳೆ ತಿಮಿಂಗಿ ಲ, ಡಾಲ್ಫಿನ್‌ನಂತಹ ಜೀವಿಗಳು ಮತ್ತು ಅಪರೂಪದ ಕಡಲ ಜೀವ ವೈವಿಧ್ಯಗಳು ಗಾಯಗೊಂಡು ದಡಕ್ಕೆ ಬಂದು ಬಿದ್ದಿರುತ್ತವೆ. ಇವುಗಳ ರಕ್ಷಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಪುನಃ ಸಮುದ್ರಕ್ಕೆ ಬಿಡುವ ಯೋಜನೆ ಇದು. ಇದಕ್ಕೆ ಪ್ರಯೋಗಾಲಯ, ತಜ್ಞರು, ವೈದ್ಯರನ್ನು ಒಳಗೊಂಡ ಸುಸಜ್ಜಿತ ಕೇಂದ್ರ ಸ್ಥಾಪನೆಗೆ ಶೀಘ್ರದಲ್ಲಿಯೇ ಸರಕಾರ ಅನುಮೋದನೆ ನೀಡಲಿದೆ.

ಬೆಳೆ ನಷ್ಟ ಪರಿಹಾರ ಪ್ರಸ್ತಾವ
ಇತ್ತೀಚಿನ ದಿನಗಳಲ್ಲಿ ನವಿಲು ನಾಡಿಗೆ ಬರುವುದು ಹೆಚ್ಚುತ್ತಿರುವ ಜತೆಗೆ ನವಿಲುಗಳ ಸಂಖ್ಯೆಯೂ ಅಧಿಕಗೊಂಡಿದೆ. ನವಿಲುಗಳಿಂದ ಬೆಳೆ ಹಾನಿಯಾಗುತ್ತಿರುವ ಬಗ್ಗೆ ರೈತರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸದ್ಯ ನವಿಲುಗಳಿಂದಾದ ಬೆಳೆ ಹಾನಿಗೆ ಯಾವುದೇ ಪರಿಹಾರ ಇಲ್ಲ. ಮಂಗಗಳಿಂದ ಎಳನೀರು ನಾಶ ಆಗುತ್ತಿದ್ದು ಇದಕ್ಕೂ ಇದುವರೆಗೆ ಪರಿಹಾರ ಕೊಡುವ ನಿಯಮವಿಲ್ಲ. ಮುಂದೆ ನವಿಲು ಮತ್ತು ಮಂಗಗಳಿಂದ ಆಗುವ ಬೆಳೆ ಹಾನಿಗೂ ಪರಿಹಾರ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಕಾರ್ಕಳದಲ್ಲಿ ವನ್ಯಜೀವಿ ಆಸ್ಪತ್ರೆ
ಕುಂದಾಪುರ, ಉಡುಪಿ, ಮಂಗಳೂರು ಒಳಗೊಂಡು ಕಾರ್ಕಳದಲ್ಲಿ ವನ್ಯಜೀವಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆ ಇದೆ. ವಾಹನ ಢಿಕ್ಕಿ, ವಿದ್ಯುತ್‌ ಅಪಘಾತ, ಬೇಟೆ ಸೇರಿದಂತೆ ಮಾನವ ನಿರ್ಮಿತ ಅಪಘಾತಗಳಿಂದ ವನ್ಯಜೀವಿಗಳು ಗಾಯಗೊಂಡಲ್ಲಿ ಪ್ರಸ್ತುತ ಅವುಗಳ ಆರೈಕೆ, ಚಿಕಿತ್ಸೆಗಾಗಿ ಮಂಗಳೂರಿನ ಪಿಲಿಕುಳ ಕೇಂದ್ರವನ್ನೇ ಆಶ್ರಯಿಸಲಾಗುತ್ತಿದೆ.

Advertisement

ಸೋಲಾರ್‌ ತಡೆಬೇಲಿಗೆ ಸಬ್ಸಿಡಿ
ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಸೋಲಾರ್‌ ಆಧಾರಿತ ವಿದ್ಯುತ್‌ ತಡೆಬೇಲಿಯನ್ನು ಬಳಸಬೇಕು. ಇದರಿಂದ ಜೀವ ಹಾನಿ ಸಂಭವಿಸುವುದಿಲ್ಲ. ಈ ರೀತಿ ತಡೆ ಬೇಲಿಗಳನ್ನು ಅರಣ್ಯದಂಚಿನ ಗ್ರಾಮ ದಲ್ಲಿ ದ್ದವರು ಅಳವಡಿಸಲು ಮುಂದಾ ಗಿದ್ದಾರೆ. ಇದಕ್ಕೆ ಇಲಾಖೆ ವತಿ ಯಿಂದ ಶೇ. 50 ಸಬ್ಸಿಡಿ ನೀಡ ಲಾಗುತ್ತದೆ.

ಕುದುರೆಮುಖ ಹಳ್ಳಿಗಳಲ್ಲಿ ಜಾಗೃತಿ
ಕುದುರೆಮುಖ ಕಾಡು, ಗುಡ್ಡಗಳನ್ನು ಬೆಂಕಿಯಿಂದ ರಕ್ಷಣೆ ಮಾಡಲು ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ಗ್ರಾಮ ಅರಣ್ಯ ಸಮಿತಿಯ ಮೂಲಕ ನಿರಂತರ ಜಾಗೃತಿ ಮೂಡಿಸಿ ಬೆಂಕಿ ಬೀಳದ ಹಾಗೆ ನೋಡಿಕೊಳ್ಳಲಾಗುತ್ತಿದೆ. ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ಸಹಾಯದಿಂದ ಬೆಂಕಿ ಬೀಳುವ ಪ್ರದೇಶವನ್ನು ನಿಖರವಾಗಿ ಗುರುತಿಸಿ ಹಾನಿ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಾಗುತ್ತಿದೆ. ಸಾರ್ವಜನಿಕರಿಗೆ ಕುದುರೆಮುಖದಲ್ಲಿ ಟ್ರಕ್ಕಿಂಗ್‌ಗೆ ಅವಕಾಶವಿದೆ. ಹಾಗೆಯೇ ಅರಣ್ಯದ ಒಳಗೆ ಸಣ್ಣಸಣ್ಣ ಜಲಪಾತಗಳಿದ್ದು, ಅದರ ಸೊಬಗನ್ನು ಸವಿಯಲು ಅವಕಾಶವಿದೆ.

ಸಿಂಗಳೀಕ ಸಂರಕ್ಷಣೆಗೆ ವಿಶೇಷ ಆದ್ಯತೆ
ಜಗತ್ತಿನಲ್ಲಿ ಎಲ್ಲಿಯೂ ಇರದ ನಮ್ಮ ದೇಶದ ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಕಾಣ ಸಿಗುವ ಸಿಂಗಳೀಕ (ಲಯನ್‌ ಟೇಲ್ಡ್‌ ಮಕಾಕ) ಸಂರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಒತ್ತು ನೀಡುತ್ತಿದೆ. ಆಗುಂಬೆ ಭಾಗದಲ್ಲಿ ಸಿಂಗಳೀಕಗಳಿಗೆ ಪ್ರವಾಸಿಗರು ಆಹಾರ ಕೊಡದಂತೆ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದೇವೆ. ರಸ್ತೆ ದಾಟುವ ವೇಳೆ ವಿದ್ಯುತ್‌ಲೈನ್‌ ಬಳಸುವ ಅವುಗಳು ವಿದ್ಯುತ್‌ ಶಾಕ್‌ನಿಂದ ಕೆಳಗೆ ಬೀಳುತ್ತವೆ. ಇದಕ್ಕೆ ಪರ್ಯಾಯವಾಗಿ ಅವುಗಳಿಗೆ ಉಪಯೋಗಕ್ಕೆ ಅನುಕೂಲವಾಗಬಹುದು ಎಂದು ರೋಪ್‌ಗ್ಳನ್ನು ಬಳಕೆ ಮಾಡಿದ್ದೇವೆ. ಕಳೆದ 5 ವರ್ಷಗಳಿಂದ ಅರಣ್ಯ ಇಲಾಖೆ ಈ ಬಗ್ಗೆ ವಿಶೇಷ ನಿಗಾ ವಹಿಸುತ್ತಿದೆ.

3.30 ಲಕ್ಷ ಹೆಕ್ಟೇರ್‌ ಪರಿಭಾವಿತ ಅರಣ್ಯ
ಕುಮ್ಕಿ, ಡೀಮ್ಡ್ ಫಾರೆಸ್ಟ್‌ ಸಹಿತ ಅರಣ್ಯ ಇಲಾಖೆಯ ವ್ಯಾಪ್ತಿಯ 3.30 ಲಕ್ಷ ಹೆಕ್ಟೇರ್‌ ಭೂಮಿಯನ್ನು ಪರಿಭಾವಿತ ಅರಣ್ಯ ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 9.60 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಉಳಿದ 6.30 ಲಕ್ಷ ಹೆಕ್ಟೇರ್‌ ಭೂಮಿಯ ಬಗ್ಗೆ ನ್ಯಾಯಾಲಯಕ್ಕೆ ಪುನಃ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಈ ಬಗ್ಗೆ ಕಂದಾಯ ಅಥವಾ ಅರಣ್ಯ ಇಲಾಖೆ ನಡುವೆ ಯಾವುದೇ ಸ್ಪಷ್ಟ ತೀರ್ಮಾನ ಆಗಿಲ್ಲ. ಸಾಮಾಜಿಕ ಅರಣ್ಯ ಪರಿಕಲ್ಪನೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ನಾಡಿನಲ್ಲಿ ಕಾಡುಪ್ರಾಣಿಗಳು
ಚಿರತೆ, ಕಾಡುಕೋಣ, ಮುಳ್ಳುಹಂದಿ ಸಹಿತ ವಿವಿಧ ಕಾಡುಪ್ರಾಣಿಗಳು ಇತ್ತೀಚಿನ ದಿನಗಳಲ್ಲಿ ನಾಡಿಗೆ ಬರುತ್ತಿವೆ. ಆಹಾರ ಹುಡುಕಿಕೊಂಡು ಬರುವುದು ಅಥವಾ ಅರಣ್ಯದಲ್ಲಿ ಅವುಗಳ ಜೀವನ ಕ್ರಮಕ್ಕೆ ಸಮಸ್ಯೆಯಾದಾಗಲೂ ನಾಡಿಗೆ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಕಾಡುಪ್ರಾಣಿಗಳಿಗೆ ಹಿಂಸೆ ನೀಡುವುದು ಅಥವಾ ಭಯಭೀತರಾಗುವ ಬದಲು ಅರಣ್ಯ ಅಥವಾ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲು ಸಹಕಾರ ನೀಡಬೇಕು. ನಾಡಿಗೆ ಬಂದಿರುವ ಅನೇಕ ಚಿರತೆಗಳನ್ನು ಕಾಡಿಗೆ ಬಿಟ್ಟಿದ್ದೇವೆ. ಸಾರ್ವಜನಿಕರ ಸಹಕಾರ ಇದರಲ್ಲಿ ಅತೀ ಆವಶ್ಯಕವಾಗಿದೆ.

ಆನೆ ದಾಳಿ ತಡೆಗೆ ಕ್ರಮ
ಆನೆ ದಾಳಿಗೆ ಸಂಬಂಧಿಸಿದಂತೆ ನೀಡುತ್ತಿದ್ದ ಪರಿಹಾರ ತಕ್ಕ ಮಟ್ಟಿಗೆ ಏರಿಕೆಯಾಗಿದೆ. ರೈಲು ಹಳಿಗಳನ್ನು ಬಳಸಿ ತಡೆ ಬೇಲಿ ನಿರ್ಮಾಣ ದಕ್ಷಿಣ ಕನ್ನಡದ ಭೂ ವಿನ್ಯಾಸಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ ಬದಲಿ ಪ್ರಸ್ತಾವನೆಗಳು ಸರಕಾರದ ಪರಿಶೀಲನೆಯ ಹಂತದಲ್ಲಿದೆ. ಕಳೆದ ಸಾಲಿನಲ್ಲಿ 23 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಆನೆ ದಾಳಿಗೆ ಸಂಬಂಧಿಸಿ ಜೀವಹಾನಿ ಸಂಭವಿಸಿದರೆ 4ರಿಂದ 5 ಲಕ್ಷ ರೂ. ಪರಿಹಾರ ಒದಗಿಸ ಲಾಗುತ್ತದೆ. ಈ ವರ್ಷ ಆನೆ ಕಂದಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಬಿ.ಸಿ.ರೋಡ್‌ ಹೆದ್ದಾರಿ ಬದಿಯಲ್ಲಿ ಗಿಡಗಳ ನಾಟಿ
ಕಳೆದ ವರ್ಷ ಅನುದಾನ ಬಿಡುಗಡೆಯಾಗದೆ ಇದ್ದು, ಆದರೂ ಸ್ಥಳೀಯ ಅಧಿಕಾರಿಗಳು ಎನ್‌ಜಿಒಗಳ ಸಹಕಾರ ಪಡೆದು ಸಾಕಷ್ಟು ಗಿಡಗಳನ್ನು ನಾಟಿ ಮಾಡಿದ್ದಾರೆ. ಅಲ್ಲಿ ಗಿಡಗಳ ನಾಟಿಗಾಗಿ ಈಗಾಗಲೇ ಮೇಲಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಪ್ರಸ್ತುತ ಅಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಬೇಕಿದೆ. ಆದರೆ ಅಲ್ಲಿ ಎಲ್ಲ ಗಿಡಗಳ ನಾಟಿ ಸಾಧ್ಯವಿಲ್ಲ. ಬೇರೆ ಸ್ಥಳಗಳನ್ನು ಉಪಯೋಗಿಸಿಕೊಂಡು ಗಿಡಗಳ ನಾಟಿ ಕಾರ್ಯ ಮಾಡಲಿದ್ದೇವೆ.

ಗಿಡ ನಾಟಿಗೆ ಪರ್ಯಾಯ ಕ್ರಮಗಳೇನು?
ಅರಣ್ಯ ಇಲಾಖೆ ಗಿಡ ನೆಡಲು ರಾಜ್ಯ ಸರಕಾರದಿಂದ ಸಂಪೂರ್ಣ ಅನುದಾನ ಕಡಿತಗೊಂಡಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ಸರಕಾರದಿಂದ ಬರುವ ಅನುದಾನ ತುಸು ಕಡಿಮೆಯಾಗಿದೆ. ಆದರೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ಖಾಸಗಿ ನರ್ಸರಿಗಳಿಂದ ಗಿಡ ಖರೀದಿ ಮಾಡಿ ನಾಟಿ ಮಾಡುತ್ತಿದ್ದಾರೆ. .

ಅಕೇಶಿಯಾದ ಬದಲು ಹಣ್ಣಿನ ಗಿಡಗಳ ನಾಟಿ
ಅಕೇಶಿಯಾ ಗಿಡಗಳ ನೆಡುತೋಪು ಬೆಳೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಉರುವಲು ಉದ್ದೇಶಕ್ಕೆ ಅಕೇಶಿಯಾ ಮರಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಈಗ ಕಟ್ಟಿಗೆ ಬಳಕೆ ಕಡಿಮೆಯಾಗಿರುವುದರಿಂದ ಅದನ್ನು ಕೂಡ ನಿಲ್ಲಿಸಲಾಗಿದೆ. ಈಗ ಇರುವ ಅಕೇಶಿಯಾ ಮರಗಳ ಕಟಾವು ಮಾಡಿದ ಅನಂತರ ಆ ಜಾಗದಲ್ಲಿ ಹಣ್ಣು ಹಂಪಲಿನ ಗಿಡ ಬೆಳೆಸಲಾಗುವುದು.

ಚಾರ್ಮಾಡಿ, ಶಿರಾಡಿ ಘಾಟಿ ಪ್ರದೇಶದ ಅರಣ್ಯ ಭಾಗದಲ್ಲಿ ಬೆಂಕಿ ಅನಾಹುತ ತಡೆಗೆ ಕ್ರಮ
ಹುಲ್ಲುಗಾವಲುಗಳಿರುವ ಘಾಟಿ ಪ್ರದೇಶದಲ್ಲಿ ಬೇಸಗೆಯಲ್ಲಿ ಬೆಂಕಿ ಬೀಳುತ್ತದೆ. ಅದನ್ನು ಸದ್ಯ ನಾವು ಸಿಬಂದಿಯನ್ನು ಬಳಸಿ ಬೆಂಕಿ ನಂದಿಸುತ್ತೇವೆ. ವಿಶಾಲವಾದ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ ಬಳಸಿ ನೀರು ಚಿಮುಕಿಸಿ ಬೆಂಕಿ ಆರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ಆಗಿದೆ. ಬನ್ನೇರುಘಟ್ಟದಂತಹ ಕಡೆಗಳಲ್ಲಿ ಇದು ಸಹಕಾರಿಯಾಗಬಹುದು. ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ ಇಲಾಖೆಯಿಂದ ಉಪಗ್ರಹ ಬಳಸಿ ಅರಣ್ಯದ ಮೇಲೆ ಸತತ ನಿಗಾ ಇರಿಸಲಾಗುತ್ತದೆ. ಕಾಡಿನಲ್ಲಿ ಬೆಂಕಿ ಪತ್ತೆಯಾದಾಗ ಹಿಂದಿಗಿಂತಲೂ ಬೇಗ ನಮಗೆ ಕಂಡುಹಿಡಿಯಬಹುದು, ಹಾಗಾಗಿ ಅರಣ್ಯ ನಾಶ ಕಡಿಮೆಯಾಗುತ್ತದೆ ಮತ್ತು ಪರಿಣಾಮಕಾರಿಯಾಗಿ ಬೆಂಕಿ ನಂದಿಸಬಹುದಾಗಿದೆ.

ಅಪಾಯಕಾರಿ ಮರಗಳ ತೆರವು ವಿಧಾನ ಹೇಗೆ?
ಖಾಸಗಿ ಜಾಗದಲ್ಲಿ ಅಪಾಯಕಾರಿ ಮರಗಳಿದ್ದರೆ ಅವುಗಳನ್ನು ತೆರವುಗೊಳಿಸಲು ಸಂಬಂಧ ಪಟ್ಟ ಪ್ರದೇಶದ ವ್ಯಾಪ್ತಿಗೆ ಬರುವ ಸ್ಥಳೀಯಾಡಳಿತ ಅಥವಾ ನಗರಾಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಮೆಸ್ಕಾಂ ಅಥವಾ ಲೋಕೋಪ ಯೋಗಿ ಇಲಾಖೆಗೆ ಮತ್ತು ಬಳಕೆದಾರ ಇಲಾಖೆಗಳಿಗೆ ಸಂಬಂಧಿಸಿದಂತೆ ಅವರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರೆ ಅವರಿಗೆ ನೇರವಾಗಿ ಅನುಮತಿ ನೀಡಲಾಗುತ್ತದೆ. ಇವುಗಳಿಗೆ ಸಂಬಂಧಪಡದ ಪ್ರಕರಣಗಳಿದ್ದರೆ ಅರಣ್ಯ ಇಲಾಖೆಯೇ ಈ ಮರಗಳನ್ನು ತೆರವುಗೊಳಿಸುತ್ತದೆ.

ಮರ ಕಡಿಯಲು ಅನುಮತಿ ಇದೆಯೋ- ಇಲ್ಲವೋ?
ಅಪಾಯಕಾರಿ ಹಾಗೂ ಗೃಹೋಪ ಯೋಗಿಯಾಗಿ ಒಂದೆರಡು ಮರ ಕಡಿಯಲು ಕಠಿನ ನಿಯಮಗಳಿಲ್ಲ. ಅರಣ್ಯ ಇಲಾಖೆಗೆ ಲಿಖೀತ ಮಾಹಿತಿ ನೀಡಿದರೆ ಆಯಿತು. 2.8 ಕ್ಯುಬಿಕ್‌ ಮೀಟರ್‌ ಮರ, 100 ಕಂಬಗಳು, 15 ಕ್ಯುಬಿಕ್‌ ಮೀ. ಕಟ್ಟಿಗೆಯನ್ನು ಪಟ್ಟಾ ಜಾಗದಿಂದ ಕಡಿಯಬಹುದು ಎಂದು ನಿಯಮ ಇದೆ. ಪಹಣಿ ಪತ್ರಿಕೆಯಲ್ಲಿ ಖಾಸಗಿ ಜಾಗ ಎಂದೂ, ಮರಗಳಿವೆ ಎಂದೂ ಉಲ್ಲೇಖ ಇರಬೇಕು. ಹೆಚ್ಚುವರಿ ಮರಗಳನ್ನು ಕಡಿಯಬೇಕಾದರೆ ವಲಯ ಅರಣ್ಯಾಧಿಕಾರಿಗೆ ಮನವಿ ನೀಡಬೇಕು. ಕಂದಾಯ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ, ಗಡಿಗುರುತು ಮಾಡಿ, ಅಲ್ಲಿರುವ ಮರಗಳ ಲೆಕ್ಕಾಚಾರ ನಮೂದಿಸಿ, ನಕ್ಷೆ ಮಾಡಿ ಕಂದಾಯ ಇಲಾಖೆಗೆ ನೀಡಲಾಗುತ್ತದೆ. 50 ಸಾವಿರ ರೂ.ಮೌಲ್ಯದವರೆಗೆ ಎಸಿ, ಹೆಚ್ಚಿನ ಮೌಲ್ಯಕ್ಕೆ ಡಿಸಿಯವರು ಸ್ವಾಧೀನತ ಪತ್ರ ನೀಡಬೇಕು. ಅದರ ಆಧಾರದಲ್ಲಿ ಅರಣ್ಯ ಇಲಾಖೆ 1 ಎಕ್ರೆಯಲ್ಲಿ 20 ಮರಗಳನ್ನು ಉಳಿಸಿಕೊಳ್ಳಬೇಕು ಎಂಬ ಷರತ್ತಿನಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡುತ್ತದೆ. ಕಂದಾಯ ಇಲಾಖೆ ಸ್ವಾಧೀನತ ಪತ್ರ ನೀಡಿದ ಬಳಿಕ ಅರಣ್ಯ ಇಲಾಖೆ ಅನುಮತಿ ದೊರೆಯುತ್ತದೆ. ಇಂತಹ ಯಾವುದೇ ಪ್ರಕ್ರಿಯೆಗೆ ಅರಣ್ಯ ಇಲಾಖೆಯಲ್ಲಿ ಶುಲ್ಕ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next