ಉಡುಪಿ: ಒಂದು ಶಾಲೆ ಸುತ್ತಲೂ ಸ್ವಚ್ಛಂದ ಪರಿಸರ. ತರಕಾರಿ, ಔಷಧೀಯ ಗಿಡಗಳು… ಶಾಲೆಯೊಳಗೆ ಸೋಲಾರ್, ಗೋಮೂತ್ರದಿಂದ ತಿರುಗುವ ಗಂಜಲ ಗಡಿಯಾರ. ಇದು ಕಂಡು ಬರುವುದು ಕಲ್ಯಾಣಪುರದ ಡಾ| ಟಿಎಂಎಪೈ ಪ್ರೌಢಶಾಲೆಯಲ್ಲಿ.
‘ಜಿಲ್ಲಾ ಪರಿಸರ ಮಿತ್ರ ಶಾಲೆ’ ಪ್ರಶಸ್ತಿ ಪಡೆದ ಶಾಲೆ ಇದು. ಕಲಿಕೆಯೊಂದಿಗೆ ಪರಸರ ಕಾಳಜಿಗೂ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. 8ರಿಂದ 10ನೇ ತರಗತಿ ಇಲ್ಲಿದ್ದು, 151 ಮಂದಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ನಡೆಯುವ ಕಾರ್ಯಕ್ರಮಗಳು ಪರಿಸರ ಪೂರಕವಾಗಿರುವುದು ಮತ್ತೂ ವಿಶೇಷ.
ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಆಚರಣೆ ಸಂದರ್ಭ 1987ರಲ್ಲಿ ಈ ಶಾಲೆಯನ್ನು ಆರಂಭಿಸ ಲಾಯಿತು. ಪ್ರಾರಂಭದಲ್ಲಿ 54 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು.
ವಿಶೇಷತೆ
ಇಲ್ಲಿನ ವಿದ್ಯಾರ್ಥಿಗಳು ಸಮೀಪದ ಮನೆಗಳಿಗೆ ಹೋಗಿ ಪರಿಸರ ಜಾಗೃತಿಯನ್ನು ಮಾಡುತ್ತಿದ್ದಾರೆ. ಒಣ ಹಾಗೂ ಹಸಿ ಕಸವನ್ನು ವಿಂಗಡಿಸುವ ಕೆಲವೂ ಇಲ್ಲಿ ನಡೆಯುತ್ತಿದೆ. ತ್ಯಾಜ್ಯ ನೀರು ಹರಿದು ಹೊಗುವ ಜಾಗದಲ್ಲಿ ಬಾಳೆಗಿಡ ನೆಟ್ಟಿದ್ದು ದುರ್ವಾಸನೆ ತಡೆಗೆ ಉತ್ತೇಜನ ನೀಡಲಾಗಿದೆ. ಇಲ್ಲಿರುವ ಸ್ಮಾರ್ಟ್‌ಕ್ಲಾಸ್‌ಗೆ ಸೋಲಾರ್ ದೀಪ ಅಳಡಿಸಲಾಗಿದೆ. ಶಾಲೆಯ ಎಲ್ಲ ಕಡೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ.