ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯ ಶಾಸಕರನ್ನು ಖರೀದಿಸಲು ಯತ್ನಿಸಿದೆ ಎಂಬ ಆರೋಪವನ್ನು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಗುರುವಾರ(ಅಕ್ಟೋಬರ್ 27) ಅಲ್ಲಗಳೆದಿದ್ದು, ಈ ಇಡೀ ನಾಟಕದ ಸೂತ್ರಧಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎಂದು ದೂರಿದ್ದಾರೆ.
ಇದನ್ನೂ ಓದಿ:10 ಉಗ್ರರ ಖಾತೆಗಳ ಮಾಹಿತಿಯ ವರದಿ ನೀಡಿ : ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ
ಫಾರ್ಮ್ ಹೌಸ್ ಮೇಲೆ ದಾಳಿ ನಡೆಸುವ ಹುನ್ನಾರ ನಡೆಸಿ, ಹಾಲಿ ನ್ಯಾಯಾಧೀಶರದಿಂದ ತನಿಖೆ ನಡೆಸುವ ಬೇಡಿಕೆ ಇಟ್ಟಿರುವುದಾಗಿ ಸಂಜಯ್ ತಿಳಿಸಿದ್ದಾರೆ. ಒಂದು ವೇಳೆ ಕೆಸಿಆರ್ ಇದರ ಸೂತ್ರಧಾರಿ ಅಲ್ಲ ಎಂದಾದರೆ ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಬಂದು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಕೆಸಿಆರ್ ಕಥೆ, ಚಿತ್ರಕಥೆ, ನಿರ್ದೇಶನದ ಮೇರೆಗೆ ಮೋಯಿನಾಬಾದ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ನಗೆಪಾಟಿಲಿಗೀಡಾಗಿರುವುದಾಗಿ ಬಂಡೆ ಸಂಜಯ್ ವ್ಯಂಗ್ಯವಾಡಿದ್ದು, ಇದು ಟಿಆರ್ ಎಸ್ ನ ಫಾರ್ಮ್ ಹೌಸ್, ಟಿಆರ್ ಎಸ್ ದೂರು ನೀಡುವ ಮೂಲಕ ಟಿಆರ್ ಎಸ್ ಕ್ರಿಮಿನಲ್ಸ್ ಎಂಬಂತಾಗಿದೆ ಎಂದು ಆರೋಪಿಸಿದ್ದಾರೆ.
ಡೆಕ್ಕನ್ ಕಿಚನ್ ಹೋಟೆಲ್ ನಲ್ಲಿನ ಕಳೆದ 3-4 ದಿನಗಳ ಸಿಸಿಟಿವಿ ಫೂಟೇಜ್ ಅನ್ನು ಪೂರ್ಣ ಬಿಡುಗಡೆ ಮಾಡುವ ಧೈರ್ಯ ಇದೆಯಾ ಎಂದು ಸಂಜಯ್ ಟಿಆರ್ ಎಸ್ ಗೆ ಪ್ರಶ್ನಿಸಿದ್ದಾರೆ. ಮೂರು ದಿನಗಳ ಕಾಲ ಟಿಆರ್ ಎಸ್ ಮುಖಂಡರು ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿತ ಶಾಸಕರು ಮೂರು ದಿನ ಪ್ರಗತಿ ಭವನದಲ್ಲಿ ಠಿಕಾಣಿ ಹೂಡಿದ್ದರು. ಹೀಗಾಗಿ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡಿದರೆ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ.